International News: ಭವಿಷ್ಯದಲ್ಲಿ ಕೆನಡಾ ದೇಶಕ್ಕೆ ಕಠಿಣ ಸವಾಲುಗಳು ಎದುರಾಗಲಿವೆ. ನಮ್ಮ ಸರ್ಕಾರವು ಕೆನ್ನಡಿಯನ್ನರ ಅಭಿವೃದ್ದಿಗಾಗಿ ಕೆಲಸ ಮಾಡಿದೆ ಎಂದು ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರುಡೊ ಭಾವುಕರಾಗಿ ನುಡಿದಿದ್ದಾರೆ.
ಅಮೆರಿಕದೊಂದಿಗೆ ಕೆನಡಾ ತೆರಿಗೆ ಸಂಘರ್ಷವನ್ನು ನಡೆಸುತ್ತಿರುವ ಹೊತ್ತಿನಲ್ಲಿಯೇ ಟ್ರುಡೊ ಈ ರೀತಿಯ ಹೇಳಿಕೆ ನೀಡಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಕೆನಡಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವು ಕೆನಡಾವನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಿಸಿದೆ. ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹೇರಿರುವ ಹೆಚ್ಚುವರಿ ತೆರಿಗೆ ನೀತಿಯು ನಮ್ಮ ದೇಶದ ಪಾಲಿಗೆ ಅತ್ಯಂತ ಆಘಾತಕಾರಿಯಾದ ನೀತಿಯಾಗಿದೆ. ಆದರೆ ಎಂತಹ ಸಂದರ್ಭದಲ್ಲೂ ಹಾಗೂ ಯಾವುದೇ ಕಾರಣಕ್ಕೂ ಇನ್ನೊಂದು ದೇಶದ ಎದುರು ಕೆನಡಾ ಶರಣಾಗಲು ಬೀಡುವುದಿಲ್ಲ ಎಂದು ಜಸ್ಟಿನ್ ಟ್ರುಡೊ ಗುಡುಗಿದ್ದಾರೆ.
ಅಲ್ಲದೆ ಟ್ರಂಪ್ ಸುಂಕ ಹೆಚ್ಚಳ ಕ್ರಮವು ಕೆನಡಾ ಆಕ್ರಮಣದ ಮೊದಲ ಭಾಗವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ದಿನಗಳು ನಮ್ಮ ಪಾಲಿಗೆ ಕಷ್ಟಕರವಾಗಿರಲಿವೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ದೇಶದ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕೆಂದು ಅವರು ಕರೆ ನೀಡಿದ್ದಾರೆ.
ಇನ್ನೂ ಕೆನಡಾದಲ್ಲಿ ತನ್ನ ಜನಮನ್ನಣೆಯನ್ನು ಕಳೆದುಕೊಂಡ ಲಿಬರಲ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದ ಕಾರಣಕ್ಕೆ ಕಳೆದ ಜನವರಿಯಲ್ಲಿ ಟ್ರುಡೊ ತಮ್ಮ ಪ್ರಧಾನಿ ಸ್ಥಾನವನ್ನು ತ್ಯಜಿಸಿದ್ದರು. ಆದರೆ ಮತ್ತೆ ಮಾರ್ಚ್ 9 ರಂದು ತನ್ನ ಹೊಸ ನಾಯಕನ ಆಯ್ಕೆಗೆ ಲಿಬರಲ್ ಪಕ್ಷವು ಸಭೆ ಸೇರಲಿದ್ದು, ಈ ಮೂಲಕ ತನ್ನ ಸ್ವಾಯತ್ತತೆಗೆ ಧಕ್ಕೆ ತರಲು ಮುಂದಾಗಿರುವ ಅಮೆರಿಕದ ಆಕ್ರಮಣಕಾರಿ ನಿಲುವಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.
ಟ್ರುಡೊ ವಿರುದ್ಧ ಟ್ರಂಪ್ ಕೆಂಡ..
ಅಂದಹಾಗೆ ಅಮೆರಿಕ ಹೇರಿರುವ ತೆರಿಗೆಯ ವಿಚಾರವನ್ನೇ ತಮ್ಮ ಚುನಾವಣೆಯಲ್ಲಿ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಟ್ರುಡೊ ವ್ಯವಸ್ಥಿತವಾದ ಪ್ಲಾನ್ ಸಿದ್ದಪಡಿಸುತ್ತಿದ್ದಾರೆ ಎಂಬ ಆಕ್ರೋಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಹಾಕಿದ್ದಾರೆ. ಅಲ್ಲದೆ ತಮ್ಮ ಆಡಳಿತದ 9 ವರ್ಷಗಳಲ್ಲಿ ಸಂಪೂರ್ಣ ಕಳಪೆ ಹಾಗೂ ವಿಫಲ ಆಡಳಿತವನ್ನು ನೀಡಿರುವ ಟ್ರುಡೊ, ಮುಂಬರುವ ಚುನಾವಣೆಯಲ್ಲಿ ಜನರಿಂದ ಅನುಕಂಪ ಪಡೆಯಲು ತೆರಿಗೆ ಹೆಚ್ಚಳದ ವಿಷಯವನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ. ನಿಜವಾಗಿ ಹೇಳುತ್ತಿದ್ದೇನೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಟ್ರುಡೊ ಸುಂಕದ ಅಂಶವನ್ನೇ ಚುನಾವಣೆಯ ಪ್ರಮುಖ ತಂತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಟ್ರಂಪ್ ಕೆಂಡಕಾರಿದ್ದಾರೆ.
ಟ್ರಂಪ್‌ಗೆ ಟಕ್ಕರ್ ಕೊಟ್ಟಿದ್ದ ಟ್ರುಡೊ..
ಇನ್ನೂ ಕಳೆದ ಫೆಬ್ರವರಿ 2 ರಂದು ಅಮೆರಿಕ ಅಧ್ಯಕ್ಷ ಟ್ರಂಪ್, ಕೆನಡಾ ದೇಶದ ಉತ್ಪನ್ನಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ತೆರಿಗೆ ಹೇರುವ ಆದೇಶಕ್ಕೆ ಅಂಕಿತ ಹಾಕಿದ್ದರು. ಅಲ್ಲದೆ ಮುಯ್ಯಿಗೆ ಮುಯ್ಯಿ ಎಂಬಂತೆ ಅಮೆರಿಕಕ್ಕೆ ಪ್ರತಿಯಾಗಿ ಟ್ರುಡೊ ಸಹ ಅಮೆರಿಕ ಸರಕುಗಳಿಗೆ ಶೇ.25 ರಷ್ಟು ಸುಂಕವನ್ನು ಹೆಚ್ಚಳ ಮಾಡುವ ಮೂಲಕ ಟ್ರಂಪ್ ಗರ್ವಭಂಗ ಮಾಡಿದ್ದರು.
ಇದಾದ ಬಳಿಕ ಮಹತ್ವದ ಬೆಳವಣಿಗೆಯೊಂದರಲ್ಲಿ ಕೆನಡಾದ ಕೆಲವು ಸರಕುಗಳ ಮೇಲೆ ಹೇರಲಾಗಿದ್ದ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯುವ ಆದೇಶವನ್ನು ಅಮೆರಿಕವು ಮಾರ್ಚ್ 4 ರಿಂದ ಅನ್ವಯವಾಗುವಂತೆ ಜಾರಿ ಮಾಡಿದೆ. ಅಲ್ಲದೆ ಕೆನಡಾವು ಸಹ ಅಮೆರಿಕದ ಸರಕುಗಳಿಗೆ ವಿಧಿಸಿದ್ದ ಸುಂಕವನ್ನು ಏಪ್ರಿಲ್ 2ರ ವರೆಗೆ ತಡೆ ಹಿಡಿಯುವ ತೀರ್ಮಾನವನ್ನು ಕೈಗೊಂಡಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಸಹ ಇಬ್ಬರು ನಾಯಕರ ನಡುವಿನ ವಾಗ್ಯುದ್ಧ ಮಾತ್ರ ಇನ್ನೂ ಮುಗಿಯದಿರುವುದು ಗಮನಾರ್ಹವಾಗಿದೆ.