Saturday, March 15, 2025

Latest Posts

Sandalwood News: ಪುನೀತ್ ಬಯೋಪಿಕ್? ಆನಂದರಾಮ್ ಏನಂತಾರೆ?

- Advertisement -

Sandalwood News: ಸಿನಿಮಾ ಅಂದರೆ ಅದೊಂದು ಮನರಂಜನೆಯ ತಾಣ. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ನೋಡಲು ಸಾಧ್ಯವಾಗುವ ಏಕೈಕ ಮಾಧ್ಯಮವೆಂದರೆ ಅದು ಸಿನಿಮಾ ಮಾತ್ರ. ಯೆಸ್, ಸಿನಿಮಾ ಯಾವತ್ತಿಗೂ ದಾಖಲೆಯಾಗಿಯೇ ಉಳಿಯುತ್ತರೆ. ಅದರಲ್ಲೂ ಗಣ್ಯರ ಜೀವನ ಚರಿತ್ರೆ ಕುರಿತು ಮೂಡಿಬಂದಿರುವ ಅದೆಷ್ಟೋ ಸಿನಿಮಾಗಳು ಇಂದಿಗೂ ಚರಿತ್ರೆಯಲ್ಲಿ ದಾಖಲೆಯಾಗಿಯೇ ಉಳಿದಿವೆ. ಅಂತಹ ಬಯೋಪಿಕ್ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚೆಚ್ಚು ಮೂಡಿಬರುತ್ತಿವೆ. ಈಗ ಕನ್ನಡದ ಸೂಪರ್ ಸ್ಟಾರ್ ಒಬ್ಬರ ಬದುಕಿನ ಚಿತ್ರಣ ಕೂಡ ಸಿನಿಮಾ ಆಗುತ್ತಾ ಅನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ಕನ್ನಡದ ಒಬ್ಬ ಸೂಪರ್ ಸ್ಟಾರ್ ಜೀವನದ ಕುರಿತು ಸಿನಿಮಾ ಮೂಡಿಬರುತ್ತೆ ಅನ್ನುವ ಸುದ್ದಿಯೇ ಒಂದು ರೀತಿಯ ರೋಚಕ ಮತ್ತು ಕೌತುಕ. ಅಷ್ಟಕ್ಕೂ ಬಯೋಪಿಕ್ ಆಗುವಂತಹ ಆ ನಟ ಯಾರು ಅನ್ನುವ ಪ್ರಶ್ನೆಯೂ ಸಹಜ. ಆದರೆ, ಬಯೋಪಿಕ್ ಆಗಲೇಬೇಕು ಅನ್ನುವಂತಹ ನಟ ಏನಾದರೂ ಇದ್ದರೆ, ಅದು ನಿಜಕ್ಕೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತ್ರ. ಹೌದು, ಅವರ ಬಯೋಪಿಕ್ ಸಿನಿಮಾ ಬರುತ್ತೆ ಅಂದರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ. ಅದರಲ್ಲೂ, ಬರೀ ಅವರ ಫ್ಯಾನ್ಸ್ ಮಾತ್ರವಲ್ಲ, ಇಡೀ ಕರುನಾಡೇ ಅದನ್ನು ಪ್ರೀತಿಯಿಂದ ಸ್ವಾಗತಿಸುತ್ತೆ. ಇಷ್ಟಕ್ಕೂ ಇದೀಗ ಪುನೀತ್ ಅವರ ಬಯೋಪಿಕ್ ವಿಷಯ ಯಾಕೆ ಬಂತು ಅನ್ನುವುದಾದರೆ, ಮಾರ್ಚ್ 17 ಅಪ್ಪು ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಈ ವಾರ ಅಪ್ಪು ಸಿನಿಮಾ ರೀ ರಿಲೀಸ್ ಆಗಿದೆ. ಎಲ್ಲೆಡೆ ಹೌಸ್ ಫುಲ್ ಶೋಸ್ ಕಂಡಿದೆ. ಕನ್ನಡ ಚಿತ್ರರಂಗದ ಬಹುತೇಕ ನಟ,ನಟಿಯರು, ನಿರ್ದೇಶಕರು ಈ ಸಿನಿಮಾ ನೊಡಿ ಆನಂದಿಸಿದ್ದಾರೆ. ಅಪ್ಪು ಜೊತೆಗಿನ ಒಡನಾಟ ಹಂಚಿಕೊಂಡಿದ್ದಾರೆ. ಸ್ವತಃ ರಕ್ಷಿತಾ ಪ್ರೇಮ್ ಕೂಡ ಅಪ್ಪು ಸಿನಿಮಾವನ್ನು ಅಪ್ಪು ಫ್ಯಾನ್ಸ್ ಜೊತೆ ಕೂತು ನೋಡಿ ಆನಂದಭಾಷ್ಪ ಸುರಿಸಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಅಪ್ಪು ಸಿನಿಮಾ ನೋಡಿ, ಅಪ್ಪು ಜೊತೆಗಿನ ಒಡನಾಟ ಮೆಲುಕು ಹಾಕಿದ್ದಾರೆ. ಇದೇ ವೇಳೆ ಅವರು ಅಪ್ಪು ಅವರ ಬಯೋಪಿಕ್ ಮಾಡುವ ಬಗ್ಗೆಯೂ ಮಾತಾಡಿದ್ದಾರೆ. ಹೌದು, ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜಕುಮಾರ್ ಅವರ ಬಯೋಪಿಕ್ ಮಾಡುವ ಪ್ಲ್ಯಾನ್ ಬಗ್ಗೆ ಹೇಳಿಕೊಂಡಿದ್ದಾರೆ. ‘ಪವರ್ ಸ್ಟಾರ್​’ ಪುನೀತ್ ರಾಜಕುಮಾರ್​ ಅವರ ಜೀವನದ ಕುರಿತು ಸಿನಿಮಾ ಮೂಡಿಬರಬೇಕು ಎಂಬುದು ಅಭಿಮಾನಿಗಳ ಆಸೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಸಂತೋಷ್ ಆನಂದ್​ರಾಮ್ ಅವರು ಆಲೋಚನೆ ಮಾಡಿದ್ದಾರೆ. ಆ ಕುರಿತು ಮುಂದಿನ ಪ್ಲ್ಯಾನ್ ಬಗ್ಗೆ ಹೇಳಿಕೊಂಡಿದ್ದಾರೆ.

ಪುನೀತ್ ಅವರನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅವರು ಭೌತಿಕವಾಗಿ ಇಲ್ಲದಿದ್ದರೂ, ಫ್ಯಾನ್ಸ್ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಅಭಿಮಾನಿಗಳ ಜೊತೆ ಅಪ್ಪು ಸಿನಿಮಾ ನೋಡಿರುವ ಸಂತೋಷ್ ಅವರು, ಪುನೀತ್ ಅವರ ಜೀವನದ ಕುರಿತು ಸಿನಿಮಾ ಮಾಡುವ ಆಲೋಚನೆ ಬಗ್ಗೆ ಹೇಳಿಕೊಂಡಿದ್ದಾರೆ. ‘ಪುನೀತ್ ಅವರ ಜೊತೆ ಮಾಡಿದ 2 ಸಿನಿಮಾಗಳು ಹಿಟ್ ಆಗಿವೆ. ನನ್ನ ಬರವಣಿಗೆಯಲ್ಲಿ ಅಪ್ಪು ಅವರನ್ನು ಬಣ್ಣಿಸಿದ ರೀತಿ ನನಗೆ ಖುಷಿ ಕೊಟ್ಟಿದೆ. ನಾನು ಇರುವವರೆಗೂ ನನ್ನ ಬರವಣಿಗೆ ಅವರ ಕುರಿತು ಇದ್ದೇ ಇರುತ್ತದೆ. ಅವರ ಬಗ್ಗೆ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಯಾವಾಗಲೂ ಕೇಳುತ್ತಿರುತ್ತಾರೆ’

ಸೋ, ಇಂದು ಎಐ ಟೆಕ್ನಾಲಜಿ ಬಂದಿದೆ. ಮುಂದಿನ ದಿನಗಳಲ್ಲಿ ಆ ದೇವರು ಅವಕಾಶ ಕೊಟ್ಟರೆ, ಅಪ್ಪು ಅವರ ಚರಿತ್ರೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಮಾಡುತ್ತೇನೆ. ಈ ಕುರಿತು ತುಂಬಾನೆ ಗಂಭೀರವಾಗಿ ಯೋಚಿಸಿದ್ದೇನೆ. ಹೊಂಬಾಳೆ ಫಿಲ್ಮ್ಸ್ ಜೊತೆ ನಾನು ಮತ್ತು ಪುನೀತ್ ಅವರು 5 ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಆಗಿತ್ತು. ಮಾಡಿದ್ದರೆ ರೆಕಾರ್ಡ್ ಕೂಡ ಆಗುತ್ತಿತ್ತು. ಮೂರು ಮತ್ತು ನಾಲ್ಕನೇ ಸಿನಿಮಾಗೆ ಕಮಿಟ್ ಕೂಡ ಆಗಿದ್ದೆವು. ಆದರೆ ದೇವರ ಆಟ ಬೇರೆಯೇ ಇತ್ತು’ ಎಂದಿರುವ ಸಂತೋಷ್ ಪುನೀತ್ ಅವರ ಬಯೋಪಿಕ್ ಮಾಡುವ ಬಗ್ಗೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಪುನೀತ್ ಅಂದರೆ ಒಂದು ಮೂರು ವರ್ಷದ ಮಗು ಕೂಡ ಜೈ ಅನ್ನುತ್ತೆ. ಅದರಲ್ಲೂ ಪುನೀತ್ ಹಾಡುಗಳಿಗೆ ಹೆಜ್ಜೆ ಹಾಕದವರೇ ಇಲ್ಲ. ಅವರ ಕೌಟುಂಬಿಕ ಸಿನಿಮಾಗಳ ಬಗ್ಗೆ ಮಾತಾಡದವರೇ ಇಲ್ಲ. ಅಂತಹ ಸಂದೇಶವುಳ್ಳ ಸಿನಿಮಾ ಕೊಟ್ಟಿರುವ, ಅದೆಷ್ಟೋ ಅಸಹಾಯಕರಿಗೆ ಪ್ರೀತಿ ತೋರಿ, ಸಹಾಯ ಮಾಡಿರುವ ಪುನೀತ್ ಅವರ ಒಳ್ಳೆಯ ಗುಣಸ್ವಭಾವದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಅವರ ಬಾಲ್ಯ, ಸಿನಿಮಾ, ಮಾತು, ಸಮಾಜಮುಖಿ ಕೆಲಸಗಳು ಹೀಗೆ ನೂರಾರು ವಿಷಯಗಳು ಎಲ್ಲರಿಗೂ ಗೊತ್ತಾಗಬೇಕು ಅನ್ನೋದು ಅವರ ಫ್ಯಾನ್ಸ್ ಆಶಯ ಕೂಡ. ಅದೇನೆ ಇರಲಿ, ಹಲವರ ಬಯೋಪಿಕ್ ಸಿನಿಮಾಗಳ ಮಧ್ಯೆ ಅಪ್ಪು ಅವರ ಬದುಕಿನ ಚಿತ್ರಣ ನೋಡುವುದೂ ಒಂದು ಸಂತಸದ ಸಂಗತಿ. ನಿಜವಾಗಿಯೂ ಬಯೋಪಿಕ್ ಸಿನಿಮಾಗೆ ಪುನೀತ್ ಅರ್ಹರು. ಅಂಥದ್ದೊಂದು ಸಿನಿಮಾ ಆದಷ್ಟು ಬೇಗ ಆಗಲಿ ಅನ್ನೋದೇ ಎಲ್ಲರ ಆಸೆ. ಈಗ ಎಐ ಟೆಕ್ನಾಲಜಿಯ ಕಾಲ. ಹಾಗಾಗಿ ಪುನೀತ್ ಅವರ ಬಯೋಪಿಕ್ ಮೂಡಿಬಂದರೆ, ಮುಂದಿನ ಪೀಳಿಗೆಗೂ ಇಂತಹ ನಟರ ಬಗ್ಗೆ ತಿಳಿಯಲು ಸಾಧ್ಯವಾಗುತ್ತೆ ಅನ್ನುವುದು ಅವರ ಫ್ಯಾನ್ಸ್ ಅಪೇಕ್ಷೆ.

- Advertisement -

Latest Posts

Don't Miss