ಒಡಿಶಾ: ಕಳೆದ 48 ಗಂಟೆಗಳಲ್ಲಿ ಮೂವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕಟಕ್ ನಲ್ಲಿ ನಡೆದಿದ್ದು, ಸೈಕೋಪಾತ್ ಹಂತಕನೇ ಈ ಕೃತ್ಯವೆಸಗಿರೋ ಸಂಶಯ ಮೂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಟಕ್ ನಗರದಲ್ಲಿ ಕಳೆದೆರಡು ದಿನಗಳಿಂದೀಚೆಗೆ 3 ಪ್ರತ್ಯೇಕ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಮೂರೂ ಕೊಲೆಗಳು ಒಂದೇ ರೀತಿ ನಡೆದಿರೋದು ಇದೀಗ ಸೈಕೋಪಾತ್ ಕಿಲ್ಲರ್ ಕೃತ್ಯವೆಂಬ ಸಂಶಯ ಮೂಡಿಸಿದೆ. ಮಂಗಳವಾರ ಬೆಳಗ್ಗೆ ರಾಣಿಹತ್ ಸೇತುವೆ ಮೇಲೆ ಮೃತದೇಹವೊಂದು ಪತ್ತೆಯಾಗಿತ್ತು. ಅಲ್ಲಿ ಕೊಲೆಯಾಗಿದ್ದ ನಿರಾಶ್ರಿತನ ಕತ್ತು ಸೀಳಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈಯ್ಯಲಾಗಿತ್ತು. ಇನ್ನು ಮರುದಿನ ಬುಧವಾರ ಬೆಳಗ್ಗೆ ಎಸ್ ಸಿಬಿ ಮೆಡಿಕಲ್ ಕಾಲೇಜು ಬಳಿ ಮತ್ತೊಂದು ಕೊಲೆ ನಡೆದಿದ್ದು ಅಂದಿನ ದಿನವೇ ಸಮೀಪತ ಓಎಂಪಿ ಮಾರ್ಕೆಟ್ ನಲ್ಲಿ ನಿರಾಶ್ರಿತರ ಹತ್ಯೆಯಾಗಿತ್ತು. ಆಶ್ಚರ್ಯ ಅಂದ್ರೆ ಈ ಮೂರೂ ಕೊಲೆಗಳನ್ನು ಒಂದೇ ರೀತಿ ಮಾಡಲಾಗಿದ್ದು, ಕತ್ತು ಸೀಳಿ, ತಲೆ ಮೇಲೆ ಕಲ್ಲು ಎಸೆದು ಕೊಂದಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಹೀಗಾಗಿ ಇದು ಸೈಕೋಪಾತ್ ಕಿಲ್ಲರ್ ನ ಕೈವಾಡ ಅನ್ನೋ ಅನುಮಾನವನ್ನು ಪೊಲೀಸ್ ವ್ಯಕ್ತಪಡಿಸಿದ್ದು, ಆತನ ಶೋಧಕ್ಕಾಗಿ ವಿಶೇಷ ತಂಡವನ್ನು ಪೊಲೀಸ್ ಇಲಾಖೆ ರಚಿಸಿದೆ. ಇನ್ನು ನಿರಾಶ್ರಿತರೇ ಈ ಸೈಕೋಪಾತ್ ಕಿಲ್ಲರ್ ಟಾರ್ಗೆಟ್ ಆಗಿದ್ದು, ನಗರದ ರಸ್ತೆ ಮೇಲೆ ಮಲಗುವ ನಿರಾಶ್ರಿತರು ಮತ್ತು ಭಿಕ್ಷುಕರಿಗೆ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ಪೊಲೀಸರು ಸೂಚಿಸಿದ್ದಾರೆ.