ಬೆಂಗಳೂರಿಗರಿಗೆ ನೀರಿನ ಶಾಕ್!

ಕರ್ನಾಟಕ ರಾಜ್ಯವು ತೀವ್ರ ಬಿಸಿಲಿನ ನಡುವೆಯೇ ಕುಡಿಯುವ ನೀರಿನ ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದಂತೆ ನೀರಿನ ಕೊರತೆ ಮತ್ತಷ್ಟು ಗಂಭೀರವಾಗಿದ್ದು, ಜನರು ನೀರಿಗಾಗಿ ಹಾಹಾಕಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾಜಧಾನಿ ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಬೆಲೆ ಏರಿಕೆಯಾಗಿದ್ದು, ನಿವಾಸಿಗಳು ದೂರದ ಪ್ರದೇಶಗಳಿಂದ ನೀರು ತಂದುಕೊಳ್ಳಲು ಪರದಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮೂರು ದಿನಗಳಿಗೊಮ್ಮೆ ಕೇವಲ ಒಂದು ಅಥವಾ ಎರಡು ಗಂಟೆಗಳ ಕಾಲ ಮಾತ್ರ ನೀರು ಪೂರೈಕೆ ನಡೆಯುತ್ತಿದೆ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ನೆಲಮಂಗಲದಲ್ಲಿ ನೀರಿನ ಅಸಮರ್ಪಕ ವಿತರಣೆ ಹಾಗೂ ರಾಜಕೀಯ ಹಸ್ತಕ್ಷೇಪದ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಜಕ್ಕಸಂದ್ರ ವಾರ್ಡ್‌ನಲ್ಲಿ ಹಣ ಕೊಟ್ಟವರಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ರಾಜ್ಯದ ಅಣೆಕಟ್ಟುಗಳ ನೀರಿನ ಸಂಗ್ರಹದ ಸ್ಥಿತಿ ಕುರಿತು ಸಮಗ್ರ ಮಾಹಿತಿ ಪಡೆಯಲಾಗಿದೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗುವ ಸಾಧ್ಯತೆ ಇದ್ದು, ಸುಮಾರು 213 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಸಂಬಂಧಿತ ಜಿಲ್ಲಾಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author