Spiritual: ಉತ್ತರಾಖಂಡನ ಚಮೋಲಿ ಜಿಲ್ಲೆಯ ಅಲಕಾನಂದ ನದಿ ದಡದಲ್ಲಿ ಬದರಿನಾಥ ದೇವಸ್ಥಾನವಿದೆ. ಚಾರ್‌ಧಾಮ್ ಯಾತ್ರೆಯಲ್ಲಿ ಬದರಿನಾಥ್ ಕೂಡ ಒಂದು. ಬದರಿನಾಥ್‌ನಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಪೂಜೆಯ ವೇಳೆ ಗಂಟೆ, ಜಾಗಟೆ, ಆರತಿ ಎಲ್ಲವೂ ಬಳಸಲಾಗುತ್ತದೆ. ಆದರೆ ಶಂಖ ಮಾತ್ರ ಊದಲಾಗುವುದಿಲ್ಲ. ಹಾಗಾದ್ರೆ ಬದರಿನಾಥದಲ್ಲಿ ಶಂಖ ಊದದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಶ್ರೀ ವಿಷ್ಣು ಶಂಖಚೂರ್ಣ ಎಂಬ ಅಸುರನನ್ನು ಕೊಂದನು. ಬಳಿಕ ಶಂಖ ಊದಬೇಕು ಎಂದುಕೊಂಡವರು, ಲಕ್ಷ್ಮೀಯನ್ನು ಕಂಡು, ಆಕೆಯ ಧ್ಯಾನಭಂಗವಾಗಬಾರದು ಎಂಬ ಕಾರಣಕ್ಕೆ, ಶಂಖ ಊದದೇ ಸುಮ್ಮನಿದ್ದನು. ಇದೇ ಕಾರಣಕ್ಕೆ, ಇಂದಿಗೂ ಬದರಿಯಲ್ಲಿ ಶಂಖ ಊದುವುದಿಲ್ಲ.
ಇನ್ನೊಂದು ಕಥೆಯ ಪ್ರಕಾರ, ಇಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ರಾಕ್ಷಸರ ಸಂಹಾರಕ್ಕಾಗಿ, ದೇವಿ ಕೂಷ್ಮಾಂಡಿನಿ ರೂಪ ತಾಳಿ, ರಾಕ್ಷಸರ ಸಂಹಾರ ಮಾಡಳೆಂದು ಬಂದಳು. ಆದರೆ ಇದರಲ್ಲಿ ಎರಡು ರಾಕ್ಷಸರು ತಪ್ಪಿಸಿಕೊಂಡರು. ಅದರಲ್ಲಿ ವಾತಾಪಿ ಎಂಬ ರಾಕ್ಷಸ ದೇವಿಯಿಂದ ತಪ್ಪಿಸಿಕೊಳ್ಳಲು, ದೇವಸ್ಥಾನದಲ್ಲಿ ಇದ್ದ ಶಂಖದಲ್ಲಿ ಸೇರಿಕೊಂಡನು. ಶಂಖ ಊದಿದರೆ, ವಾತಾಪಿ ರಾಕ್ಷಸನ ಅಟ್ಟಹಾಸ ಶುರುವಾಗಬಹುದು ಎಂಬ ಕಾರಣದಿಂದ, ಇಲ್ಲಿ ಶಂಖ ಊದಲಾಗುವುದಿಲ್ಲ.
ಒಟ್ಟಾರೆಯಾಗಿ, ಶಂಖ ಊದಿದರೆ, ಅವಘಡ ಸಂಭವಿಸಬಹುದು ಎಂಬ ಕಾರಣಕ್ಕೆ, ಇಲ್ಲಿ ಶಂಖ ಊದಲಾಗುವುದಿಲ್ಲ. ಅಲ್ಲದೇ, ಈ ಪ್ರದೇಶ ಮಂಜುಗಡ್ಡೆಯಿಂದ ಕೂಡಿದ್ದು, ಶಂಖ ಊದಿದರೆ, ಮಂಜುಗಡ್ಡೆಯಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಶಂಖ ಊದುವುದಿಲ್ಲ.