ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಪರಿಣಾಮ 6 ಮಂದಿ ಸಜೀವ ದಹನವಾಗಿರುವ ದುರ್ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಕಾರು ಯಾದಗಿರಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದು, ಖಾಸಗಿ ಬಸ್ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಬರುತ್ತಿತ್ತು. ಈ ವೇಳೆ ದೇವಾಪುರ ಸಮೀಪ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಡಿಕ್ಕಿಯ ತೀವ್ರತೆಗೆ ಕಾರು ಹಾಗೂ ಬಸ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.
ಘಟನೆಯ ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕಾರಿನಲ್ಲಿದ್ದ ಆರು ಮಂದಿ ಬೆಂಕಿಯಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಸುರಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ




