ಬನ್ನೇರುಘಟ್ಟಕ್ಕೆ 4 ಆಫ್ರಿಕನ್ ಚೀತಾಗಳ ಎಂಟ್ರಿ!

ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ನಾಲ್ಕು ಚೀತಾಗಳನ್ನು ಸ್ವಾಗತಿಸಿದರು. ಕಲ್ಬುರ್ಗಿ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ಸಚಿವರು, ನೇರವಾಗಿ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ Biological Park ಗೆ ತರಲಾಗಿರುವ ಈ ವಿದೇಶಿ ಅತಿಥಿಗಳನ್ನು ಬರಮಾಡಿಕೊಂಡರು.

ಚೀತಾಗಳಿಗೆ ಹವಾಮಾನ ಮತ್ತು ಪರಿಸರ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಕ್ವಾರಂಟೈನ್ ವ್ಯವಸ್ಥೆ, 30 ದಿನಗಳ ನಿಯೋಜಿತ ಆಹಾರ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಾಣಿಗಳನ್ನ ಸುರಕ್ಷಿತವಾಗಿ ಬನ್ನೇರುಘಟ್ಟ ಜೀವ ವೈವಿಧ್ಯ ಉದ್ಯಾನಕ್ಕೆ ಸಾಗಿಸುವ ವ್ಯವಸ್ಥೆಯನ್ನೂ ಪರಿಶೀಲಿಸಿದರು.

ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಕಂಡುಬಂದಿದ್ದ ಚೀತಾಗಳು ಈಗ ಸಂಪೂರ್ಣವಾಗಿ ಅಳಿದು ಹೋಗಿರುವ ಹಿನ್ನೆಲೆಯಲ್ಲಿ, ಕನಿಷ್ಠ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ವನ್ಯಜೀವಿಗಳನ್ನು ನೋಡುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಪ್ರೊಜೆಕ್ಟ್ ಅಡಿಯಲ್ಲಿ 2022ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು. ಆದರೆ ಹವಾಮಾನ ವೈಪರೀತ್ಯ, ಆರೋಗ್ಯ ಸಮಸ್ಯೆಗಳು ಮತ್ತು ಪರಸ್ಪರ ಕಾಳಗಗಳಿಂದ ಹಲವು ಚೀತಾಗಳು ಸಾವನ್ನಪ್ಪಿದ ಹಿನ್ನೆಲೆ, ಈ ಬಾರಿ ಹೆಚ್ಚಿನ ಜಾಗ್ರತೆ ವಹಿಸಲಾಗಿದೆ.

ಈ ಹಿನ್ನೆಲೆ, ಬನ್ನೇರುಘಟ್ಟದಲ್ಲಿ ಚೀತಾಗಳ ಸಂರಕ್ಷಣೆ ಮತ್ತು ಸುರಕ್ಷತೆಗೆ ಅರಣ್ಯ ಇಲಾಖೆ ವಿಶೇಷ ಆದ್ಯತೆ ನೀಡಿದ್ದು, ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ವರದಿ : ಲಾವಣ್ಯ ಅನಿಗೋಳ

About The Author