Movie News: ತಮಿಳು ನಟ ವಿಶಾಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಸಿನಿಮಾ ಪ್ರಮೋಷನ್ ವೇಳೆ ನಡುಗುತ್ತಿದ್ದರು. ಮೈಕ್ ಹಿಡಿಯಲು ಕಷ್ಟಪಡುತ್ತಿದ್ದರು. ಕೆಲವರು ಇವರ ಈ ಸ್ಥಿತಿ ನೋಡಿ ಮರುಕ ಪಟ್ಟರೆ, ಮತ್ತೆ ಕೆಲವರು ಖುಷಿ ಪಟ್ಟರು, ವಿಶಾಲ್ ಫ್ಯಾನ್ಸ್, ಬೇಗ ನಮ್ಮ ನೆಚ್ಚಿನ ನಟ ಗುಣಮುಖರಾಗಿ ಬರಲಿ ಎಂದು ಹಾರೈಸಿದರು.
ಇದೀಗ ಅನಾರೋಗ್ಯ ಹಿನ್ನೆಲೆ ನಟ ವಿಶಾಲ್ ಉಡುಪಿಗೆ ಬಂದು ಕಾರ್ಣಿಕ ದೈವಗಳ ಮೊರೆ ಹೋಗಿದ್ದಾರೆ. ತುಳುನಾಡ ದೈವಗಳನ್ನು ಬರಿ ತುಳುವರಷ್ಟೇ ಅಲ್ಲ, ಭಾರತ ಸೇರಿ, ದೇಶ ವಿದೇಶಗಳ ಜನ ನಂಬುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಬಂದು ಕೊರಗಜ್ಜನ ಕೋಲದಲ್ಲಿ ಭಾಗಿಯಾಗಿ ಹೋಗಿದ್ದರು. ಆಕೆಗೂ ತುಳು ನಾಡಿಗೂ ಸಂಬಂಧವೇ ಇಲ್ಲ. ಆದರೂ ಆಕೆ ಬಂದು ಕೊರಗಜ್ಜನಿಗೆ ಸೇವೆ ನೀಡಿದ್ದರು.
ಇದೀಗ ವಿಶಾಲ್ ಕೂಡ ತಮ್ಮ ಅನಾರೋಗ್ಯ ಸರಿಪಡಿಸಲು, ನೆಮ್ಮದಿ ಮತ್ತು ಆರೋಗ್ಯಕರ ಜೀವನಕ್ಕಾಗಿ ದೈವಗಳ ಮೊರೆ ಹೋಗಿದ್ದಾರೆ. ಮುಲ್ಕಿ ಸಮೀಪದ ಜಾರಂದಾಯ ದೈವಸ್ಥಾನದಲ್ಲಿ ನಡೆದ ಕೋಲದಲ್ಲಿ ವಿಶಾಲ್ ಭಾಗಿಯಾಗಿದ್ದರು. ಕೋಲದಲ್ಲಿ ಭಾಗಿಯಾಗಿ, ದೈವಕ್ಕೆ ಮಲ್ಲಿಗೆ ನೀಡಿ, ವಿಶಾಲ್ ತಮ್ಮೂರಿಗೆ ಹೊರಟರು.