Shivamogga News: ಶಿವಮೊಗ್ಗದ ಪಬ್ಲಿಕ್ ಟಿವಿ ವರದಿಗಾರ ಶಶಿಧರ್ ಕೆ.ವಿ ಇನ್ನಿಲ್ಲ. ಇಂದು ಬೆಳಿಗ್ಗೆ ತಮ್ಮ ಶಿವಮೊಗ್ಗದ ನಿವಾಸದಲ್ಲಿ ಬಾತ್ ರೂಂ ಗೆ ಹೋದ ಶಶಿಧರ್ ಆಕಸ್ಮಿಕವಾಗಿ ಹಿಮ್ಮುಖವಾಗಿ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಮನೆಯಲ್ಲಿ ಯಾರು ಇಲ್ಲದ ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು. ಬಳಿಕ ಶಶಿಧರ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ, ಶಶಿಧರ್ ಸಾವನ್ನಪ್ಪಿದ್ದಾರೆ.
ಇನ್ನು ಶಶಿಧರ್ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಂಬನಿ ಮಿಡಿದಿದ್ದು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು. ಅಸ್ಪತ್ರೆಯಿಂದ ಟ್ರಸ್ಟ್ ಕಚೇರಿಯವರೆಗೆ ಮೆರವಣಿಗೆ ಕೂಡ ನಡೆಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೂರಿಗೆ ಸಮೀಪದ ಕಲ್ಲಳ್ಳಿ ಗ್ರಾಮದ, ತಂದೆ ವಸಂತಪ್ಪ ಹಾಗೂ ತಾಯಿ ಸಾವಿತ್ರಮ್ಮನ ಹಿರಿಯ ಪುತ್ರನಾಗಿ ಜನಿಶಿದ ಶಶಿ ಸ್ವಗ್ರಾಮದಲ್ಲಿ ಬಳಿಕ ಅರಸೀಕೆರೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದರು.
ಪತ್ರಿಕೋಧ್ಯಮಕ್ಕೆ ಬರುವ ಆಶಯದೊಂದಿಗೆ ಮೈಸೂರಿನಲ್ಲಿ 2006 ರಲ್ಲಿ ಎಂಎ ಜರ್ನಲಿಸಂ ಸೇರ್ಪಡೆಗೊಂಡರು. ಸ್ನಾತಕೊತ್ತರ ಪದವಿಯ ನಂತರ ಈಟಿವಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ಬಳಿಕ ಚಾಮರಾಜ ನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಐದು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದರು. ಈ ಸಂದರ್ಭದಲ್ಲಿ ಕಿಡ್ನಿ ಸಮಸ್ಯೆ ಎದುರಾಗಿ, ಡಯಾಲೀಸ್ ಚಿಕಿತ್ಸೆಗೆ ಒಳಗಾಗಿದ್ದರೂ, ಶಶಿಧರ್, ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಶಶಿಧರ್ ಅವರ ಅಕಾಲಿಕ ನಿಧನರಾಗಿದ್ದು, ನಾಳೆ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.