Sports News: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕಿ ಡಾ. ಶಮಾ ಮೊಹಮ್ಮದ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ಶಮಾ ಮೊಹಮ್ಮದ್, ಕ್ರೀಡಾಳುವಾಗಿ ರೋಹಿತ್ ಶರ್ಮಾ ಅವರು ಹೆಚ್ಚು ತೂಕ ಹೊಂದಿದ್ದಾರೆ. ಅವರು ತಮ್ಮ ತೂಕ ಇಳಿಸಿಕೊಳ್ಳಬೇಕಿದೆ. ಅಲ್ಲದೆ, ಅವರೊಬ್ಬ ಭಾರತ ಕಂಡ ಕಳಪೆ ಕ್ಯಾಪ್ಟನ್ ಎಂದು ಟೀಕಿಸಿದ್ದಾರೆ.
ಅಲ್ಲದೆ ಹಿಂದಿನ ನಾಯಕರಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಕಪಿಲ್ ದೇವ್ ಸೇರಿದಂತೆ ರವಿಶಾಸ್ತ್ರಿ ಅವರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರನ್ನು ವಿಶ್ವದರ್ಜೆಯ ಆಟಗಾರ ಎಂದು ಹೇಳಿಕೊಳ್ಳುವ ಯಾವುದೇ ವಿಚಾರಗಳಿಲ್ಲ ಎಂದಿದ್ದರು. ಇನ್ನೂ ಶರ್ಮಾಕುರಿತು ಶಮಾ ಮೊಹಮ್ಮದ್ ಮಾಡಿದ್ದ ವ್ಯಂಗ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡುವ ಹಕ್ಕು, ಅಧಿಕಾರ ಯಾರಿಗೂ ಇಲ್ಲ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಿಡಿ ಕಾರಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಅವರ ಕ್ರಿಕೆಟ್ ಬದುಕಿನ ಸಾಧನೆಯ ಅಂಕಿ-ಅಂಶಗಳನ್ನು ಬಿಚ್ಚಿಡುವ ಮೂಲಕ ಸಿಂಗ್ ತಿರುಗೇಟು ನೀಡಿದ್ದಾರೆ.
ಇಷ್ಟೇ ಅಲ್ಲದೆ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಈ ವಿವಾದದಲ್ಲಿ ಬಿಜೆಪಿ ಎಂಟ್ರಿ ಕೊಟ್ಟಿದ್ದು, ಕಾಂಗ್ರೆಸ್ ವಕ್ತಾರೆಯ ವಿರುದ್ಧ ಕೆಂಡಕಾರಿದೆ. ನಮ್ಮದು ಪ್ರೀತಿಯ ಅಂಗಡಿ ಎಂದು ಹೇಳಿಕೊಂಡು ತಿರುಗಾಡುವ ಕಾಂಗ್ರೆಸ್‌ನಲ್ಲಿ ದ್ವೇಷವನ್ನು ಹರಡುವವರಿದ್ದಾರೆ. ಅಲ್ಲದೆ ಕಳೆದ 10 ವರ್ಷಗಳಲ್ಲಿ ಒಟ್ಟು 90 ಚುನಾವಣೆಗಳಲ್ಲಿ ಸೋತಿರುವ ನಾಯಕನ ಹಿಂಬಾಲಕರು ರೋಹಿತ್ ಶರ್ಮಾ ಬಗ್ಗೆ ಮಾತನಾಡುವುದು ನಿಜಕ್ಕೂ ಶೋಚನೀಯ ಎಂದು ಹೇಳಿದೆ. ಅಲ್ಲದೆ ಹೀನಾಯ ಸೋಲುಗಳನ್ನು ಅನುಭವಿಸಿರುವ ಅದೇ ನಾಯಕನನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಇನ್ನೂ ಭಾರತಕ್ಕಾಗಿ ಟೀ 20 ವಿಶ್ವಕಪ್ ಗೆಲುವಿಗೆ ಕಾರಣರಾದ ರೋಹಿತ್ ಶರ್ಮಾಅವರ ನಾಯಕತ್ವ ಅದ್ಭುತ ಸಾಧನೆ ಮಾಡಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಶಮಾ ಮೊಹಮ್ಮದ್‌ಗೆ ಟಾಂಗ್ ನೀಡಿದ್ದಾರೆ.
ಇನ್ನೂ ಐಸಿಸಿ ಚಾಂಪಿಯನ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಭಾರತದ ಕ್ರಿಕೆಟ್ ತಂಡವನ್ನು ಅತ್ಯಂತ ಜವಾಬ್ದಾರಿಯಿಂದ ಸೆಮಿಫೈನಲ್‌ಗೆ ಕೊಂಡೊಯ್ದಿದ್ದಾರೆ. ಮುಂದಿನ ಪಂದ್ಯಕ್ಕೆ ತಂಡವು ಸಿದ್ದವಾಗುತ್ತಿರುವ ಸಮಯದಲ್ಲಿಯೇ ಜವಾಬ್ದಾರಿ ಸ್ಥಾನದಲ್ಲಿರುವವರು ಭಾರತ ತಂಡದ ನಾಯಕನ ಬಗ್ಗೆ ಅನಿರೀಕ್ಷಿತ ಹೇಳಿಕೆ ನೀಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಸಮಾಧಾನ ಹೊರಹಾಕಿದ್ದಾರೆ.
ವಿವಾದದ ಸ್ವರೂಪ ಜಾಸ್ತಿಯಾಗುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್, ಶಮಾ ಮೊಹಮ್ಮದ್‌ಗೆ ಛೀಮಾರಿ ಹಾಕಿದ್ದಲ್ಲದೆ, ಭವಿಷ್ಯದಲ್ಲಿ ಯಾವುದೇ ಪೋಸ್ಟ್ ಅಥವಾ ಹೇಳಿಕೆಯನ್ನು ನೀಡುವಾಗ ಪ್ರಜ್ಞೆ ಇರಲಿ ಎಂದು ಖಡಕ್ ಎಚ್ಚರಿಕೆ ನೀಡಿದೆ. ಅಲ್ಲದೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತೇಪೆ ಹಚ್ಚಿರುವ ಕಾಂಗ್ರೆಸ್, ಶಮಾ ಮೊಹಮ್ಮದ್ ಹೇಳಿಕೆ ಅದು ಅವರ ವೈಯಕ್ತಿಕವಾಗಿದೆ. ಅದಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ನಾವು ಕ್ರೀಡಾಪಟುಗಳ ಸಾಧನೆಯನ್ನು ಗೌರವಿಸುತ್ತೇವೆ. ಇನ್ನೂ ನಮ್ಮ ಪಕ್ಷದ ಘನತೆಯನ್ನು ಕುಂದಿಸುವ ಯಾವುದೇ ಹೇಳಿಕೆಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸ್ಪಷ್ಟನೆ ನೀಡಿದ್ದಾರೆ. ಇಷ್ಟೆಲ್ಲ ವಿರೋಧದ ಬಳಿಕ ತಮ್ಮ ಟ್ವೀಟ್ ಡಿಲಿಟ್ ಮಾಡಿ, ನನಗೆ ಶರ್ಮಾ ಬಗ್ಗೆ ಹೆಮ್ಮೆಯಿದೆ. ಅವರ ಫಿಟ್ನೆಸ್ ಬಗ್ಗೆ ಮಾತಾಡುತ್ತಿದ್ದೆ ಎಂದು ಶಮಾ ಮೊಹಮ್ಮದ್ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.