Tuesday, February 4, 2025

Latest Posts

Bengaluru News: ಸಾವಿರಾರು ಜನರಿಂದ ವಾಕ್ ಥಾನ್ ಮೂಲಕ ಕ್ಯಾನ್ಸರ್ ಕುರಿತು ಜಾಗೃತಿ

- Advertisement -

Bengaluru News: ಬೆಂಗಳೂರು: ಪ್ರಕ್ರಿಯಾ ಆಸ್ಪತ್ರೆಯ ಸಹಯೋಗದೊಂದಿಗೆ ಅದ್ವಿಕಾ ಫೌಂಡೇಶನ್ ಆಯೋಜಿಸಿದ್ದ ಬೃಹತ್ ವಾಕಥಾನ್ ನಲ್ಲಿ ಸಾವಿರಾರು ಜನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದರು.

ವಿಧಾನಸೌಧದಿಂದ ಪ್ರಾರಂಭವಾದ ಈ ವಾಕಥಾನ್ ಬಾಲ ಭವನದಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಕ್ಯಾನ್ಸರ್ ನಿಂದ ಗುಣಮುಖರಾದವರು ಈ ಕಾಯಿಲೆಯ ವಿರುದ್ಧದ ತಮ್ಮ ಹೋರಾಟದ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ ಅವರು ಇಂತಹ ಉಪಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು. “ನಾವು ಪ್ರತಿದಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಏರಿಕೆಯನ್ನು ಕಾಣುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಬೆಂಗಳೂರಿಗರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಯಾನ್ಸರ್ ರಾಜ್ಯ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ಈ ಉದ್ದೇಶವನ್ನು ಬೆಂಬಲಿಸಬೇಕು” ಎಂದು ಹೇಳಿದರು.

ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ ಶ್ರೀನಿವಾಸ್ ಚಿರುಕುರಿ ಮಾತನಾಡಿ “ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ ಗುಣಪಡಿಸಬಹುದು ಮತ್ತು ಕ್ಯಾನ್ಸರ್ ನಿಂದ ಬದುಕುಳಿದವರು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ವಾಸ್ತವವಾಗಿ, 10 ರಿಂದ 15 ವರ್ಷಗಳ ಹಿಂದೆ ಚಿಕಿತ್ಸೆ ಪಡೆದ ಅನೇಕ ಕ್ಯಾನ್ಸರ್ ನಿಂದ ಬದುಕುಳಿದವರು ಈಗ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿಯೇ ಈ ಕಾಯಿಲೆ ಪತ್ತೆಯಾದರೆ ಜೀವ ರಕ್ಷಣೆ ಸಾಧ್ಯ ಎಂಬುದು ಈಗ ಸಂಪೂರ್ಣ ಗುಣಮುಖಗೊಂಡವರ ಪ್ರಕರಣದಿಂದ ಸಾಬೀತಾಗಿದೆ. ಜನರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು, ಜೀವನಶೈಲಿಯ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬೇಕು, ಸರಿಯಾಗಿ ಆಹಾರ ಸೇವಿಸಬೇಕು ಮತ್ತು ಸಕಾಲಿಕ ವೈದ್ಯಕೀಯ ಸಲಹೆಗಳನ್ನು ಪಡೆಯಬೇಕು. ಸುಧಾರಿತ ತಂತ್ರಜ್ಞಾನ ಮತ್ತು ವಿಶೇಷ ಚಿಕಿತ್ಸೆಗಳೊಂದಿಗೆ, ನಾವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು. ಭಯಪಡುವ ಅಗತ್ಯವಿಲ್ಲ ಆದರೆ ತಡೆಗಟ್ಟುವಿಕೆಯತ್ತ ಗಮನ ಹರಿಸುವುದು ಅತ್ಯಗತ್ಯ” ಎಂದು ಅವರು ಹೇಳಿದರು.

ಕ್ಯಾನ್ಸರ್ ವಿರುದ್ಧದ ಹೋರಾಟದ ಮೇಲೆ ಗಮನ ಹರಿಸುವುದನ್ನು ಒತ್ತಿ ಹೇಳಿದ, ಅದ್ವಿಕಾ ಕೇರ್ ಫೌಂಡೇಶನ್‌ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ವಾರಿಯರ್, “ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ನಾವು ನಿರಂತರ ಪ್ರಯತ್ನಗಳನ್ನ ಮಾಡುತ್ತಿದ್ದೇವೆ. 100 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಣ ಸಂಗ್ರಹ ಮಾಡುತ್ತಿದ್ದು, ಇದಕ್ಕಾಗಿ ಕೈ ಜೋಡಿಸಬೇಕು. ಕ್ಯಾನ್ಸರ್ ನಿಂದ ಬದುಕುಳಿದವರು ಮತ್ತು ಸ್ವಯಂಸೇವಕರು ಸೇರಿದಂತೆ ಸಾವಿರಕ್ಕಿಂತ ಅಧಿಕ ಜನ ಭಾಗವಹಿಸುವಿಕೆ ಸಂತಸ ಹಾಗೂ ಉತ್ಸಾಹ ಮೂಡಿಸಿದೆ. ಮುಂಬರುವ ತಿಂಗಳುಗಳಲ್ಲಿ ಇಂತಹ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ” ಎಂದು ಅವರು ಹೇಳಿದರು.

“ಬೆಂಗಳೂರು ಜನ ಭಾನುವಾರ ದಿನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಜೊತೆಯಾಗಿದ್ದು ಹರ್ಷದ ಸಂಗತಿ. ಈ ಕಾರ್ಯಕ್ರಮದ ಧ್ಯೇಯವೆಂದರೆ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ನಂತರದ ಆರೈಕೆಯ ಕುರಿತು ಗಮನ ಹರಿಸುವುದು. ಹೆಚ್ಚಿನ ಜನ ನೆರೆದಿರುವುದು ಕಂಡು ನಾವು ರೋಮಾಂಚನಗೊಂಡಿದ್ದೇವೆ. ಭವಿಷ್ಯದಲ್ಲಿ ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಪ್ರಮುಖ ಸಂದೇಶವನ್ನು ಮುಂದುವರಿಸಲು ನಾವು ಆಶಿಸುತ್ತೇವೆ” ಎಂದು ಅದ್ವಿಕಾ ಕೇರ್ ಫೌಂಡೇಶನ್‌ನ ಟ್ರಸ್ಟಿ ಬಾಲಾ ವಾರಿಯರ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಬೈಕರ್ ಗುಂಪುಗಳು, ವಿದ್ಯಾರ್ಥಿಗಳು ಮತ್ತು ಆರೋಗ್ಯ ಕ್ಷೇತ್ರದವರು ಭಾಗವಹಿಸಿದ್ದರು. ಸ್ಥಳೀಯ ಬೈಕರ್ ಕ್ಲಬ್‌ನ ಅಧ್ಯಕ್ಷ ಚೇತನ್, “ನಿಯಮಿತ ಆರೋಗ್ಯ ತಪಾಸಣೆ ಮತ್ತು ಸರಿಯಾದ ಆರೋಗ್ಯ ವಿಮೆ ನಿರ್ಣಾಯಕ. ಇಂದು, ನಮ್ಮಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯುತ್ತಮ ವೈದ್ಯರು ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳಿವೆ. ಆದರೂ, ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವತ್ತ ಗಮನ ಹರಿಸಬೇಕು. ವಾಕಥಾನ್ ಸಮಯದಲ್ಲಿ, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಜಾಗೃತಿ ಮೂಡಿಸಲು ಸಹಾಯ ಮಾಡುವುದನ್ನು ನೋಡುವುದು ಸ್ಪೂರ್ತಿದಾಯಕವಾಗಿತ್ತು. ಅದ್ವಿಕಾ ಕೇರ್ ಫೌಂಡೇಶನ್ ಮತ್ತು ಪ್ರಕ್ರಿಯಾ ಆಸ್ಪತ್ರೆ ಕ್ಯಾನ್ಸರ್ ಜಾಗೃತಿ ಉಪಕ್ರಮಗಳಲ್ಲಿ ಮುಂಚೂಣಿಯಲ್ಲಿವೆ, ಇತ್ತೀಚೆಗೆ ತಮ್ಮ ಉದ್ದೇಶವನ್ನು ಮುಂದುವರಿಸಲು ಬೈಕಥಾನ್ ಅನ್ನು ಆಯೋಜಿಸಿವೆ, ಎಂದು ಹೇಳಿದರು.

- Advertisement -

Latest Posts

Don't Miss