Sandalwood News: ಜನ ಮೆಚ್ಚಿದ ನಾಯಕಿಯರು! ಹೀರೋಯಿನ್ಸ್ ಕೊರತೆ ಇಲ್ಲ ಗುರು..

Sandalwood News: ಕನ್ನಡದಲ್ಲಿ ನಾಯಕರ ಕೊರತೆ ಇದೆ ಅನ್ನೋ ಮಾತು ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಇಲ್ಲಿ ಸದ್ಯ ಹೊಸ ಹೀರೋಗಳು ಗಟ್ಟಿಯಾಗಿ ನಿಲ್ಲಬೇಕು ಅಂತ ಅನಿಸೋದು ನಿಜ. ಹೊಸಬರು ಬಂದರೂ ಇಲ್ಲಿ ನೆಲೆಕಾಣೋದು ಕಷ್ಟ. ಇನ್ನು, ನಾಯಕಿಯರ ವಿಷಯದಲ್ಲೂ ಇದೇ ಆಗಿದೆಯಾ? ಹಾಗೆ ನೋಡಿದರೆ, ಕೆಲ ವರ್ಷಗಳ ಹಿಂದೆ ಅಂದರೆ, ದಶಕದ ಹಿಂದಷ್ಟೇ ಕನ್ನಡ ನಾಯಕಿಯರಿಗಿಂತ ಇಲ್ಲಿ ಪರಭಾಷೆ ನಾಯಕಿಯರ ಹಾವಳಿಯೇ ಹೆಚ್ಚಾಗಿತ್ತು. ಆದರೆ, ಕಾಲ ಒಂದೇ ಸಮ ಇರಲ್ಲ. ಕಾಲ ಬದಲಾದಂತೆ ಕಲಾವಿದರ ಬದಲಾವಣೆಯೂ ಆಗುತ್ತಿದೆ. ಮೆಲ್ಲನೆ ಕನ್ನಡದ ಬಹುತೇಕ ನಟಿಮಣಿಗಳು ಪರಭಾಷೆಯ ಚಿತ್ರಗಳಲ್ಲೂ ಮಿಂಚತೊಡಗಿದರು. ಆದಾಗ್ಯೂ ಕನ್ನಡದಲ್ಲಿ ಕನ್ನಡದ ಬಹುತೇಕ ನಾಯಕಿಯರು ಗಟ್ಟಿನೆಲೆ ಕಂಡುಕೊಳ್ಳುತ್ತಿದ್ದಾರೆ ಅನ್ನೊದು ಸಮಾಧಾನದ ಸಂಗತಿ.

ಸದ್ಯ ಅಪ್ಪಟ ಕನ್ನಡದ ಒಂದಷ್ಟು ನಟಿಮಣಿಗಳು ಇಲ್ಲಿ ಗಮನಸೆಳೆದಿದ್ದಾರೆ. ಹೊರಗಡೆಯಿಂದಲೂ ಬೇಡಿಕೆ ಹೆಚ್ಚಾಗಿದೆ. ಆದರೂ, ಅವರಿಲ್ಲೇ ಇದ್ದು ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಅನ್ನುತ್ತಲೇ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವರ್ಷ ಮುಗಿಯುತ್ತಾ ಬಂತು. ಕನ್ನಡ ಸಿನಿರಂಗದಲ್ಲಿ ಕನ್ನಡದ ಬೆರಳೆಣಿಕ ನಟಿಯರು ಗಮನಸೆಳೆದಿದ್ದಾರೆ. ಈ ವರ್ಷ ನೋಡುಗರಿಗೆ ಇಷ್ಟವಾದ ನಾಯಕಿಯರು ಯಾರು ಗೊತ್ತಾ?

ಮೊದಲನೆಯ ನಟಿಯೆಂದರೆ ಅದು ರುಕ್ಮಿಣಿ ವಸಂತ್. ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಸಿನಿಮಾ ಮೂಲಕ ಗಮನಸೆಳೆದ ನಟಿ ಇವರು. ಪಡ್ಡೆಗಳ ಕಣ್ಣಿಗೂ ಬಿದ್ದ ರುಕ್ಮಿಣಿ ವಸಂತ್ ಈ ವರ್ಷ ಸಖತ್ ಮೋಡಿ ಮಾಡಿದ್ದು ಸುಳ್ಳಲ್ಲ. ವರ್ಷದ ಆರಂಭದ ಆರು ತಿಂಗಳ ಕಾಲ ಬೆಳ್ಳಿ ತೆರೆಯಿಂದ ದೂರವಿದ್ದ ರುಕ್ಮಿಣಿ ವಸಂತ್, ಈ ವರ್ಷ ಬಘೀರ ಸಿನಿಮಾ ಮೂಲಕ ಮೂಲಕ ತಮ್ಮ ಖಾತೆ ತೆರೆದರು. ಸಿನಿಮಾದಲ್ಲಿ ಡಾ.ಸ್ನೇಹಾ ಪಾತ್ರದ ಮೂಲಕ ಹತ್ತಿರವಾದರು. ಶ್ರೀಮುರಳಿ ಕಾಂಬಿನೇಷನ್ ನಲ್ಲಿ ಫಸ್ಟ್ ಟೈಮ್ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಈ ಸಿನಿಮಾ ನಂತರ ಶಿವಣ್ಣ ಅವರ ಭೈರತಿ ರಣಗಲ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ವೈಶಾಲಿ ಪಾತ್ರದ ಮೂಲಕ ನೋಡುಗರ ಮನಗೆದ್ದರು.ವಿಶೇಷವೆಂದರೆ ಬಘೀರ ಮತ್ತು ಭೈರತಿ ರಣಗಲ್ ಸಿನಿಮಾಗಳು ಕೇವಲ ಹದಿನೈದು ದಿನಗಳ ಅಂತರದಲ್ಲಿ ತೆರೆಗೆ ಅಪ್ಪಳಿಸಿದವು. ಈ ಎರಡೂ ಸಿನಿಮಾಗಳ ಮೂಲಕ ರುಕ್ಮಿಣಿ ವಸಂತ್ ಗಮನಸೆಳೆದರು.

ಎರಡನೆಯ ನಟಿ ಅಂದರೆ ಅದು ಸಪ್ತಮಿ ಗೌಡ. ಕಾಂತಾರ ಚಿತ್ರದ ಮೂಲಕ ಇಡೀ ಭಾರತಾದ್ಯಂತ ಸುದ್ದಿಯಾದ ಹುಡುಗಿ ಈಕೆ. ಈ ವರ್ಷ ಸಪ್ತಮಿ ಗೌಡ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರದಲ್ಲಿ ಕಾಣಿಸಿಕೊಂಡರು. ಸಿರಿ ಪಾತ್ರಕ್ಕೆ ನ್ಯಾಯ ಒದಗಿಸಿದರು. ಯುವ ಪಕ್ಕಾ ಮಾಸ್ ಫೀಲ್ ಚಿತ್ರ. ಆದರೂ, ಸಪ್ತಮಿ ಗೌಡ ತಮ್ಮ ಪಾತ್ರಕ್ಕೆ ಮೋಸ ಮಾಡಲಿಲ್ಲ. ಸಿನಿಮಾ ನೋಡಿದ ಬಹುತೇಕರು ಸಪ್ತಮಿ ಅವರ ಅಭಿನಯ ಒಪ್ಪಿಕೊಂಡರು.

ಮೂರನೆ ನಟಿ ಅಂದರೆ ಅದು ರೀಷ್ಮಾ ನಾಣಯ್ಯ. ಕೊಡಗಿನ ಈ ಹುಡುಗಿ ಏಕ್ ಲವ್ ಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು. ರೀಶ್ಮಾ ನಾಣಯ್ಯ ಈ ವರ್ಷ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಯುಐ ಚಿತ್ರದಲ್ಲಿ ಗಮನಸೆಳೆದರು. ಈ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಯ್ತು. ಹಾಗಾಗಿ ರೀಷ್ಮಾ ಕೂಡ ಆ ಲೆವೆಲ್ ಗೆ ರೀಚ್ ಆದರು. ಯುಐ ಸಿನಿಮಾದ ಟ್ರೋಲ್ ಆಗುತ್ತೆ ಇದು ಟ್ರೆಂಡ್ ಆಗುತ್ತೆ ಹಾಡು ಸಖತ್ ಟ್ರೆಂಡ್ ಆಯ್ತು. ಅಲ್ಲಿಂದ ರೀಷ್ಮಾ ಅವರು ಸುದ್ದಿಯಾದರು. ಸಿನಿಮಾದ ಪಾತ್ರವನ್ನೂ ಜನ ಮೆಚ್ಚಿಕೊಂಡರು.

ಇನ್ನು, ನಾಲ್ಕನೆ ನಟಿ ಚೈತ್ರಾ ಆಚಾರ್. ಚೈತ್ರಾ ಕೂಡ ಅಪ್ಪಟ ಕನ್ನಡತಿ. ನೇರವಾಗಿ ಮಾತಾಡುವ ಮಾತುಗಾತಿ. ಇವರು ಈ ವರ್ಷ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಎರಡು ಸಿನಿಮಾಗಳೂ ಕೂಡ ಪ್ರಯೋಗಾತ್ಮಕ ಚಿತ್ರಗಳು ಅನ್ನೋದು ವಿಶೇಷ. ಆ ಪೈಕಿ ದೀಕ್ಷಿತ್ ಶೆಟ್ಟಿ ಅಭಿನಯದ ಬ್ಲಿಂಕ್ ಸಿನಿಮಾ ಒಂದಾದರೆ, ಮತ್ತೊಂದು ಸಿನಿಮಾ ಹ್ಯಾಪಿ ಬರ್ತ್ ಡೇ ಟು ಮಿ. ಅಂದಹಾಗೆ, ರಾಕೇಶ್ ಖದ್ರಿ ನಿರ್ದೇಶನದ ಈ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಯ್ತು. ಬ್ಲಿಂಕ್ ಚಿತ್ರದ ದೇವಕಿ ಪಾತ್ರದಲ್ಲಿ ಗಮನಸೆಳೆದರೆ, ಹ್ಯಾಪಿ ಬರ್ತ್‌ಡೇ ಟು ಮಿ ಚಿತ್ರದಲ್ಲಿ ಅದಿತಿಯಾಗಿ ಕಾಣಿಸಿಕೊಂಡರು.

ಇನ್ನು, ಈ ವರ್ಷ ಹಿಟ್ ಸಿನಿಮಾ ಎನಿಸಿಕೊಂಡ ಕೃಷ್ಣಂ ಪ್ರಯಣ ಸಖಿ ಸಿನಿಮಾದ ನಾಯಕಿ ಮಾಳವಿಕಾ ನಾಯರ್ ಕೂಡ ಗಮನ ಸೆಳೆದರು. ಮೂಲ ಮಲಯಾಳಂ ಚಿತ್ರರಂಗದ ಬ್ಯೂಟಿಫುಲ್ ನಟಿ ಮಾಳವಿಕಾ ನಾಯರ್ ಕೃಷ್ಣಂ ಪ್ರಣಯ ಸಖಿ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಕನ್ನಡದ ಮೊದಲ ಚಿತ್ರದಲ್ಲೇ ಅವರು ನೋಡುಗರ ಮನಗೆದ್ದರು. ಸಿನಿಮಾದ ಹಾಡು ಸೂಪರ್ ಹಿಟ್ ಆಯ್ತು. ಸಿನಿಮಾ ಕೂಡ ಶತದಿನ ಪೂರೈಸಿದ್ದು ವಿಶೇಷ.

ಇನ್ನು, ದುನಿಯಾ ವಿಜಯ್ ಅಭಿನಯದ ಭೀಮ ಮೂಲಕ ಎಂಟ್ರಿಯಾದ ಅಶ್ವಿನಿ ಕೂಡ ಗಮನಸೆಳೆದಿದ್ದು ವಿಶೇಷ. ಅಶ್ವಿನಿ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದರು. ಸಿನಿಮಾದಲ್ಲಿ ರಾಶಿ ರಾಶಿ ಪಾತ್ರಗಳಿದ್ದರೂ, ಅಶ್ವಿನಿ ಪಕ್ಕಾ ಲೋಕಲ್ ಹುಡುಗಿಯಾಗಿ, ಸ್ಲಂ ವಾತಾವರಣದ ಪಾತ್ರವನ್ನು ನೈಜವಾಗಿ ಕಟ್ಟಿಕೊಡುವ ಮೂಲಕ ಗಮನಸೆಳೆದರು.

ಅದೇನೆ ಇರಲಿ, ಕನ್ನಡದಲ್ಲಿ ನಟಿಯರ ಕೊರತೆ ಇದೆ ಅನ್ನೋರಿಗೆ ಇಷ್ಟು ನಟಿಯರ ಜೊತೆ ಮತ್ತಷ್ಟು ಹೊಸ ನಟಿಯರ ಆಗಮನವೂ ಆಗಿದೆ. ಅವರೆಲ್ಲರೂ ಹಿಟ್ ಸಿನಿಮಾ ಕೊಡಲು ಕಾಯುತ್ತಿದ್ದಾರೆ. ಮೇಜರ್ ಸಿನಿಮಾಗಳ ಮೂಲಕ ಗುರುತಿಸಿಕೊಂಡು ಈ ನಟಿಯರ ಮುಂದೆ ಈಗ ಸಾಲು ಸಾಲು ಅವಕಾಶಗಳಿವೆ. ಮುಂದಿನ ವರ್ಷ ಒಂದಷ್ಟು ಹೊಸಬಗೆಯ ಕಥೆ ಆಯ್ಕೆ ಮಾಡಿಕೊಂಡು ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ.

ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

About The Author