2 ವರ್ಷದ ಮಗು ಅನಾಮಾನಸ್ಪದ ಸಾ*ವು: ಲಿವ್ ಇನ್‌ನಲ್ಲಿದ್ದ ಅಪ್ಪ-ಅಮ್ಮನ ವಿರುದ್ಧ ದೂರು

Bengaluru Crime News: ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ಎರಡು ವರ್ಷದ ಹೆಣ್ಣುಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಲಿವ್-ಇನ್ ಸಂಬಂಧದಲ್ಲಿದ್ದ ಪೋಷಕರ ವಿರುದ್ಧ ಅನುಮಾನ ವ್ಯಕ್ತವಾಗಿದೆ. ಮೃತ ಮಗುವನ್ನು ಕಾರ್ಲೆಟ್ ಡೈಸಿ ಎಂದು ಗುರುತಿಸಲಾಗಿದೆ.

ಮಗುವಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ. ಆದರೆ, ಮಗುವಿನ ತಾಯಿಯ ಸ್ನೇಹಿತೆ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿ, ತಾಯಿ ಮಗುವಿಗೆ ಪದೇಪದೇ ಹಲ್ಲೆ ನಡೆಸುತ್ತಿದ್ದಳು. ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದು, ಸಾವಿನ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿದ್ದಾರೆ.

ಇತ್ತ, ಮಗುವಿನ ತಂದೆ ಜೇಸನ್ ಆಂಥೋನಿ, “ಹುಟ್ಟಿನಿಂದಲೇ ಮಗುವಿಗೆ ಉಸಿರಾಟದ ಸಮಸ್ಯೆ ಇತ್ತು. ಊಟ ಮಾಡುವ ವೇಳೆ ಆಹಾರ ಉಸಿರಾಟದ ಕೊಳವೆಗೆ ಹೋಗಿದ್ದರಿಂದ ಈ ಘಟನೆ ಸಂಭವಿಸಿದೆ. ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ, ತಾಯಿ ರೋಸ್ಲಿನ್, ಔಷಧಿ ನೀಡಿದ ಬಳಿಕ ಮಗುವಿಗೆ ಪ್ಯಾನಿಕ್ ಅಟ್ಯಾಕ್ ಆಗಿ ಆರೋಗ್ಯ ಹದಗೆಟ್ಟಿತ್ತು ಎಂದು ವಿಭಿನ್ನ ಹೇಳಿಕೆ ನೀಡಿದ್ದಾರೆ.

ಪೋಷಕರ ಹೇಳಿಕೆಗಳು ಪರಸ್ಪರ ಭಿನ್ನವಾಗಿರುವುದರಿಂದ ಪ್ರಕರಣ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು, ಪೋಷಕರು ಹಾಗೂ ದೂರುದಾರರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮಗುವಿನ ಸಾವಿಗೆ ನಿಖರ ಕಾರಣ ಹಾಗೂ ಯಾರಾದರೂ ನಿರ್ಲಕ್ಷ್ಯ ಅಥವಾ ಹಲ್ಲೆ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ.

About The Author