Hubli News: ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಪುಡಿರೌಡಿಗಳು ಚಾಕು ಇರಿದು ಹಲ್ಲೆ ನಡೆಸಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಹುಬ್ಬಳ್ಳಿಯ ಮಿಲ್ಲತ್ ನಗರದ ಇಬ್ರಾಹಿಂ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಗಣೇಶ ಪೇಟ್ ಬಳಿಯಲ್ಲಿನ ತ್ರಿವೇಣಿ ಬೇಕರಿ ಬಳಿಯಲ್ಲಿ ರಾತ್ರಿ 9.30ಕ್ಕೆ ನಿಂತಾಗ ಏಕಾಏಕಿ ಕೆಲವು ಪುಡಿ ರೌಡಿಗಳು ಇಬ್ರಾಹಿಂ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ.
ಕೂಡಲೇ ಗಾಯಗೊಂಡ ಇಬ್ರಾಹಿಂ ನನ್ನು ಆತನ ಸ್ನೇಹಿತರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರೋ ಶಂಕೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಯಾವ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಘಟನೆಯ ಕುರಿತು ಗಾಯಾಳು ಹಾಗೂ ಆತನ ಪರಿಚಯದವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

