Recipe: ಬೇಕಾಗುವ ಸಾಮಗ್ರಿ : 2 ಕಪ್ ಮೈದಾ, 3 ಸ್ಪೂನ್ ತುಪ್ಪ, ಕೊಂಚ ವೋಮ, ನೀರು, ಉಪ್ಪು ಇವಿಷ್ಟು ಕಚೋರಿ ಕಣಕಕ್ಕೆ ಬೇಕಾದ ಸಾಮಗ್ರಿ. ಈಗ ಹೂರಣಕ್ಕೆ, 2ರಿಂದ 3 ಕಪ್ ಬಟಾಣಿ. ಹಸಿ ಬಟಾಣಿ ಇದ್ದರೆ ಉತ್ತಮ. ಚಿಕ್ಕ ತುಂಡು ಶುಂಠಿ, 4 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಸೋಂಪು, ಕೊಂಚ ಹಿಂಗು, 2 ಸ್ಪೂನ್ ಕಡಲೆಹಿಟ್ಟು, ಕೊಂಚ ಅರಿಶಿನ ಪುಡಿ, 1 ಸ್ಪೂನ್ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಕೊಂಚ ಸಕ್ಕರೆ ಮತ್ತು ಉಪ್ಪು. ಕರಿಯಲು ಎಣ್ಣೆ.
ಮಾಡುವ ವಿಧಾನ : ಮೊದಲು ಒಂದು ಮಿಕ್ಸಿಂಗ್ ಬೌಲ್‌ಗೆ ಮೈದಾ, ತುಪ್ಪ, ವೋಮ, ಉಪ್ಪು, ನೀರು ಹಾಕಿ ಕಚೋರಿ ಹಿಟ್ಟನ್ನು ನಾದಿಕೊಳ್ಳಿ. ಇದಕ್ಕೆ ಒಂದು ಬಿಳಿ ಮಸ್ಲಿನ್ ಕ್ಲಾತ್ ಮುಚ್ಚಿಡಿ. ಈಗ ಹೂರಣ ತಯಾರಿಸಿಕೊಳ್ಳಿ. ಮೊದಲು ಪ್ಯಾನ್ ಬಿಸಿ ಮಾಡಿ, ಸ್ವಲ್ಪ ಎಣ್ಣೆ, ಬಟಾಣಿ ಹಾಕಿ ಕೊಂಚ ಹುರಿಯಿರಿ. ಬಳಿಕ ಮಿಕ್ಸಿ ಜಾರ್‌ಗೆ ಶುಂಠಿ, ಹಸಿಮೆಣಸು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಬಳಿಕ ಪ್ಯಾನ್ ಬಿಸಿ ಮಾಡಿ ಎಣ್ಣೆ, ಜೀರಿಗೆ, ಸೋಂಪು, ಹಿಂಗು, ಕಡಲೆ ಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಬಳಿಕ ರುಬ್ಬಿದ ಮಿಶ್ರಣ, ಅರಿಶಿನ, ಉಪ್ಪು, ಸಕ್ಕರೆ, ಚಾಟ್ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ, ಮಿಶ್ರಣ ತಡೆಯಲು ಬಿಡಿ.
ಬಳಿಕ ಹಿಟ್ಟನ್ನು ಕೊಂಚ ಲಟ್ಟಿಸಿ, ಅದರಲ್ಲಿ ಹೂರಣ ತುಂಬಿಸಿ, ಕಚೋರಿ ಶೇಪ್ ಕೊಡಿ. ಎಣ್ಣೆ ಬಿಸಿ ಮಾಡಲು ಇಡಿ. ರೆಡಿ ಮಾಡಿಟ್ಟುಕೊಂಡಿದ್ದನ್ನು ಎಣ್ಣೆಯಲ್ಲಿ ಹಾಕಿ, ಮಂದ ಉರಿಯಲ್ಲಿ ಲೈಟ್ ಕಂದು ಬಣ್ಣ ಬರುವವರೆಗೂ ಕರಿಯಿರಿ. ಈಗ ಬಟಾಣಿ ಕಚೋರಿ ರೆಡಿ. ಇದನ್ನು ಪುದೀನಾ ಚಟ್ನಿ ಮತ್ತು ಹುಣಸೆ ಚಟ್ನಿಯೊಂದಿಗೆ ಅಥವಾ ಟೊಮೆಟೋ ಸಾಸ್ ನೊಂದಿಗೆ ಸವಿಯಿರಿ.