ಮೀಟರ್‌ ಬಡ್ಡಿ ದಂಧೆಕೋರರ ಹಾವಳಿ: ಗದಗನಲ್ಲಿ ಅರೆಬೆತ್ತಲೆಗೊಳಿಸಿ, ವ್ಯಕ್ತಿಯ ಮೇಲೆ ಹಲ್ಲೆ

Gadag News: ಕಾನೂನು ಸಚಿವರ ತವರೂರಿನಲ್ಲೇ ಅಮಾನುಷ ಕೃತ್ಯವೊಂದು ನಡೆದಿದ್ದು, ವ್ಯಕ್ತಿಯೋರ್ವನನ್ನು ಕಿಡಿಗೇಡಿಗಳು ಅರೆ ಬೆತ್ತಲೆ ಮಾಡಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗದಗ ನಗರದ ಡಿಸಿ ಮಿಲ್ ನಿವಾಸಿಯಾಗಿರುವ ದಶರಥ ಬಳ್ಳಾರಿ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದ್ದು, ರೌಡಿ ಶೀಟರ್ ಡಿಸ್ಕವರಿ ಮಂಜು, ಮಂಜುನಾಥ ಹಂಸನೂರು, ಮಹೇಶ್ ಹಂಸನೂರು, ಹನುಮಂತ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸತತ 6 ಗಂಟೆಗಳ ಕಾಲ ಬಾಯಿಗೆ ಬಟ್ಟೆ ಹಾಕಿ ಥಳಿಸಿದ್ದು, ಹಲ್ಲೆಯ ರಭಸಕ್ಕೆ ದೇಹದ ತುಂಬೆಲ್ಲಾ ಬಾಾಸುಂಡೆ ಎದ್ದು, ನಡೆಯಲು ಆಗದೇ, ಕೂರಲು ಆಗದೇ ನರಳಾಡಿದ್ದಾರೆ.

ಒಂದು ಲಕ್ಷ ರೂಪಾಯಿ ಸಾಲಕ್ಕಾಗಿ ಈ ರೀತಿ ಹಲ್ಲೆ ಮಾಡಲಾಗಿದ್ದು, ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿ, ಕೇಬಲ್ ವಯರ್, ಬೆಲ್ಟ್‌ನಿಂದ ಬೆನ್ನು ಮತ್ತು ಕಾಲಿಗೆ ಹಲ್ಲೆ ಮಾಡಲಾಗಿದೆ. ಹಲ್ಲೆಕೋರರಿಂದ ಎಸ್ಕೇಪ್ ಆಗಿ, ದಶರಥ ಬಳ್ಳಾರಿ ಜೀವ ಉಳಿಸಿಕೊಂಡಿದ್ದಾನೆ. ಗಾಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಆದರೆ ಪೊಲೀಸರು ಇನ್ನೂವರೆಗೂ ಆರೋಪಿಗಳನ್ನು ಮಾತ್ರ ಬಂಧಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

About The Author