Sandalwood News: ತಾಯಿಯ ಬಗ್ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ್

Sandalwood News: ಕಿಚ್ಚ ಸುದೀಪ್ ಅವರ ತಾಯಿ ನಿನ್ನೆ ಮುಂಜಾನೆಯಷ್ಟೇ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ಅಗಲಿದ ಅಮ್ಮನಿಗಾಗಿ ಕಿಚ್ಚ ಸುದೀಪ್ ಭಾವುಕ ಪತ್ರ ಬರೆದಿದ್ದಾರೆ.

ನನ್ನ ತಾಯಿ, ಪಕ್ಷಪಾತವಿಲ್ಲದ, ಪ್ರೀತಿ ಕೊಡುವ, ಕ್ಷಮೆ ನೀಡುವ, ಕಾಳಜಿವಹಿಸುವ ಮತ್ತು ಓರ್ವ ಮೌಲ್ಯಯುತವಾದ ವ್ಯಕ್ತಿಯಾಗಿದ್ದರು. ಆಕೆ ನನ್ನ ಪಕ್ಕದಲ್ಲಿಯೇ ಇದ್ದ, ಮಾನವ ರೂಪದ ದೇವರಾಗಿದ್ದಳು. ಆಕೆ ಎಂದರೆ ನನಗೆ ಹಬ್ಬ, ನನ್ನ ಗುರು, ನನ್ನ ಹಿತೈಷಿ, ನನ್ನ ಮೊದಲ ಅಭಿಮಾನಿ, ಆದರೆ ಆಕೆ ಈಗ ನೆನಪು ಮಾತ್ರ.

ಈಗ ನಾನು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಸತ್ಯವನ್ನು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ವಾಸ್ತವವನ್ನು ಒಪ್ಪಿಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಎಲ್ಲವೂ ಬದಲಾಯಿತು.

ಪ್ರತಿದಿನ ಬೆಳಿಗ್ಗೆ ಸುಮಾರು 5.30ಕ್ಕೆ ನನ್ನ ಮೊಬೈಲ್‌ಗೆ ಬರುವ ಮೊದಲ ಸಂದೇಶವೇ ಆಕೆಯದ್ದು. ಶುಭೋದಯ ಕಂದಾ ಎಂದು ಆಕೆ ಸಂದೇಶ ಕಳುಹಿಸುತ್ತಿದ್ದಳು. ಆದರೆ ಅಕ್ಟೋಬರ್ 18ರಂದು ನಾನು ಆಕೆಯ ಕೊನೆಯ ಸಂದೇಶವನ್ನು ಸ್ವೀಕರಿಸಿದೆ. ಮರುದಿನ ನಾನು ಬಿಗ್‌ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವ ದಿನ ಬೆಳಿಗ್ಗೆ ಆಕೆಯ ಸಂದೇಶ ಬರಲಿಲ್ಲ.

ಇಷ್ಟು ವರ್ಷಗಳಲ್ಲಿ ಮೊದಲನೇಯ ಬಾರಿ ಹಾಗಾಗಿದ್ದು. ಈ ದಿನ ನಾನೇ ಮೊದಲು ಆಕೆಗೆ ಸಂದೇಶ ಕಳುಹಿಸಿದೆ. ಉತ್ತರ ಬರದ ಕಾರಣ, ಕರೆ ಮಾಡಿ, ಏನಾಯಿತೆಂದು ವಿಚಾರಿಸಿದಾಗ, ಆಕೆಯ ಆರೋಗ್ಯ ಕ್ಷಿಣಿಸುತ್ತಿದೆ ಎಂಬ ವಿಚಾರ ಗೊತ್ತಾಯಿತು. ಅಲ್ಲದೇ, ಬಿಗ್‌ಬಾಸ್ ಕಾರ್ಯಕ್ರಮ ನಡೆಸಿಕೊಡಲು ನಾನು ಸ್ಟೇಜ್‌ಗೆ ಹೋಗುವ ಮುನ್ನ, ಆಕೆ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಗೊತ್ತಾಯಿತು.

ನನ್ನ ಸಹೋದರಿಗೆ ಕರೆ ಮಾಡಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಂಡೆ. ಒಂದೆಡೆ ಬಿಗ್‌ಬಾಸ್‌ ಶೋ ನಡೆಸಿಕೊಡುತ್ತಿದ್ದರೆ, ಇನ್ನೊಂದೆಡೆ ಬಿಬಿಕೆ ಮನೆಯ ಸಮಸ್ಯೆಗಳನ್ನು ಬಗೆಹರೆಸುತ್ತಿದ್ದೆ. ಮತ್ತೊಂದೆಡೆ ಮನಸ್ಸಿನಲ್ಲಿ ಅಮ್ಮನ ಬಗ್ಗೆ ಭಯ.

ಎಂಥ ಗೊಂದಲಗಳಿದ್ದರೂ, ಒಪ್ಪಿಕೊಂಡ ಕೆಲಸವನ್ನು ಸರಿಯಾಗಿ ನಿಭಾಯಿಸಬೇಕು ಎಂದು ನನಗೆ ನನ್ನ ತಾಯಿಯೇ ಹೇಳಿಕೊಟ್ಟಿದ್ದಾಳೆ. ಅದಕ್ಕಾಗಿ ಆಕೆಗೆ ನಾನು ಋಣಿ. ಆದರೆ ಆಕೆಯನ್ನು ವೆಂಟಿಲೇಟರ್‌ಗೆ ಹಾಕುವ ಮುನ್ನ ಆಕೆಯನ್ನು ನೋಡಲೇಬೇಕೆಂದು ನಾನು ಶೋ ಮುಗಿಸಿ ಹೊರಟೆ. ಆದರೆ ಅದಾಗಲೇ ಆಕೆಯನ್ನು ವೆಂಟಿಲೇಟರ್‌ಗೆ ಹಾಕಲಾಗಿತ್ತು. ಆಕೆಗೆ ಜ್ಞಾನವಿದ್ದಾಗ, ಆಕೆಯನ್ನು ಭೇಟಿಯಾಗಲು ಆಗಲಿಲ್ಲ. ಬಳಿಕ ಆಕೆ ಸಾವು ಬದುಕಿನ ನಡುವೆ ಹೋರಾಡಿದಳು. ಕೆಲ ಕ್ಷಣಗಳಲ್ಲೇ ಎಲ್ಲವೂ ಬದಲಾಯಿತು.

ಈ ಘಟನೆಯನ್ನು ಹೇಗೆ ಅನ್‌ಡು ಮಾಡಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ವಾಸ್ತವವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಶೂಟಿಂಗ್‌ಗೆ ಹೋಗುವ ಮುನ್ನ ನನಗೆ ಬಿಗಿಯಾದ ಅಪ್ಪುಗೆ ಕೊಡುತ್ತಿದ್ದ ಅಮ್ಮ ಇನ್ನಿಲ್ಲ. ಈ ದಿನ ದೇವರು ಮತ್ತು ಪ್ರಕೃತಿ ಆಕೆಯನ್ನು ಈ ಭೂಮಿಯಿಂದ ದೂರ ಮಾಡಲು ಆಯ್ಕೆ ಮಾಡಿದ ದಿನಗಳಾಗಿದೆ.

ಆಕೆಗೆ ಗೌರವ ಸೂಚಿಸಲು ಬಂದವರು ಮತ್ತು ಟ್ವೀಟ್ ಮೂಲಕ ನನ್ನನ್ನು ತಲುಪಿದ ಎಲ್ಲರಿಗೂ ಧನ್ಯವಾದ ಎಂದು ಕಿಚ್ಚ ಸುದೀಪ್ ಭಾವುಕರಾಗಿ ಪತ್ರ ಬರೆದಿದ್ದಾರೆ.

About The Author