Mangaluru News: ಜನವಸತಿ ರಸ್ತೆಯಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ರಸ್ತೆಯ ಬದಿಯಲ್ಲೇ ನಡೆದುಕೊಂಡು ಹೊರಟಿದ್ದಾಳೆ. ಈ ವೇಳೆ ಎದುರಿನಿಂದ ಬಂದ ಕಾರು ಮೊದಲು ಎದುರಿಗೆ ಹೊರಟಿದ್ದ ಬೈಕ್ ಮೇಲೆ ವೇಗವಾಗಿ ನೂಕಿಕೊಂಡು ಬರುತ್ತದೆ. ಅಲ್ಲದೆ ಇದರ ಜೊತೆಗೆ ಬೈಕ್ ಮತ್ತು ಕಾರಿನ ನಡುವೆ ಮಹಿಳೆ ಕೂಡಾ ಸಿಲುಕಿ ಪಕ್ಕದ ಕಂಪೌಂಡ್‌ಗೆ ಹಾರಿ ಡಿಕ್ಕಿ ಹೊಡೆದು ನೇತಾಡುತ್ತಾಳೆ. ಮಂಗಳೂರಿನ ಕಾಫಿ ಕಾಡ್‌ನ 6ನೇ ಮುಖ್ಯರಸ್ತೆಯಲ್ಲಿ ನಡೆದ ಈ ಘಟನೆ ನೋಡಿದ ತಕ್ಷಣವೇ ಅಲ್ಲಿರುವ ಸ್ಥಳೀಯರು ಕಂಪೌಂಡ್ ಗೆ ಸಿಲುಕಿ ನೇತಾಡುತ್ತಿರುವ ಮಹಿಳೆಯನ್ನು ರಕ್ಷಿಸಿದ್ದಾರೆ. ಅಲ್ಲದೆ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಬೈಕ್ ಸವಾರನು ಬಿದ್ದಿರುತ್ತಾನೆ, ಅವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇನ್ನೂ ಈ ಭಯಾಕ ಅಪಘಾತದ ದೃಶ್ಯ ನೋಡುಗರ ಎದೆ ಝಲ್ ಎನ್ನುವಂತಿದೆ. ಈ ದೃಶ್ಯ ಹತ್ತಿರದ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
ಘಟನೆಯ ಹಿಂದಿತ್ತು ಕ್ಷುಲ್ಲಕ ಕಾರಣ..
ಇನ್ನೂ ಘಟನೆಯ ಬಳಿಕ ಇದರ ಅಸಲಿಯತೆ ತಿಳಿದಿದ್ದು , ಕ್ಷುಲ್ಲಕ ಕಾರಣಕ್ಕೆ ಎದುರು ಮನೆಯ ವ್ಯಕ್ತಿಯೋರ್ವನನ್ನ ಕೊಲ್ಲಲು ಹಾಕಿದ್ದ ಸ್ಕೆಚ್ ಇದಾಗಿದೆ ಎಂಬುವ ಸತ್ಯ ಬಯಲಾಗಿದೆ. ಅಲ್ಲದೆ ಪರಸ್ಪರ ಅಕ್ಕಪಕ್ಕದ ಮನೆಗಳ ನಿವಾಸಿಗಳಾದ ಬೈಕ್ ಸವಾರ ಮುರಳಿ ಪ್ರಸಾದ್ ಹಾಗೂ ಕಾರು ಚಾಲಕ ಸತೀಶ್ ಕುಮಾರ್ ನಡುವೆ ಹಳೆಯ ದ್ವೇಷವಿತ್ತು. ಕ್ಲುಲ್ಲಕ ಕಾರಣಕ್ಕಾಗಿ ಆಗಾಗ ಇವರಿಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಹೇಗಾದರೂ ಮಾಡಿ ಮುರಳಿ ಪ್ರಸಾದ್‌ನನ್ನು ಕೊಲ್ಲಬೇಕು ಎಂದು ಸತೀಶ್ ಕುಮಾರ್ ಯೋಚಿಸಿದ್ದ. ಅದರಂತೆಯೇ ಮುರಳಿ ಪ್ರಸಾದ್ ಬೈಕ್ ಮೇಲೆ ಹೋಗುವಾಗ ಅವನಿಗೆ ಕಾರಿನಿಂದ ಗುದ್ದಿ ಕೊಲೆ ಮಾಡಲು ಪ್ಲಾನ್ ಅನ್ನು ಸತೀಶ್ ಕುಮಾರ್ ರೂಪಿಸಿದ್ದ. ಅದರಂತೆಯೇ ಆತ ಮುರಳಿ ಪ್ರಸಾದ್‌ಗೆ ಕಾರು ಗುದ್ದಿ ಹತ್ಯೆ ಮಾಡಲು ಯತ್ನಿಸಿದ್ದಾನೆ.
ಒಟ್ನಲ್ಲಿ..ಯಾವುದೇ ಒಂದು ಜೀವಕ್ಕೆ ತನ್ನದೇ ಆದ ಬೆಲೆಯಿದೆ. ಇಂಥದ್ದರಲ್ಲಿ ಕ್ಷುಲ್ಲಕ ಕಾರಣಕ್ಕೆ ಒಬ್ಬ ವ್ಯಕ್ತಿಯ ಜೀವ ತೆಗೆಯಲು ಮುಂದಾಗುತ್ತಿರುವುದನ್ನು ನೋಡಿದಾಗ ಮಾನವರಲ್ಲಿ ಜೀವ ವಿರೋಧಿ ಮನಸ್ಥಿತಿ ಹೆಚ್ಚಾಗುತ್ತಿದೆಯಾ ಅನ್ನೋ ಪ್ರಶ್ನೆಗಳಿಗೆ ಈ ರೀತಿಯ ಘಟನೆಗಳು ಎಡೆಮಾಡಿಕೊಡುತ್ತವೆ. ಅದೇನೆ ಇರಲಿ.. ತನ್ನಷ್ಟಕ್ಕೆ ತಾನು ರಸ್ತೆ ಬದಿಯಲ್ಲಿ ಹೊರಟಿದ್ದ ಮಹಿಳೆಯು ಅಷ್ಟೊಂದು ವೇಗವಾಗಿ ಕಾರು ಗುದ್ದಿದ್ದರೂ ಸಹ ಬದುಕುಳಿದಿರುವುದು ನಿಜಕ್ಕೂ ಪವಾಡ ಸದೃಶ್ಯವೇ ಆದಂತಾಗಿದೆ..