ಪಾಟ್ನಾ: ದೇಶದಲ್ಲಿ ಎಷ್ಟೋ ಜನರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಹಿಂದೇಟು ಹಾಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ 84 ವರ್ಷದ ವೃದ್ಧ 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ 84 ವರ್ಷದ ವೃದ್ಧ ಬ್ರಹ್ಮದೇವ್ ಮಂಡಲ್, ತಾವು 11 ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.
ಆದರೆ, 12ನೇ ಡೋಸ್ ಲಸಿಕೆ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ. ಮಧೇಪುರ ಜಿಲ್ಲೆಯ ಓರಾಯ್ ಗ್ರಾಮದ ನಿವಾಸಿಯಾದ ಇವರು ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯೂ ಹೌದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡಲ್, ‘ಲಸಿಕೆಯಿಂದ ಬಹಳಷ್ಟು ಉಪಯೋಗವಾಗಿದೆ. ಹಾಗಾಗಿ ಪದೇ ಪದೇ ಲಸಿಕೆ ಪಡೆದೆ. ಕಳೆದ ವರ್ಷ ಫೆ.13ರಂದು ಮೊದಲ ಡೋಸ್ ಸ್ವೀಕರಿಸಿದ್ದೆ. ಅನಂತರ ಡಿ.30ರ ಒಳಗೆ 11 ಡೋಸ್ ಲಸಿಕೆ ಪಡೆದೆ. ಲಸಿಕೆ ಪಡೆದ ದಿನಾಂಕ, ಸ್ಥಳವನ್ನೂ ಬರೆದಿಟ್ಟಿದ್ದೇನೆ. 8 ಬಾರಿ ಲಸಿಕೆ ಪಡೆಯಲು ನನ್ನ ಆಧಾರ್ ಮತ್ತು ಫೋನ್ ನಂಬರ್ ನೀಡಿದ್ದೆ. ನಂತರ ಮೂರು ಬಾರಿ ವೋಟರ್ ಐಡಿ ಮತ್ತು ಪತ್ನಿಯ ಮೊಬೈಲ್ ನಂಬರ್ ನೀಡಿದ್ದೆ’ ಎಂದು ತಿಳಿಸಿದ್ದಾರೆ.
ಲಸಿಕಾ ಕ್ಯಾಂಪ್ ವೇಳೆ, ಸಿಬ್ಬಂದಿಯು ಆಧಾರ್ ಮತ್ತು ಫೋನ್ ನಂಬರ್ ಪಡೆದು ತಮ್ಮ ಪುಸ್ತಕದಲ್ಲಿ ನಮೂದಿಸಿ ಲಸಿಕೆ ಹಾಕುತ್ತಾರೆ. ಅನಂತರ ಸಂಜೆ ವೇಳೆಗೆ ಡೇಟಾಬೇಸ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಅಪ್ಲೋಡ್ ಮಾಡುವಾಗ ಇವರು 2 ಡೋಸ್ ಲಸಿಕೆ ಪಡೆದಾಗಿದೆ ಎಂದು ಗೊತ್ತಾಗುತ್ತದೆ. ಆದರೆ ಅಷ್ಟೊತ್ತಿಗಾಗಲೇ ಲಸಿಕೆ ಪಡೆದು, ನಿರ್ಗಮಿಸಿರುತ್ತಾರೆ. ಈ ಲೋಪದಿಂದಾಗಿ ಇವರು ಇಷ್ಟೊಂದು ಬಾರಿ ಲಸಿಕೆ ಸ್ವೀಕರಿಸಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಸಿವಿಲ್ ಸರ್ಜನ್ ತಿಳಿಸಿದ್ದಾರೆ.

