Spiritual: ನಾವು ಮನುಷ್ಯರು ರಾತ್ರಿ ಒಂದು ಸಮಯಕ್ಕೆ ನಿದ್ರಿಸಿ, ಬೆಳಿಗ್ಗೆ ಏಳುವ ಸಮಯಕ್ಕೆ ಏಳುತ್ತೇವೆ. ಆದರೆ ಇನ್ನು ಕೆಲವು ಜೀವಿಗಳು, ಕೆಲವು ಸಲ ನಿದ್ರೆಯಿಂದ ತಾನಾಗಿಯೇ ಏಳುವುದಿಲ್ಲ. ಏಕೆಂದರೆ, ಅದರ ನಿದ್ರಾವಸ್ಥೆಯ ಸಮಯ ಹೆಚ್ಚಾಗಿರುತ್ತದೆ. ಹಾಗಾಗಿ ಚಾಣಕ್ಯರ ಪ್ರಕಾರ, ನಾವು ಕೆಲವರನ್ನು ನಿದ್ದೆಯಿಂದ ಎಬ್ಬಿಸಬಾರದು. ಹಾಗೇ ಎಬ್ಬಿಸಿದರೆ, ಅದರಿಂದ ನಮಗೆ ಹಾನಿಯಾಗುತ್ತದೆ ಅಂತಾರೆ ಚಾಣಕ್ಯರು. ಹಾಗಾದ್ರೆ ಯಾರನ್ನು ನಾವಾಗಿಯೇ ನಿದ್ದೆಯಿಂದ ಎಬ್ಬಿಸಬಾರದು ಅಂತಾ ತಿಳಿಯೋಣ ಬನ್ನಿ..
ಮಗುವಿನ ನಿದ್ರೆಗೆ ಹಾನಿ ಮಾಡಬಾರದು. ಪುಟ್ಟ ಮಕ್ಕಳು ಮನೆಯಲ್ಲಿದ್ದರೆ, ಅವರಿಗೆ ಈ ಮಾತು ಖಂಡಿತವಾಗಿಯೂ ಅರ್ಥವಾಗುತ್ತದೆ. ಏಕೆಂದರೆ, ಪುಟ್ಟ ಮಕ್ಕಳ ನಿದ್ರೆ ಅಪೂರ್ಣವಾದರೆ, ಅವರು ಮಾಡುವ ಕಿರಿಕಿರಿಯಿಂದ ಮಾನಸಿಕ ನೆಮ್ಮದಿಯೇ ಹಾಳಾಗುತ್ತದೆ. ಹಾಗಾಗಿ ಮಕ್ಕಳು ಚೆನ್ನಾಗಿ ನಿದ್ರೆ ಮಾಡಿ, ಹಾಯಾಗಿ ಏಳಲು ಬಿಡಬೇಕು.
ನಿದ್ರಾವಸ್ಥೆಯಲ್ಲಿರುವ ರಾಜನನ್ನು ಎಬ್ಬಿಸಬಾರದು. ರಾಜ ಎಂದರೆ ಒಂದು ರಾಜ್ಯ ಅಥವಾ ದೇಶವನ್ನು ಆಳುವವ. ಇಂಥ ರಾಜನಿಗೆ ಹಲವು ಜವಾಬ್ದಾರಿಗಳಿರುತ್ತದೆ. ಅಂಥ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಹ ಅವನು ನೆಮ್ಮದಿಯಾಗಿ ಕೊಂಚ ಹೊತ್ತು ನಿದ್ರಿಸುವಾಗ, ಪ್ರಜೆಗಳಾಗಲಿ, ಸೈನಿಕರಾಗಲಿ, ಯಾರೇ ಆಗಲಿ, ಆತನ ನಿದ್ರಾಭಂಗ ಮಾಡಿದರೆ, ಆತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಅಂತಾರೆ ಚಾಣಕ್ಯರು.
ಮೂರ್ಖನ ನಿದ್ರೆ ಅಥವಾ ನಿದ್ರೆಗೇ ಹೆಚ್ಚು ಬೆಲೆ ಕೊಡುವವರ ನಿದ್ರೆಗೆ ಭಂಗ ಮಾಡಬಾರದು. ನಿಮ್ಮ ಮನೆಯಲ್ಲಿ ಯಾರಾದರೂ ನಿದ್ರೆಗೇ ಹೆಚ್ಚು ಬೆಲೆ ಕೊಡುವವರು, ನಿದ್ರೆಗಿಂತ ಅವರಿಗೆ ಬೇರೇನೂ ಮುಖ್ಯವಲ್ಲ ಎನ್ನುವವರು ಇದ್ದರೆ. ಅಂಥವರನ್ನು ನೀವಾಗಿಯೇ ನಿದ್ರೆಯಿಂದ ಎಬ್ಬಿಸಬೇಡಿ. ಅವರಿಗೆ ಏಕೆ ಎಬ್ಬಿಸಿದರು ಎನ್ನುವ ಕಾರಣಕ್ಕಿಂತ, ಏಕೆ ನಿದ್ದೆ ಹಾಳು ಮಾಡಿದೆ ಎಂಬ ಪ್ರಶ್ನೆಯೇ ಕಾಡುತ್ತದೆ.
ಹಾವು, ಹಂದಿ, ಹುಲಿಯ ನಿದ್ರೆಗೆ ಭಂಗ ತರಬಾರದು. ಈ ಪ್ರಾಣಿ, ಸರಿಸೃಪಗಳ ನಿದ್ರೆಗೆ ಭಂಗವಾದರೆ, ಅವು ಎದುರಿನವರ ಜೀವಕ್ಕೆ ಕುತ್ತು ತರುತ್ತದೆ. ಹಾಗಾಗಿ ಈ ಪ್ರಾಣಿಗಳ ನಿದ್ರಾಭಂಗ ಮಾಡಬಾರದು ಅಂತಾರೆ ಚಾಣಕ್ಯರು.