Saturday, April 12, 2025

Latest Posts

ನಕಲಿ ದಾಖಲೆ ಸೃಷ್ಟಿಸಿ ಭೋವಿ ನಿಗಮದಲ್ಲಿ 47 ಕೋಟಿ ಗುಳುಂ : ಸಿಐಡಿ ಬಿಚ್ಚಿಟ್ಟಿತು ಸ್ಫೋಟಕ ಸತ್ಯ..!

- Advertisement -

News: ಕೋವಿಡ್‌ ಕಾಲದಲ್ಲಿ ಹಿಂದುಳಿದ ತಳ ಸಮುದಾಯದ ಜನರಿಗೆ ಕೊರೋನಾ ಸಾಲ ಎಂಬ ಒಂದೇ ಯೋಜನೆಯಲ್ಲಿಯೇ ಬರೊಬ್ಬರಿ 47 ಕೋಟಿ ರೂಪಾಯಿಗಳ ಬೃಹತ್‌ ಹಗರಣ ನಡೆದಿದೆ. ರಾಜ್ಯದ ಭೋವಿ ನಿಗಮದಲ್ಲಿ‌ ಇಷ್ಟೊಂದು ಪ್ರಮಾಣದಲ್ಲಿ ಅಧಿಕಾರಿಗಳು ಲೂಟಿ ಹೊಡೆದಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.

ಇನ್ನೂ ಇದೇ ನಿಗಮದಲ್ಲಿ ಕಳೆದ 2021-22ನೇ ಸಾಲಿನಲ್ಲಿ ಭೋವಿ ಸಮುದಾಯದವರಿಗೆ ಉದ್ಯಮಗಳಿಗಾಗಿ ಸಾಲ ನೀಡುವಾಗ ಅಕ್ರಮ ನಡೆದಿತ್ತು. ಅಲ್ಲದೆ ಲಕ್ಷಾಂತರ ರೂಪಾಯಿ ಸಾಲ ಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆಯ ಜೊತೆಗೆ 10 ಕೋಟಿ ರೂಪಾಯಿ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿತ್ತು. ಅಲ್ಲದೆ ನಿಗಮದಲ್ಲಿ ಆಗ ನಿರ್ದೇಶಕಿಯಾಗಿದ್ದ ಲೀಲಾವತಿ, ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಹಾಗೂ ಅಧೀಕ್ಷಕ ಸುಬ್ಬಪ್ಪ ಸೇರಿದಂತೆ ಸಮುದಾಯದ ಕೆಲ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿತ್ತು.

ಸಾಲದ ಹೆಸರಲ್ಲಿ ಗುಳುಂ ಸ್ವಾಹಾ..!

ಆ ವರ್ಷದ ಉದ್ಯಮಶೀಲತಾ ದಾಖಲೆಗಳನ್ನು ಪರಿಶೀಲಿಸಿದಾಗ, ನೂತನ ಉದ್ಯಮಗಳನ್ನು ಆರಂಭಿಸುವ ನೆಪದಲ್ಲಿ 210ಕ್ಕೂ ಅಧಿಕ ಫಲಾನುಭವಿಗಳ ಹೆಸರಲ್ಲಿ 5 ರಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗಿತ್ತು. ಅಲ್ಲದೆ ಈ ವಿಚಾರವಾಗಿ ದಾಖಲೆಯಲ್ಲಿದ್ದ ಸಂಬಂಧಪಟ್ಟ ಫಲಾನುಭವಿಗಳನ್ನು ವಿಚಾರಿಸಿದಾಗ ನಿಗಮದಿಂದ ಲಕ್ಷಾಂತರ ರೂಪಾಯಿಗಳ ಸಾಲ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆಗಷ್ಟೇ ಕೊರೋನಾ ಸಾಲದ ಹೆಸರಲ್ಲಿ ಸ್ವಲ್ಪ ಹಣ ನೀಡಿ ಕೈತೊಳೆದುಕೊಂಡಿದ್ದರು ಎಂದು ಅವರು ಹೇಳಿದ್ದರು.

47 ಕೋಟಿ ರೂಪಾಯಿಯ ಹಗರಣ..!

ಇನ್ನೂ ನಿಗಮದಲ್ಲಿ ಮಧ್ಯವರ್ತಿಗಳ ಮೂಲಕ ಡೀಲ್‌ ನಡೆಸುತ್ತಿದ್ದ ಅಧೀಕ್ಷಕ ಸುಬ್ಬಪ್ಪ, ಜನರನ್ನು ಕರೆತರಲು ಹೇಳಿ ವ್ಯವಹಾರ ಕುದುರಿಸುತ್ತಿದ್ದನು. ಪ್ರಕರಣ ಹೊರಗೆ ಬರುತ್ತಿದ್ದಂತೆಯೇ ಇದನ್ನು ಮುಚ್ಚಿಹಾಕಲು ಭೋವಿ ಅಭಿವೃದ್ಧಿ ನಿಗಮದ ಲೆಕ್ಕಪತ್ರ ಕಡತ, ನಗದು ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್ ಸೇರಿ 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿದ್ದ ಕುರಿತು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ದೂರು ದಾಖಲಾಗಿತ್ತು. ಅಲ್ಲದೆ ಭೋವಿ ಸಮುದಾಯದ ಆರ್ಥಿಕ ಪ್ರಗತಿಗೆ ಈ ಉದ್ಯಮಶೀಲತಾ ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಸೇರಿದಂತೆ 5ಕ್ಕೂ ಹೆಚ್ಚು ಯೋಜನೆ ನಿಗಮದ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಆದರೆ ಈ ಎಲ್ಲ ಯೋಜನೆಗಳ ಬದಲು ಈ ಉದ್ಯಮಶೀಲತೆಯಲ್ಲೇ ಇಷ್ಟೊಂದು 47 ಕೋಟಿ ರೂಪಾಯಿಗಳ ಅವ್ಯವಹಾರ ಬೆಳಕಿಗೆ ಬಂದಿದೆ. ಇದರಿಂದ ಸಮುದಾಯದ ನೈಜ ಫಲಾನುಭವಿಗಳಿಗೆ ಬಹಳಷ್ಟು ಅನ್ಯಾಯವಾಗಿದೆ.

ವಂಚನೆ ಹೇಗೆ..?

ಭೋವಿ ನಿಗಮದಲ್ಲಿನ ಅಧಿಕಾರಿಗಳು ಮೊದಲೇ ಮಧ್ಯವರ್ತಿಗಳ ಜೊತೆ ಮಾತನಾಡಿಕೊಂಡಿರುತ್ತಾರೆ. ಬ್ರೋಕರ್‌ಗಳು ಜನರಿಗೆ ಹಣದಾಸೆ ತೋರಿಸಿ ದಾಖಲೆಗಳನ್ನು ಪಡೆದು ಅವರ ಹೆಸರಿನಲ್ಲಿ ಖಾತೆ ಸೃಷ್ಟಿಸುತ್ತಾರೆ. ಬಳಿಕ ಅಂದುಕೊಂಡಂತೆ ಅವರ ಖಾತೆಗಳಿಗೆ ಹಣ ಹಾಕುತ್ತಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆ ಹಣವನ್ನು ತಾವೇ ಸ್ಥಾಪಿಸಿದ್ದ ನಕಲಿ ಕಂಪನಿಗಳಿಗೆ ಟ್ರಾನ್ಸ್‌ಫರ್‌ ಮಾಡಿಕೊಳ್ಳುತ್ತಿದ್ದರು. ಇದೇ ರೀತಿಯಾಗಿ ಆರೋಪಿಗಳು ಮೊದಲು ಸಾಕಷ್ಟು ಹಣ ಕೊಳ್ಳೆ ಹೊಡೆದಿದ್ದರು. ಆಗ 210 ಕ್ಕೂ ಅಧಿಕ ಜನರ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಇದಾದ ಬಳಿಕ 5 ಕಂಪನಿಗಳಿಗೆ ಅದನ್ನು ಕಳುಹಿಸಲಾಗಿತ್ತು ಎಂಬುವುದು ತನಿಖೆಯಲ್ಲಿ ಹೊರಬಿದ್ದಿದೆ.

ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು..

ಅಲ್ಲದೆ ಈ ನಿಗಮದಲ್ಲಿ ನಡೆದಿರುವ ಹಲವಾರು ಅಕ್ರಮಗಳ ಮೈಕ್ರೋ ಆಡಿಟಿಂಗ್‌ ಕಾರ್ಯವೂ ನಡೆಸಲಾಗುತ್ತಿದೆ. ಇದರ ಬಗ್ಗೆ ಅಂತಿಮ ವರದಿಯ ಬಳಿಕ ಈ ಹಗರಣದಲ್ಲಿನ ಹಣದ ಮೊತ್ತ ಇನ್ನಷ್ಷು ಅಧಿಕವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ, ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಏನಿದು ಹಗರಣ..?

2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪವಿತ್ತು. ಕೆಲ ದಿನಗಳ ಹಿಂದೆಯಷ್ಟೇ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಸಿಐಡಿ ಅಧಿಕಾರಿಗಳು ಭೋವಿ ನಿಗಮದ ಅಧೀಕ್ಷಕ ಸುಬ್ಬಪ್ಪನನ್ನು ಬಂಧಿಸಿದ್ದರು.

- Advertisement -

Latest Posts

Don't Miss