ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂರು ವರ್ಷದ ಮಗು ಸೇರಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಮಂತ್ರಾಲಯದ ಸಮೀಪದ ಚಿಲಕನಡೋಣ ಬಳಿ ಬುಲೆರೋ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಮೃತರನ್ನು ಹಾಸನ ಮತ್ತು ಚಿಕ್ಕಮಗಳೂರು ಮೂಲದ ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಹಾಗೂ ಮೀನಾಕ್ಷಿ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವ ಸುಮಾರು 4 ಗಂಟೆ ಸುಮಾರಿಗೆ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮಂತ್ರಾಲಯದ ಕಡೆಗೆ ಸಾಗುತ್ತಿದ್ದ ಬುಲೆರೋ ವಾಹನಕ್ಕೆ ಬೀದರ್ನಿಂದ ತುಮಕೂರಿನತ್ತ ತೆರಳುತ್ತಿದ್ದ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ತೀವ್ರತೆಗೆ ಸ್ಥಳದಲ್ಲೇ ಎಂಟು ಮಂದಿ ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಮಂತ್ರಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




