ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ತೊಲೆಗೆ ಸೀರೆ ಕಟ್ಟಿ ಮಗು ತೂಗುವುದು ಸಾಮಾನ್ಯ. ಆದ್ರೆ ಅದೇ ಸೀರೆ 8 ವರ್ಷದ ಬಾಲನಿಗೆ ಉರುಲಾದ ದಾರುಣ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೆಕುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಜಯ್ ಕುಮಾರ್ ಅವರ ಪುತ್ರ ಭೂಮಿತ್ ಮೃತಪಟ್ಟ ಬಾಲಕನಾಗಿದ್ದಾನೆ. ಮನೆಯಲ್ಲಿ ಪುಟ್ಟ ಮಗುವಿಗಾಗಿ ಸೀರೆಯನ್ನು ಬಳಸಿ ತಾತ್ಕಾಲಿಕ ತೊಟ್ಟಿಲು ಕಟ್ಟಲಾಗಿತ್ತು.
ಮನೆಯಲ್ಲಿ ಆಟವಾಡುತ್ತಿದ್ದ ಭೂಮಿತ್, ಸೀರೆಯಿಂದ ಕಟ್ಟಿದ್ದ ತೊಟ್ಟಿಲಿನಲ್ಲಿ ಆಟವಾಡಲು ಮುಂದಾಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಸೀರೆ ಆತನ ಕತ್ತಿಗೆ ಸುತ್ತಿಕೊಂಡಿದೆ. ಸೀರೆ ಬಿಗಿಯಾಗಿ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಬಾಲಕ ಉಸಿರುಗಟ್ಟಿ ಒದ್ದಾಡಿದ್ದಾನೆ.
ಬಾಲಕನ ಸ್ಥಿತಿ ಗಮನಿಸಿದ ಮನೆಯವರು ತಕ್ಷಣವೇ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತಡವಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಭೂಮಿತ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಏನನ್ನೂ ಅರಿಯದ ಪುಟ್ಟ ಬಾಲಕನ ಸಾವಿನಿಂದ ಕಾರೆಕುರ ಗ್ರಾಮದಲ್ಲಿ ಶೋಕ ಆವರಿಸಿದೆ. ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




