Political News: ಇಂದು ಧಾರವಾಡ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಈ ಕಾರಣಕ್ಕೆ ಸಚಿವರಾದ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಇದು ಸತ್ಯಕ್ಕೆ ಸಿಕ್ಕಿರುವ ಜಯ ಎಂದಿದ್ದಾರೆ.
ಮುಡಾ ಪ್ರಕರಣವನ್ನು CBIಗೆ ವಹಿಸಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದು ಸತ್ಯಕ್ಕೆ ಸಿಕ್ಕಿರುವ ಜಯ. ಸಿದ್ದರಾಮಯ್ಯರನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಸಿಬಿಐನಿಂದ ಕಿರುಕುಳ ಕೊಡಿಸಲು ರಾಜಕೀಯ ಪಿತೂರಿಯಿಂದ ಈ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಘನ ನ್ಯಾಯಾಲಯ ಈ ಅರ್ಜಿಯನ್ನು ಮಾನ್ಯ ಮಾಡಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ಪಾತ್ರವಿಲ್ಲದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟ. ಆದರೂ ಸಿದ್ದರಾಮಯ್ಯರ ಹೆಸರಿಗೆ ಕಳಂಕ ತರಲು ಹಾಗೂ ಅವರನ್ನು ರಾಜಕೀಯವಾಗಿ ಮುಗಿಸಲು ದೊಡ್ಡ ಮಟ್ಟದ ಷಡ್ಯಂತ್ರ ನಡೆಯುತ್ತಿದೆ. ನಿಷ್ಕಳಂಕ ಸಾರ್ವಜನಿಕ ಜೀವನ ನಡೆಸಿರುವ ಸಿದ್ದರಾಮಯ್ಯ ವಿರೋಧಿಗಳ ಈ ಕುಟಿಲ ತಂತ್ರಗಳಿಗೆ ಹೆದರುವವರಲ್ಲ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಅರ್ಜಿಯನ್ನು ಧಾರವಾಡ ಹೈಕೋರ್ಟ್ ತಿರಸ್ಕರಿಸಿದ್ದರ ಬಗ್ಗೆ ಸ್ನೇಹಮಯಿ ಕೃಷ್ಣ ಪರ ವಕೀಲರಾದ ಲಕ್ಷ್ಮಣ್ ಕುಲಕರ್ಣಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ನಮ್ಮ ಪರ ತೀರ್ಪು ಬರುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದ್ರೆ ಘನ ನ್ಯಾಯಾಲಯ ನಮ್ಮ ಅರ್ಜಿಯನ್ನ ತಿರಸ್ಕರಿಸಿದೆ. ಇಂದೇ ನಾವು ಕೋರ್ಟ್ ಆದೇಶದ ಪ್ರತಿ ಪಡೆಯುತ್ತೇವೆ. ಅದನ್ನ ಸ್ಟಡಿ ಮಾಡಿ ನಂತರ ಮೇಲ್ಮನವಿ ಸಲ್ಲಿಸುತ್ತೇವೆ. ಯಾವ ತಳಹದಿ ಮೇಲೆ ತೀರ್ಪು ಕೊಟ್ಟಿದ್ದಾರಂತ ಪರಿಶೀಲನೆ ಮಾಡ್ತೇವೆ. ಸುಪ್ರೀಂ ಕೋರ್ಟ್ ಗೆ ಹೋಗೋದು ಖಚಿತ ಎಂದು ವಕೀಲ ಲಕ್ಷ್ಮಣ್ ಕುಲಕರ್ಣಿ ಹೇಳಿದ್ದಾರೆ.