National Political News: ಭಾರತೀಯ ಜನತಾ ಪಕ್ಷವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮತ್ತೊಂದು ಅವಧಿಗೆ ಬೆಂಬಲಿಸಲಿದೆ. ಅವರು ನಮ್ಮ ನಾಯಕ ಎಂದು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರತಿಪಾದಿಸಿದ್ದಾರೆ. ಈ ಮೂಲಕ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ಎನ್‌ಡಿಎ ಹೊಸ ಮುಖಕ್ಕೆ ಮಣೆ ಹಾಕಬಹುದು ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದಾರೆ.
ಬಜೆಟ್ ಅಧಿವೇಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1996 ರಿಂದ ಬಿಹಾರದಲ್ಲಿ ಎನ್‌ಡಿಎಯನ್ನು ಮುನ್ನಡೆಸುತ್ತಿರುವ ನಿತೀಶ್ ಕುಮಾರ್ ಅವರ ಆಡಳಿತಕ್ಕೆ ಬಿಜೆಪಿ ತೃಪ್ತಿ ಹೊಂದಿದೆ. ಆದ್ದರಿಂದ ನಿತೀಶ್ ನಿನ್ನೆಯೂ ನಾಯಕರಾಗಿದ್ದರು, ಇಂದೂ ಕೂಡ ಅವರು ಹಾಗೆಯೇ ಇದ್ದಾರೆ. ಅಲ್ಲದೆ ನಾಳೆಯೂ ಅದೇ ರೀತಿ ಇರುತ್ತಾರೆ ಎಂದು ಚೌಧರಿ ಹೇಳಿದ್ದಾರೆ. ಇನ್ನೂ ವಿರೋಧ ಪಕ್ಷದಲ್ಲಿದ್ದಾಗ ನಾವು ಸರ್ಕಾರವನ್ನು ಪ್ರಶ್ನಿಸಬೇಕಾಗಿತ್ತು. ಆದರೆ, ಒಮ್ಮೆ ಒಕ್ಕೂಟದಲ್ಲಿದ್ದರೆ ಬಿಜೆಪಿ ನೂರಕ್ಕೆ ನೂರರಷ್ಟು ತನ್ನ ಮಿತ್ರಪಕ್ಷಗಳ ಜೊತೆ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೂ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಲು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಕಾರಣ ಎಂದು ಅವರೇ ಹಲವು ಬಾರಿ ಹೇಳಿದ್ದಾರೆ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಕೂಡ ಬಿಜೆಪಿ ಬೆಂಬಲದೊಂದಿಗೆ ಸಿಎಂ ಆಗಿದ್ದರು. ಆದರೆ ಅವರು ಆ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮತ್ತೊಂದೆಡೆ, ನಿತೀಶ್ ಕುಮಾರ್ ಅವರೊಂದಿಗೆ ಇಲ್ಲಿ, ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡಬೇಕಿದೆ. ಆದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ನಮ್ಮ ನಾಯಕ ಎಂದು ಸಾಮ್ರಾಟ್ ಚೌಧರಿ ಹೇಳಿರುವುದು ಸಂಚಲನ ಮೂಡಿಸಿದೆ.
ಅಲ್ಲದೆ ತಮ್ಮ ತಂದೆಯನ್ನು ಎನ್‌ಡಿಎ ಮಿತ್ರಕೂಟದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಬಿಜೆಪಿ ನಾಯಕರಿಗೆ ಇತ್ತೀಚಿಗಷ್ಟೇ ಒತ್ತಾಯಿಸಿದ್ದರು.
ಸಿಎಂ ಆದ ಬಳಿಕ ನಿತೀಶ್ ಬಣ ಬದಲಿಸುತ್ತಾರೆ..
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬಿಹಾರದ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಬಿಹಾರದಲ್ಲಿ ಈಗ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗುತ್ತಾರೆ. ಬಳಿಕ ಮೈತ್ರಿ ಬಿಟ್ಟು ಆರ್‌ಜೆಡಿ ಜೊತೆ ದೋಸ್ತಿ ಮಾಡಿಕೊಳ್ಳಲಿದ್ದಾರೆ ಎನ್ನುವ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಅಲ್ಲದೆ ಐದನೇ ಬಾರಿಗೆ ಅಧಿಕಾರದ ಕನಸು ಕಾಣುತ್ತಿರುವ ಅವರು ಮುಖ್ಯಮಂತ್ರಿಯಾಗುವುದಿಲ್ಲ ಎಂಬುದು ನನ್ನ ನಿಲುವು. ಒಂದು ವೇಳೆ ನಾನು ಹೇಳಿರುವುದು ಸುಳ್ಳಾದರೆ, ನನ್ನ ರಾಜಕೀಯ ಪ್ರಚಾರವನ್ನು ಬಿಟ್ಟುಬಿಡುತ್ತೇನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರಕ್ಕೆ ಮುಂದಿನ ಮುಖ್ಯಮಂತ್ರಿಯೆಂದು ನಿತೀಶ್ ಕುಮಾರ್ ಅವರನ್ನು ಘೋಷಿಸಲಿ ಅಂತ ನಾನು ಸವಾಲು ಹಾಕುತ್ತೇನೆ. ಒಂದು ವೇಳೆ ಅವರು ಹಾಗೆ ಮಾಡಿದರೆ ಬಿಹಾರದಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರಶಾಂತ್ ಕಿಶೋರ್ ಎಚ್ಚರಿಸಿದ್ದಾರೆ.
ಇನ್ನೂ ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಹಿಂಜರಿಯುತ್ತಿದೆ. ಇದಕ್ಕೆ ನಿತೀಶ್ ಕುಮಾರ್ ಅವರ ಜನಪ್ರಿಯತೆ ಕುಗ್ಗಿರುವುದೇ ಕಾರಣ. ಇದನ್ನು ತಿಳಿದಿರುವ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು, ಎನ್‌ಡಿಎ ಬಿಟ್ಟು ಮಹಾಘಟಬಂಧನ್ ಮೈತ್ರಿಕೂಟದ ಜೊತೆ ಕೈಜೋಡಿಸಲಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.