Mandya News: ಪ್ರಿಯಕರ ಮದುವೆಯಾಗಲು ಒಪ್ಪದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವಳ ತಾಯಿಯು ಉಸಿರು ನಿಲ್ಲಿಸಿದ ದಾರುಣ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದ 21 ವರ್ಷದ ವಿಜಯಲಕ್ಷ್ಮಿಯು ಮಾರಸಿಂಗನಹಳ್ಳಿಯ ಹರಿಕೃಷ್ಣ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಇಷ್ಟೇ ಅಲ್ಲದೆ ಇದೇ ಲವ್ ನೆಪದಲ್ಲಿ ಇಬ್ಬರು ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಹರಿಕೃಷ್ಣ ಬೇರೆ ಯುವತಿಯರ ಜೊತೆ ಸಲುಗೆ ಬೆಳೆಸಿಕೊಂಡು ಅವರೊಂದಿಗೆ ಸುತ್ತಾಡಲು ಪ್ರಾರಂಭಿಸಿದ್ದನು.
ಇನ್ನೂ ವಿಚಾರ ತಿಳಿದು ವಿಜಯಲಕ್ಷ್ಮಿ ಇಬ್ಬರು ಮದುವೆಯಾಗೋಣ ಎಂದು ಕೇಳಿ ಕೊಂಡಿದ್ದಾಳೆ. ಆದರೆ ಇದಕ್ಕೆ ಹರಿಕೃಷ್ಣ ನಿರಾಕರಿಸಿ ಅವಳನ್ನು ಅವ್ಯಾಚ್ಚ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದ. ಇದರಿಂದ ತನ್ನ ಜೀವನವೇ ನಾಶವಾಯಿತೆಂದು ಮಾನಸಿಕ ಖಿನ್ನತೆಗೆ ಒಳಗಾಗಿ ವಿಜಯಲಕ್ಷ್ಮಿ ಕಳೆದ ಕೆಲ ದಿನಗಳ ಹಿಂದಷ್ಟೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿನಿಂದ ಆಘಾತಕ್ಕೊಳಗಾಗಿ ವಿಜಯಲಕ್ಷ್ಮಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಅವಳ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಗೆ ಹೋಗಿದ್ದರು.
ಆದರೆ ದೂರು ದಾಖಲಿಸಿಕೊಂಡು ಯುವತಿ ಸಾವಿಗೆ ನ್ಯಾಯ ನೀಡಬೇಕಿದ್ದ ಪೊಲೀಸರು ಕಂಪ್ಲೇಂಟ್ ಕೊಡಲು ತೆರಳಿದ್ದ ನಂಜುಂಡೇಗೌಡ ಅವರ ಮೇಲೆಯೇ ಕೇಸ್ ದಾಖಲಿಸಿದ್ದರು. ಇದರಿಂದ ತೀವ್ರ ನೊಂದು, ಒಂದು ಕಡೆ ಮಗಳ ಸಾವಿಗೆ ನ್ಯಾಯ ಸಿಗುತ್ತಿಲ್ಲ, ಇನ್ನೊಂದೆಡೆ ಜೀವನದಲ್ಲಿ ಶಾಂತಿ, ನೆಮ್ಮದಿಯೂ ಇಲ್ಲ ಎಂದು ಮೃತ ವಿಜಯಲಕ್ಷ್ಮಿ ತಾಯಿ, ಲಕ್ಷ್ಮಿ ಗುರುವಾರ ನೇಣಿಗೆ ಶರಣಾಗಿದ್ದಾಳೆ. ಇನ್ನೂ ಲಕ್ಷ್ಮಿ ಮೃತದೇಹವನ್ನು ಸಾಗಿಸಲು ಬಿಡದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ. ಅಲ್ಲದೆ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ನಲ್ಲಿ.. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದಾರುಣ ಘಟನೆಗಳು ಸಂಭವಿಸುತ್ತಿರುವುದು ಸಮಾಜದಲ್ಲಿನ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿರುವುದು ಸುಳ್ಳಲ್ಲ. ಪ್ರೀತಿಯ ನಾಟಕವಾಡಿ ಯುವತಿಯ ಬಾಳಿಗೆ ಬೆಂಕಿ ಇಟ್ಟ ಹರಿಕೃಷ್ಣನನಿಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲದೆ ಮುಖ್ಯವಾಗಿ ಯುವತಿ ಸಾವಿನ ಬಳಿಕ ಕಣ್ಣೀರಲ್ಲಿ ಕೈತೊಳೆಯುತ್ತಿದ್ದ ಅವಳ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು ಅವಳ ತಾಯಿಯ ಸಾವಿಗೆ ಕಾರಣವಾಗಿ ಅನ್ಯಾಯವೆಸಗುವ ಮೂಲಕ ಅಮಾನವೀಯ ನಡೆ ಅನುಸರಿಸಿರುವ ಪೊಲೀಸರ ವಿರುದ್ದವೂ ಕ್ರಮವಾಗಬೇಕಿದೆ. ಅದೇನೆ ಇರಲಿ.. ಇಲ್ಲಿ ವಿಜಯಲಕ್ಷ್ಮಿ ಯೋಚಿಸದೆ ಪ್ರಿಯಕರನ ಪೂರ್ವಾಪರ ತಿಳಿದುಕೊಳ್ಳದೆ ಮೋಸ ಹೋಗಿರುವುದು ಒಂದೆಡೆಯಾದರೆ, ಅನ್ಯಾಯವನ್ನು ಸಹಿಸಿಕೊಳ್ಳದೆ ನೇಣಿಗೆ ಶರಣಾದ ಲಕ್ಷ್ಮಿ ಮತ್ತೊಂದೆಡೆ. ಇನ್ನೂ ಇದೆಲ್ಲದಕ್ಕೂ ಮಿಗಿಲಾಗಿ ಕಾನೂನು ರಕ್ಷಕರಾಗಬೇಕಿದ್ದ ಪೊಲೀಸರೇ ಕಾನೂನು ಭಕ್ಷಕರಾಗಿದ್ದಾರೆ ಅನ್ನೋದು ಸುಳ್ಳಲ್ಲ. ಅಲ್ಲದೆ ಇದನೆಲ್ಲ ನೋಡಿದಾಗ ನಿಜಕ್ಕೂ ಈ ದುಷ್ಟ ವ್ಯವಸ್ಥೆಯ ವಿರುದ್ಧ ಎಂಥವರದ್ದಾದರೂ ರಕ್ತ ಕುದಿಯದೇ ಇರಲಾರದು.. ಯಾಕಂದ್ರೆ ಈ ಎಲ್ಲದರಲ್ಲಿ ಆಗಿರುವುದು ಘೋರ ಅನ್ಯಾಯ ಅಲ್ವಾ.!