Madhya Pradesh News: ಯುವನೋರ್ವ ಗ್ರಾಮಸ್ಥರ ಎದುರೇ ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಟಿಕಮ್‌ಘಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನ ಈ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗೆ ಜನ ಬೆಲೆಯೇ ಕೊಡುತ್ತಿಲ್ಲ ಎಂದಲ್ಲಿ, ಇಲ್ಲಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ನೀವು ಅಂದಾಜಿಸಬಹುದು.
ಈ ಗಲಾಟೆ ಆಗಿದ್ದೇಕೆ, ಇದರ ಹಿನ್ನೆಲೆ ಏನೆಂದು ನೋಡುವುದಾದರೆ, ದರಗ್ವಾನ್ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಅಪಘಾತವಾಗಿ 50 ವರ್ಷದ ವೃದ್ಧನೋರ್ವ ಸಾವನ್ನಪ್ಪಿದ್ದರು. ಮರುದಿನ ಅವರ ಕುಟುಂಬಸ್ಥರಿಗೆ ಈ ವಿಷಯ ತಿಳಿದು, ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಪಘಾತ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ತಿಳಿದ ಸ್ಥಳೀಯ ಪೊಲೀಸ್ ಅಧಿಕಾರಿ ಅನು ಮೇಘಾ ದುಬೆ ಎಂಬುವವರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಗಲಾಟೆಯಾದ ಕಾರಣ, ಮಹಿಳಾ ಪೊಲೀಸ್ ಅಧಿಕಾರಿ, ಅಲ್ಲಿದ್ದ ಯುವಕನೋರ್ವನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಆಕೆ ಪೊಲೀಸ್ ಅಧಿಕಾರಿ, ತಾನು ಗ್ರಾಮಸ್ಥರ ಎದುರಿಗಿದ್ದೇನೆ ಎಂಬುದರ ಅರಿವಿಲ್ಲದೇ, ಆ ಯುವಕನು ಪೊಲೀಸ್ ಅಧಿಕಾರಿಯ ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ಸ್ಥಳದಲ್ಲಿ ಜೋರು ಗಲಾಟೆ ನಡೆದಿದ್ದು, ಹಲವು ಪೊಲೀಸರು ಸ್ಥಳಕ್ಕಾಗಮಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.