Thursday, March 13, 2025

Latest Posts

ಬೆಂಗಳೂರಿನಲ್ಲಿ ಹೊರಬಿತ್ತು ಬೆಚ್ಚಿ ಬೀಳಿಸೋ ಮರ್ಡರ್‌ ಮಿಸ್ಟರಿ.. ಚಿನ್ನಕ್ಕಾಗಿ ಒಂಟಿ ಮಹಿಳೆಯ ಕೊ*ಲೆ..

- Advertisement -

Crime News: ಕಳೆದ ನಾಲ್ಕು ತಿಂಗಳ ಹಿಂದೆ ಕೊಲೆಯಾಗಿದ್ದ ಒಂಟಿ ಮಹಿಳೆಯ ಹತ್ಯೆಯ ಪ್ರಕರಣವನ್ನು ಭೇದಿಸುವಲ್ಲಿ ಕೊತ್ತನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಕೃತ್ಯಕ್ಕೆ ಕಾರಣನಾಗಿದ್ದ ಲಕ್ಷ್ಮಣ್‌ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ.

2024ರ ನವೆಂಬರ್‌ ತಿಂಗಳ 26ರಂದು ಕೊತ್ತನೂರಿನ ಕೆ.ಎಸ್.ಬಿ. ಕಾಲೋನಿಯ ನಿವಾಸಿಯಾಗಿದ್ದ 59 ವರ್ಷದ ಮೇರಿ ಎನ್ನುವ ಮಹಿಳೆಯನ್ನು ಇದೇ ಪ್ರದೇಶದ ನಾಗೇನಹಳ್ಳಿ ಸ್ಲಂನಲ್ಲಿದ್ದ 30 ವರ್ಷದ ಲಕ್ಷ್ಮಣ್‌ ಎನ್ನುವ ಆರೋಪಿ ಕೊಲೆಮಾಡಿದ್ದನು. ಅತ್ಯಂತ ಕ್ರೂರವಾಗಿ ಸಿನಿಮೀಯ ರೀತಿಯಲ್ಲಿ ಮಹಿಳೆಯ ಉಸಿರು ನಿಲ್ಲಿಸಿದ್ದ ಕಿರಾತಕ ಮೃತ ದೇಹವನ್ನು ಎಸೆದು ಪರಾರಿಯಾಗಿದ್ದನು.

ಪತ್ನಿಯೂ ದೂರು ನೀಡಿದ್ದಳು..

ಇನ್ನೂ ಕೊಲೆಯ ಬಳಿಕ ಮೇರಿಗಾಗಿ ಹುಡುಕಾಟ ನಡೆಸಿದ್ದ ಸಂಬಂಧಿಕರು ಪೊಲೀರಿಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ್ದ ಪೊಲೀಸರು ಅವಳನ್ನು ಪತ್ತೆ ಮಾಡಲು ಮುಂದಾಗಿ, ತನಿಖೆ ನಡೆಸಿದಾಗ ಮೇರಿಯ ಕೊಲೆಯಾಗಿರುವುದು ತಿಳಿದುಬರುತ್ತದೆ.

ಈ ಪ್ರಕರಣದಲ್ಲಿ ವಿವಿಧ ಆಯಾಮಗಳಲ್ಲಿ ಹಾಗೂ ತಾಂತ್ರಿಕವಾಗಿಯೂ ಪೊಲೀಸರು ತನಿಖೆ ಕೈಗೊಂಡ ಬಳಿಕ ಆರೋಪಿಯ ಸುಳಿವು ದೊರೆತಿತ್ತು. ಅಂದಹಾಗೆ ಮೂರು ಮಕ್ಕಳ ತಂದೆಯಾಗಿರುವ ಆರೋಪಿಯು ಪ್ಲಂಬರ್‌ ಕೆಲಸದ ಜೊತೆಗೆಯೇ ಆಟೋ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಘಟನೆ ನಡೆದ ವೇಳೆ ಮೂರನೇ ಮಗುವಿಗೆ ಜನ್ಮನೀಡಿದ್ದ ಈತನ ಪತ್ನಿ ತನ್ನ ತವರಾದ ಡಿ.ಜೆ.ಹಳ್ಳಿಯಲ್ಲಿದ್ದರು. ಇನ್ನೂ ಮೇರಿಯ ಶವ ಸಾಗಾಟ ಮಾಡಿದ್ದ ಬಳಿಕ ಲಕ್ಷ್ಮಣ್‌ ನಾಪತ್ತೆಯಾಗಿ ಬಿಟ್ಟಿದ್ದ. ಎರಡು ಮೂರು ದಿನಗಳ ಬಳಿಕ ತನ್ನ ಪತಿ ಕಾಣೆಯಾಗಿದ್ದಾನೆ ಹುಡುಕಿಕೊಡಿ ಎಂದು ಆತನ ಪತ್ನಿ ಡಿ.ಜೆ. ಹಳ್ಳಿ ಠಾಣೆಗೆ ದೂರು ನೀಡುತ್ತಾಳೆ. ಇದರ ಬಳಿಕ ಆತನ ಹುಡುಕಾಟ ನಡೆಸಿದ್ದ ಡಿಜೆ ಹಳ್ಳಿ ಪೊಲೀಸರಿಗೆ ಲಕ್ಷ್ಮಣ್‌ ಪತ್ತೆಯಾಗಿರಲಿಲ್ಲ.

ಅಲ್ಲದೆ ಎಂದಿನಂತೆ ಮೇರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ ಸಂಬಂಧಿ ಜೆನಿಫರ್‌ ಕರೆಗೆ ನವೆಂಬರ್‌ 26ರಂದು ಯಾರು ಉತ್ತರಿಸದೆ ಮೊಬೈಲ್‌ ಸ್ವಿಚ್ಡ್‌ಆಫ್‌ ಎಂದು ಹೇಳಿದೆ. ಆತ ಗಾಬರಿಯಿಂದ ಮನೆಗೆ ಬಂದು ನೋಡಿದಾಗ ಅಲ್ಲಿ ಮೇರಿ ಕಾಣಿಸಿರಲಿಲ್ಲ, ಅಲ್ಲದೆ ಸ್ಥಳೀಯರನ್ನೂ ಸಹ ವಿಚಾರಣೆ ಮಾಡಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದರಿಂದ ತಕ್ಷಣ ಕೊತ್ತನೂರು ಠಾಣೆಗೆ ದೂರು ನೀಡಿದ್ದರು. ಇನ್ನೂ ಮೇರಿಗಾಗಿ ಹುಡುಕಾಟ ನಡೆಸಿ ಅವಳ ಸುಳಿವು ಸಿಗದಿದ್ದಕ್ಕೆ ಸುಮ್ಮನಾಗಿದ್ದರು. ಆದರೆ ಕಳೆದ ಮಾರ್ಚ್‌ 9ರಂದು ಹೊಸೂರು ಬಂಡೆ ಹತ್ತಿರ ಅಪರಿಚಿತ ಶವ ಕಂಡು ಬಂದಿತ್ತು. ಅದರ ಪರಿಶೀಲನೆ ಮಾಡಿದ ಬಳಿಕ ಅದು ಮೇರಿಯದ್ದು ಎಂದು ತಿಳಿದು ಬಂದಿತ್ತು, ನಂತರ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದರು.

ತಲೆಮರೆಸಿಕೊಂಡಿದ್ದ ಕಿರಾತಕ..

ಇನ್ನೂ ಮೇರಿ ಕೊಲೆಯ ಬಳಿಕ ನಾಪತ್ತೆಯಾಗಿದ್ದ ಲಕ್ಷ್ಮಣ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜೆನಿಫರ್ ಪೊಲೀಸರಿಗೆ‌ ಮಾಹಿತಿ ನೀಡಿದ್ದರು. ಇದನ್ನು ಗಮನಿಸಿದ ಪೊಲೀಸರು ಪರಿಶೀಲನೆ ಮಾಡಿದಾಗ ಲಕ್ಷ್ಮಣ್‌ ಕುರಿತು ಡಿಜೆ ಹಳ್ಳಿ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. ಬಳಿಕ ಮೊಬೈಲ್‌ ಟವರ್‌ ಲೊಕೇಶನ್‌ ಆಧರಿಸಿ ತನಿಖೆ ಮಾಡಿದಾಗ ಆರೋಪಿ ಹೆಣ್ಣೂರಿನಲ್ಲಿರುವುದು ಗೊತ್ತಾಗುತ್ತದೆ. ಅಲ್ಲದೆ ತಕ್ಷಣ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮರ್ಡರ್ ಮಿಸ್ಟರಿ ಬಯಲಾಗಿದೆ. ಬಳಿಕ ಇನ್ನಷ್ಟು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 5 ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಲವನ್ನೇ ಶೂಲವನ್ನಾಗಿಸಿಕೊಂಡಿದ್ದ ಹಂತಕ..

ಪ್ರಮುಖವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಕಿರಾತಕ ಲಕ್ಷ್ಮಣ್‌, ನಾಲ್ಕರಿಂದ ಐದು ಲಕ್ಷಗಳಷ್ಟು ಸಾಲ ಮಾಡಿಕೊಂಡಿದ್ದ. ಅಲ್ಲದೆ ತನ್ನ ಕೆಲಸದ ಹಣದಲ್ಲಿ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತು ಒಂಟಿಯಾಗಿ ವಾಸಿಸುತ್ತಿದ್ದ ಮೇರಿ ಮನೆಯಲ್ಲಿ ಚಿನ್ನಾಭರಣ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಅದನ್ನು ದೋಚಲು ಪ್ಲಾನ್‌ ರೂಪಿಸಿದ್ದ. ಅಂದಹಾಗೆ ಮೇರಿ ಕೊಲೆಗೂ ಮುನ್ನ ನವೆಂಬರ್‌ 25ರಂದು ಅವಳ ಮನೆಯ ವಿದ್ಯುತ್‌ ವೈರ್‌ ಕಟ್‌ ಮಾಡುತ್ತಾನೆ. ಬಳಿಕ ಇದನ್ನು ರಿಪೇರಿ ಮಾಡಲು ಮೇರಿ ತನ್ನನ್ನು ಕರೆಯುತ್ತಾಳೆ ಎಂದು ಆರೋಪಿ ಯೋಚಿಸಿದ್ದ. ಆದರೆ ಮೇರಿ ಅವನನ್ನು ಕರೆದಿರಲಿಲ್ಲ, ಹೀಗಾಗಿ ಮರುದಿನ ಏಕಾ ಏಕಿ ಅವಳ ಮನೆಗೆ ನುಗ್ಗಿ ಅವಳನ್ನು ಕೊಲೆ ಮಾಡಿ ಬಿಟ್ಟಿದ್ದ. ಅಲ್ಲದೆ ಅವಳ ಮೈ ಮೇಲಿನ 50 ಗ್ರಾಂ. ಚಿನ್ನಾಭರಣವನ್ನು ಕಿತ್ತು ಕೊಂಡಿದ್ದ.

ದೃಶ್ಯಂ ಸಿನಿಮಾ ಸ್ಟೈಲ್‌ನಲ್ಲಿ ಮರ್ಡರ್‌..

ಇನ್ನೂ ದೃಶ್ಯಂ ಸಿನಿಮಾ ಶೈಲಿಯಲ್ಲಿಯಂತೆಯೇ ಮೇರಿಯ ಶವವನ್ನು ಸಾಗಾಟ ಮಾಡಿರುವುದಾಗಿ ಶಾಕಿಂಗ್‌ ಮಾಹಿತಿಯನ್ನು ಆರೋಪಿಯು ಹೊರಹಾಕಿದ್ದಾನೆ. ಸಿನಿಮಾ ಮಾದರಿಯಲ್ಲಿಯೇ ಮೃತ ದೇಹಕ್ಕೆ ಬೆಡ್‌ ಶಿಟ್‌ ಸುತ್ತಿ ತನ್ನ ಆಟೋದಲ್ಲಿ ಬಾಗಲೂರಿನ ಹೊಸೂರು ಬಂಡೆಯ ಹತ್ತಿರ ಕಸದ ರಾಶಿಯೊಳಗೆ ಬಿಸಾಡಿ ಎಸ್ಕೆಪ್‌ ಆಗಿದ್ದ ಎಂಬ ಸ್ಫೋಟಕ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಒಟ್ನಲ್ಲಿ.. ನಾವು ಸಾಲ ಮಾಡುವ ಮೊದಲು ಯೋಚಿಸಬೇಕಿದೆ, ಅಂದಹಾಗೆ ಅದನ್ನು ತೀರಿಸುವ ಹೊಣೆಗಾರಿಕೆಯು ನಮ್ಮದೇ ಆಗಿರುತ್ತದೆ. ಆದರೆ ಸಾಲದ ಹೆಸರಿನಲ್ಲಿ ಇನ್ನೊಂದು ಜೀವಕ್ಕೆ ಕುತ್ತು ತರುವುದು ನಿಜಕ್ಕೂ ಆಘಾತಕಾರಿ. ಸಾಲ ತೀರಿಸಲು ವಾಮಮಾರ್ಗ ಹಿಡಿದು ಮಹಿಳೆಯ ಕೊಲೆ ಮಾಡಿರುವ ಆರೋಪಿಗೆ ಇಲ್ಲಿ ತಕ್ಕ ಶಿಕ್ಷೆಯಾಗಬೇಕು. ಅಲ್ಲದೆ ಸಿನಿಮಾಗಳು ನಮಗೆ ಮಾದರಿಯಾಗಬೇಕು, ಆದರೆ ಅವುಗಳನ್ನು ನಾವು ಯಾವ ಹೇಗೆ ಸ್ವೀಕರಿಸುತ್ತೇವೆ ಅನ್ನೋದು ಸಹ ಅಷ್ಟೇ ಮುಖ್ಯವಾಗಿದೆ. ಅದೇನೆ ಇರಲಿ.. ಒಂದು ಸಿನಿಮಾವನ್ನೇ ಆದರ್ಶವಾಗಿಟ್ಟುಕೊಂಡು ತನ್ನ ಸಾಲಕ್ಕೆ ಆರೋಪಿ ಲಕ್ಷ್ಮಣ್‌, ಒಂಟಿ ಮಹಿಳೆಯು ಉಸಿರು ಚೆಲ್ಲುವಂತೆ ಮಾಡಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ..!

- Advertisement -

Latest Posts

Don't Miss