International News: ರೈಲನ್ನು ಹೈಜಾಕ್ ಮಾಡಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದ ಬಲೂಚಿಸ್ತಾನ ಬಂಡುಕೋರರು ಇದೀಗ ಪಾಕಿಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಭಾರತದಲ್ಲಿ ಕಳೆದ 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನದ ಉಗ್ರರು ಸೇನಾ ವಾಹನವನ್ನು ಗುರಿಯಾಗಿಸಿ ಭೀಕರ ಆತ್ಮಾಹುತಿ ದಾಳಿ ನಡೆಸಿದ್ದರು. ಈಗ ಅದೇ ಮಾದರಿಯಲ್ಲಿ ಪಾಕಿಸ್ತಾನದಿಂದ ನಮಗೆ ಮುಕ್ತಿ ನೀಡಿ ಎಂದು ಹೋರಾಡುತ್ತಿರುವ ಬಲೂಚಿಸ್ತಾನ ಬಂಡುಕೋರರು ಪಾಕ್ ಸೇನಾ ವಾಹನವನ್ನು ಟಾರ್ಗೆಟ್ ಮಾಡಿ ನಡೆಸಿರುವ ಆತ್ಮಾಹುತಿ ದಾಳಿಗೆ 90 ಕ್ಕೂ ಅಧಿಕ ಪಾಕಿಸ್ತಾನದ ಯೋಧರು ಬಲಿಯಾಗಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರವು ಈ ಘಟನೆಯನ್ನು ಅಲ್ಲಗಳೆದಿದ್ದು, ಸಾವಿನ ಸಂಖ್ಯೆಯನ್ನು ಮರೆಮಾಚುವ ಉದ್ದೇಶದಿಂದ ಕೇವಲ 5 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಬಲೂಚಿಸ್ತಾನದ ನೋಶ್ಕಿ ಪ್ರದೇಶದ ಹೈವೇಯೊಂದರಲ್ಲಿ ಪ್ಯಾರಾಮಿಲಿಟರಿ ಫ್ರಂಟಿಯರ್ ಕಾರ್ಪ್ ಅನ್ನು ಕೇಂದ್ರವಾಗಿರಿಸಿ ಬಿಎಲ್‌ಎ ಅಂದರೆ ಬಲೂಚ್ ಲಿಬರೇಷನ್ ಅರ್ಮಿಯ ಬಂಡುಕೋರರು, ಸ್ಫೋಟಕ ಹೊತ್ತ ವಾಹನವನ್ನು ಸೇನಾ ಬಸ್‌ಗೆ ಡಿಕ್ಕಿ ಹೊಡೆಸಿ ಆತ್ಮಾಹುತಿ ದಾಳಿಗೆ ಕಾರಣವಾಗಿದ್ದಾರೆ. ಅಲ್ಲದೆ ರೈಲು ಘಟನೆಯ ಬಳಿಕ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ಪಾಕ್ ಸೇನೆಯನ್ನು ಟಾರ್ಗೆಟ್ ಮಾಡಿ ಕೇವಲ 12 ಗಂಟೆಗಳಲ್ಲಿ 19 ಬಾರಿ ಅಟ್ಯಾಕ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಪಾಕಿಸ್ತಾನದ ಸೇನೆಗೆ ಪ್ರತಿಯಾಗಿ ಹೇಳಿಕೆ ನೀಡಿರುವ ಬಲೂಚಿಸ್ತಾನ ಬಂಡುಕೋರರ ಪಡೆಯು, ಈ ದಾಳಿಯಲ್ಲಿ 90ಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ. ಮುಖ್ಯವಾದ ರಸ್ತೆಯೊಂದರಲ್ಲಿ ಹೊರಡುತ್ತಿದ್ದ ಸೇನಾ ವಾಹನದ ಮೇಲೆ ನಮ್ಮ ಹೋರಾಟಗಾರರು ನಡೆಸಿರುವ ದಾಳಿಯಿಂದ ಒಂದು ಬಸ್ ಸಂಪೂರ್ಣವಾಗಿ ಛಿದ್ರಾವಾಗಿದ್ದು, ಉಳಿದ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಮಾಹಿತಿ ನೀಡಿದೆ.
ಒಟ್ನಲ್ಲಿ.. ಕಳೆದೆರಡು ದಿನಗಳ ಹಿಂದೆ ಇಡೀ ಜಾಫರ್ ಎಕ್ಸ್‌ಪ್ರೆಸ್ ರೈಲನ್ನೇ ಹೈಜಾಕ್ ಮಾಡಿದ್ದ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು, ಈಗ ಸೇನಾ ವಾಹನವನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದಾರೆ. ಇದನೆಲ್ಲ ನೋಡಿದಾಗ ಪಾಕ್ ಬಗ್ಗೆ ಬಲೂಚಿಗರ ಕೋಪ ನೆತ್ತಿಗೇರಿದೆ. ಅಲ್ಲದೆ ಪಾಕಿಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಎಲ್‌ಎ ಹೋರಾಟಗಾರರು ತಾವು ಅಂದುಕೊಂಡಂತೆ ಸ್ವಾತಂತ್ರ್ಯವನ್ನು ಪಡೆಯಲು ಪಾಕಿಸ್ತಾನಕ್ಕೆ ಇನ್ನೆಷ್ಟು ಮರ್ಮಾಘಾತ ನೀಡುತ್ತಾರೋ ಅನ್ನೋದನ್ನ ಕಾದು ನೋಡಬೇಕಿದೆ.