ಬೆಲೆ ಏರಿಕೆಯ ‘ಬಾದ್‌ಷಾ’ ಸಿದ್ದರಾಮಯ್ಯರಿಂದ ಕನ್ನಡಿಗರಿಗೆ ಮತ್ತೊಂದು ವಿದ್ಯುತ್ ಶಾಕ್!: ಆರ್.ಅಶೋಕ್

Political News: ಗೃಹಜ್ಯೋತಿ ಮೂಲಕ ಕಡಿಮೆ ಯೂನಿಟ್ ಬಳಸುವವರಿಗೆ ಫ್ರೀ ವಿದ್ಯುತ್ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಯೋಜನೆ ಜಾರಿ ಮಾಡಿತ್ತು. ಆದ್ರೆ ಇದೀಗ ವಿದ್ಯುತ್ ದರ ಏರಿಸಿ, ಜನರಿಗೆ ಶಾಕ್ ನೀಡಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ನಡಿಗರನ್ನು ಮತ್ತೊಮ್ಮೆ ಸುಲಿಗೆ ಮಾಡಲು ಹೊರಟಿದೆ. ಅಧಿಕಾರಕ್ಕೆ ಬರುವ ಮುನ್ನ “200 ಯೂನಿಟ್ ವಿದ್ಯುತ್ ಫ್ರೀ” ಎಂದು ಬಣ್ಣಬಣ್ಣದ ಮಾತುಗಳನ್ನಾಡಿ, ಜನರನ್ನು ನಂಬಿಸಿ ದ್ರೋಹ ಮಾಡಿರುವ ಈ ಸರ್ಕಾರ ಪದೇ ಪದೇ ವಿದ್ಯುತ್ ದರ ಏರಿಸುವ ಮೂಲಕ ಕನ್ನಡಿಗರ ಜೇಬಿಗೆ ಕನ್ನ ಹಾಕುವುದನ್ನೇ ಮುಖ್ಯ ಅಜೆಂಡಾ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಈ ದರ ಏರಿಕೆಯನ್ನು 2025ರ ಏಪ್ರಿಲ್‌ ತಿಂಗಳಿನಿಂದ ಪೂರ್ವಾನ್ವಯವಾಗುವ ನಿರ್ಧಾರ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಗೆ ಸ್ಪಷ್ಟ ನಿದರ್ಶನ.

ಗೃಹಲಕ್ಷ್ಮಿ ಯೋಜನೆಯಡಿ ಒಂದು ಕೈಯಲ್ಲಿ ಹಣ ಕೊಟ್ಟಂತೆ ನಾಟಕವಾಡಿ, ಕರೆಂಟ್ ಬಿಲ್ ಏರಿಸುವ ಮೂಲಕ ಮತ್ತೊಂದು ಕೈಯಲ್ಲಿ ಜನರ ರಕ್ತ ಹೀರುತ್ತಿರುವುದು ಈ ಸರ್ಕಾರದ ಅಸಲಿ ಮುಖ. ಸ್ಮಾರ್ಟ್ ಮೀಟರ್ ಅಳವಡಿಕೆಯ ಹೆಸರಿನಲ್ಲಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳ ಹಗಲು ದರೋಡೆ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರ, ಈಗ ಮತ್ತೊಂದು ದರ ಏರಿಕೆಯ ಮೂಲಕ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಿದ್ದರೂ, ಬೆಲೆ ಏರಿಕೆ ಮಾಡುವಲ್ಲಿ ಮಾತ್ರ ಈ ಸರ್ಕಾರ ನಂಬರ್ ಒನ್ ಸ್ಥಾನದಲ್ಲಿದೆ. ಇದು ಕೇವಲ ಬೆಲೆ ಏರಿಕೆಯಲ್ಲ, ಇದು ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ದೊಡ್ಡ ವಂಚನೆ.

ಬೆಲೆ ಏರಿಕೆಯೇ ಕಾಂಗ್ರೆಸ್ಸಿನ 6ನೇ ಗ್ಯಾರಂಟಿ ಎಂದು ಇಡೀ ರಾಜ್ಯಕ್ಕೆ ಈಗ ಮನವರಿಕೆಯಾಗಿದೆ. ಈ ದರ ಏರಿಕೆಯ ನಿರ್ಧಾರವನ್ನು ಕೂಡಲೇ ಕೈಬಿಡದಿದ್ದರೆ, ಕನ್ನಡಿಗರು ನಿಮ್ಮ ಈ ಭ್ರಷ್ಟ ಮತ್ತು ಜನವಿರೋಧಿ ಆಡಳಿತಕ್ಕೆ ತಕ್ಕ ಪಾಠ ಕಲಿಸುವುದು ಖಂಡಿತ. ರಾಜ್ಯದ ಜನತೆ ದಂಗೆ ಏಳುವ ಮುನ್ನ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಲಿ ಎಂದು ಆರ್.ಅಶೋಕ್ ಎಚ್ಚರಿಸಿದ್ದಾರೆ.

About The Author