Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಗಾಲ ಅಂದ್ರೇನೆ, ಜ್ಯೂಸ್, ಐಸ್ಕ್ರೀಮ್, ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು, ಮಾವಿನ ಹಣ್ಣು, ಮಾವಿನ ಕಾಯಿ ಇವುಗಳದ್ದೇ ಕಾರುಬಾರು. ಹಾಗಾಗಿ ನಾವಿಂದು ಮಾವಿನ ಕಾಯಿ ಬಳಸಿ ಯಾವ ರೀತಿ ರಸಮ ತಯಾರಿಸಬಹುದು ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಮಾವಿನ ಕಾಯಿ, 1 ಟೊಮೆಟೋ, ಕೊತ್ತೊಂಬರಿ ಸೊಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕರಿಬೇವು, ಒಣಮೆಣಸು. ಚಿಟಿಕೆ ಅರಿಶಿನ, ಖಾರದ ಪುಡಿ, ಶುಂಠಿ, ಹಸಿಮೆಣಸಿನ ಪೇಸ್ಟ್, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ಮೊದಲು ಅರ್ಧ ಮಾವಿನಕಾಯಿಯನ್ನು ಸಣ್ಣದಾಗಿ ತುಂಡರಿಸಿ ಬೇಯಿಸಿಕೊಳ್ಳಿ. ಬಳಿಕ ಮಿಕ್ಸಿ ಜಾರ್ಗೆ ಹಾಕಿ, ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು, ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಹಾಕಿ ಹುರಿದು, 2 ನಿಮಿಷ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಇದಕ್ಕೆ ಉಪ್ಪು, ಹಸಿಮೆಣಸು, ಶುಂಠಿ ಪೇಸ್ಟ್, ಕೊಂಚ ಬೆಲ್ಲ, ಮಾವಿನಕಾಯಿ ಪೇಸ್ಟ್, ಅರಿಶಿನ, ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಬೇಕಾದಷ್ಟು ನೀರು ಬೇರೆಸಿ, ಚೆನ್ನಾಗಿ ಕುದಿಸಬೇಕು. ಕೊನೆಗೆ ಕೊಂಚ ರಸಂ ಪುಡಿ ಹಾಕಿ ಕೊಂಚ ಕುದಿಸಿ, ಮೇಲಿನಿಂದ ಕೊತ್ತೊಂಬರಿ ಸೊಪ್ಪು ಹಾಕಿದ್ರೆ, ರಸಂ ರೆಡಿ. ಅನ್ನದೊಂದಿಗೆ ಹಪ್ಪಳ, ಉಪ್ಪಿನಕಾಯಿ, ತುಪ್ಪ ಮತ್ತು ರಸಂ ಹಾಕಿ ಸವಿಯಬಹುದು.