ತುಮಕೂರಿನಲ್ಲಿ 39,000 ಅರ್ಜಿ ಬಾಕಿ; ಕಂಗಾಲಾದ ರೈತರು!

ರೈತರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಭೂ ಮಾಪಕರು ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದು, ಸಾವಿರಾರು ಅರ್ಜಿಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ.

ಸೇವೆ ಕಾಯಮಾತಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರು ಕಳೆದ ಫೆಬ್ರುವರಿ ತಿಂಗಳಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದಾಗಿ ರೈತರ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸದಾ ಜನಸಂದಣಿ ಇರುತ್ತಿದ್ದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಬಿಕೋ ಎನ್ನುತ್ತಿದ್ದ ದೃಶ್ಯಗಳು ಶುಕ್ರವಾರ ಕಂಡು ಬಂದವು.

ಜಮೀನಿನ ಹದ್ದುಬಸ್ತು, ಪೋಡಿ, 11 ಇ, ಭೂ ಪರಿವರ್ತನೆ ಒಳಗೊಂಡಂತೆ ಒಟ್ಟು 39,317 ಅರ್ಜಿಗಳು ಬಾಕಿ ಇವೆ. ಭೂ ಮಾಪಕರು ಸಂಪೂರ್ಣವಾಗಿ ಕೆಲಸ ನಿಲ್ಲಿಸಿದ್ದು, ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಹ ತೊಡಕಾಗಿದೆ. ಪ್ರತಿಯೊಂದು ಕೆಲಸಕ್ಕೆ 11 ಇ ಅನಿವಾರ್ಯವಾಗಿದೆ. ಹೀಗಾಗಿ ರೈತರ ಯಾವುದೇ ಕೆಲಸ ಸಕಾಲಕ್ಕೆ ಆಗುತ್ತಿಲ್ಲ.

ತುಮಕೂರು ಜಿಲ್ಲೆಯಾದ್ಯಂತ ಒಟ್ಟು 210 ಸರ್ಕಾರಿ ಭೂ ಮಾಪಕರು ಕೆಲಸ ಮಾಡುತ್ತಿದ್ದು, 37 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪರವಾನಗಿ ಪಡೆದ 380 ಮಂದಿ ಭೂ ಮಾಪಕರು ವಿವಿಧ ತಾಲ್ಲೂಕುಗಳಲ್ಲಿದ್ದಾರೆ. ‘ಸರ್ಕಾರಿ ಭೂ ಮಾಪಕರು ನಿರ್ವಹಿಸುವ ಎಲ್ಲ ತರಹದ ಕಾರ್ಯ ನಾವು ಮಾಡುತ್ತಿದ್ದೇವೆ. ನಮ್ಮನ್ನು ಸರ್ಕಾರಿ ಹುದ್ದೆಯಲ್ಲಿ ವಿಲೀನಗೊಳಿಸಬೇಕು ಎಂಬ ಬೇಡಿಕೆಯನ್ನು ಪರವಾನಗಿ ಪಡೆದ ಭೂ ಮಾಪಕರು ಮುಂದಿಟ್ಟಿದ್ದಾರೆ.

ಜಮೀನು ಸರ್ವೆಗೆ ಬೇಸಿಗೆ ಸೂಕ್ತ ಕಾಲ. ಉಳಿದ ಸಮಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೇಸಿಗೆಯಲ್ಲಿ ಒಂದಷ್ಟು ಬಿಡುವಿನಲ್ಲಿ ಇರುತ್ತಾರೆ. ಭೂಮಿ ಅಳತೆ, ಪರಿವರ್ತನೆಗೆ ಇದು ಒಳ್ಳೆಯ ಸಮಯ. ಇಂತಹ ವೇಳೆಯಲ್ಲಿಯೇ ಭೂಮಾಪಕರು ಸಿಗುತ್ತಿಲ್ಲ. ಇದು ಕೃಷಿ ಜತೆಗೆ ಇತರೆ ವಲಯಗಳಿಗೂ ಪೆಟ್ಟು ಕೊಟ್ಟಿದೆ.

ವರದಿ : ಲಾವಣ್ಯ ಅನಿಗೋಳ

About The Author