Dharwad News: ಧಾರವಾಡ: ಧಾರವಾಡದಲ್ಲಿಂದು ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪಕ್ಷದಲ್ಲಿ ಹಿರಿಯರಿದಾರೆ, ಅವರು ಮಾತನಾಡಿದ್ದಾರೆ. ಖರ್ಗೆ, ರಾಹುಲ್ ಗಾಂಧಿ ಮಾತನಾಡಿದ್ದಾರೆ. ಹೀಗಾಗಿ ಆ ಬಗ್ಗೆ ನಾ ಮಾತನಾಡಲಾರೆ ಎಂದಿದ್ದಾರೆ.
ಯತ್ನಾಳ ಉಚ್ಛಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅವರು ಭಾಗಿಯಾದವರು. ಉಚ್ಛಾಟನೆ ಅವರ ಪಕ್ಷದ ವಿಚಾರ. ಆ ಬಗ್ಗೆ ನಾವು ಏನೂ ಹೇಳುವುದಿಲ್ಲ. ಯತ್ನಾಳ ಅವರು ನಮ್ಮ ಪಕ್ಷದ ವಿರುದ್ಧ ಮಾತನಾಡಿದಾಗಲೂ ನಾವು ಖಂಡಿಸಿದ್ದೇವೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮಾತ್ರ ಅವರು ನಮಗೆ ಬಾಂಧವರು ಎಂದು ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ನಿನ್ನೆ ಸಿಎಂ ಸಚಿವ ಸಂಪುಟ ವಿಸ್ತರಣೆ ಇಲ್ಲ ಅಂದಿದ್ದಾರೆ. ಜಿಪಂ ತಾಪಂ ಚುನಾವಣೆ ಇದೆ. ಹೀಗಾಗಿ ವಿಸ್ತರಣೆ ಆಗೋದಿಲ್ಲ ಅನಿಸುತ್ತದೆ. ಆದರೆ ಹೈಕಮಾಂಡ್ ನಿರ್ಧಾರ ಏನು ತೆಗೆದುಕೊಳ್ಳುತ್ತದೆ ಗೊತ್ತಿಲ್ಲ ಎಂದಿದ್ದಾರೆ.
ಬೆಲೆ ಏರಿಕೆ ಸಲುವಾಗಿ ಬಿಜೆಪಿ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಹೆಬ್ಬಾಳ್ಕರ್, ಕಳೆದ ನಾಲ್ಕು ವರ್ಷ ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆ ಆಗಿಲ್ವಾ? ಹಾಲು ಪೆಟ್ರೊಲ್, ಡಿಸೇಲ್, ದಿನಸಿ ದರ ಏರಿಕೆ ಆಗಲೇ ಇಲ್ಲವಾ? ಬಿಜೆಪಿ ಪ್ರತಿಭಟನೆ ಡಂಬಾಚಾರದ ನಾಟಕ ಪ್ರದರ್ಶನ. ಮೊದಲು ಕರ್ನಾಟಕಕ್ಕೆ ಬರಬೇಕಿರೋ ತೆರಿಗೆ ಹಣ ತಂದು ಕೊಡಲು ಹೇಳಿ. ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಆ ತೆರಿಗೆ ಹಣ ತರಲು ಬಿಜೆಪಿಗೆ ಹೇಳಿ. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಬೆಲೆ ಏರಿಕೆ ನಾನು ಸಮರ್ಥನೆ ಮಾಡುತ್ತಿಲ್ಲ. ಆರೋಪವೂ ಮಾಡುತ್ತಿಲ್ಲ. ಬೆಲೆ ಏರಿಕೆಗಳ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಧಾರವಾಡ ತಾಲೂಕಿನ ಯಾದವಾಡದಲ್ಲಿ ಮೃಣಾಲ್ ಶುಗರ್ಸ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇದು ಸಚಿವೆಯ ಕುಟುಂಬದ ಒಡೆತನದ ಫ್ಯಾಕ್ಟರಿಯಾಗಿದ್ದು, ಇಂದು ಕಟ್ಟಡ ನಿರ್ಮಾಣ ಪೂಜೆ ಮಾಡಲಾಗಿದೆ. ಆದರೆ ಫ್ಯಾಕ್ಟರಿ ಆರಂಭಕ್ಕೆ ಯಾದವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದೆಡೆ ಪೂಜೆ ನಡೆಯುತ್ತಿದ್ದರೆ, ಮತ್ತೊಂದೆಡೆ ಧರಣಿ ನಡೆದಿದೆ.
ಹೀಗಾಗಿ ಪೂಜೆ ಮುಗಿಸಿ, ಬಳಿಕ ಹೆಬ್ಬಾಳ್ಕರ್ ಧರಣಿನಿರತರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಹೀಗಾಗಿ ಪ್ರತಿಕ್ರಿಯಿಸಿರುವ ಹೆಬ್ಬಾಳ್ಕರ್, ಒಮ್ಮೆಲೆ ತಲೆಗೆ ಬಂದೂಕು ಹಿಡಿದು ಕೇಳಬೇಡಿ. ನಾನೇ ನಿಮ್ಮ ಬಳಿ ಬಂದಿದ್ದೇನೆ. ನಿಮ್ಮ ಮನವಿ ಕೇಳಲು ಬಂದಿದ್ದೇನೆ. ನಾವು ನಿಮ್ಮ ಬಳಿ ಬರುತ್ತೇನೆ. ನಿಮ್ಮೂರಿಗೆ ಬಂದು ಮಾತನಾಡುತ್ತೇನೆ. ಮಾಧ್ಯಮಗಳ ಮುಂದೆ ಹೆಚ್ಚಿಗೆ ಚರ್ಚೆ ಬೇಡ ಎಂದು ಸಚಿವೆ ಹೇಳಿದ್ದಾರೆ.

