Tuesday, November 18, 2025

Latest Posts

ನನ್ನ ಸಾವಿಗೆ ಅವರೇ ಕಾರಣ : ಸಿಎಂ ಆಪ್ತನ ವಿರುದ್ಧ ಕೇಳಿ ಬಂತು ಗಂಭೀರ ಆರೋಪ.

- Advertisement -

Political News: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್.‌ ಪೊನ್ನಣ್ಣ ಅವರ ಹೆಸರು ಉಲ್ಲೇಖಿಸಿ ಬಿಜೆಪಿ ಕಾರ್ಯಕರ್ತ ಡೆತ್‌ನೋಡ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿರುವ ನಾಗವಾರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮನನೊಂದು 35 ವರ್ಷದ ವಿನಯ್‌ ಸೋಮಯ್ಯ ನೇಣಿಗೆ ಶರಣಾಗಿದ್ದಾರೆ.

ಇನ್ನೂ ಮಡಿಕೇರಿಯ ಬಿಜೆಪಿ ಕಾರ್ಯಕರ್ತನಾಗಿರದ್ದ ವಿನಯ್‌ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ವಿರಾಜಪೇಟೆಯ ಕಾಂಗ್ರೆಸ್‌ ಶಾಸಕ ಪೊನ್ನಣ್ಣ ಅವರ ಕುರಿತು ಆಕ್ಷೇಪಾರ್ಹ ಪೋಸ್ಟ್‌ವೊಂದನ್ನು ವಾಟ್ಸಾಪ್‌ ಗ್ರೂಪ್‌ನಲ್ಲಿ ಹರಿಬಿಟ್ಟಿದ್ದರು. ಇದರ ವಿರುದ್ಧ ಶಾಸಕರ ಆಪ್ತ ತೆನ್ನೀರ್‌ ಮಹೀನಾ ಎಂಬುವವರು ಮಡಿಕೇರಿ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ತಕ್ಷಣವೇ ವಿನಯ್‌ನನ್ನು ಪೊಲೀಸರು ಆಗ ಬಂಧಿಸಿದ್ದರು. ಇದರಿಂದ ವಿನಯ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಆದರೆ ಕಳೆದ ರಾತ್ರಿ ಕೊಡಗಿನ ಸಮಸ್ಯೆ ಮತ್ತು ಸಲಹೆ ಸೂಚನೆಗಳು ಎನ್ನುವ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ತಮ್ಮ ಡೆತ್‌ ನೋಟ್‌ ಪೋಸ್ಟ್‌ ಮಾಡಿ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಪ್ರಮುಖವಾಗಿ ಕೊಡಗಿನ ಸಮಸ್ಯೆಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಶಾಸಕರ ಗಮನ ಸೆಳೆಯಲು ಹಾಗೂ ಆಡಳಿತ ವ್ಯವಸ್ಥೆಗೆ ತಿಳಿಸುವ ಕುರಿತು ಮಾಡಿಕೊಂಡಿರುವ ಗ್ರೂಪ್‌ ಇದಾಗಿದೆ.

ಕಾಂಗ್ರೆಸ್​ ಕಾರ್ಯಕರ್ತ ತೆನ್ನೀರ್​ ನನ್ನ ಸಾವಿಗೆ ನೇರ ಹೊಣೆ..

ಅಲ್ಲದೆ ಡೆತ್​ನೋಟ್​ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಹಾಗೂ ಶಾಸಕ ಪೊನ್ನಣ್ಣ ಆಪ್ತ ತೆನ್ನಿರಾ ವಿರುದ್ದ ವಿನಯ್​ ನೇರ ಆರೋಪ ಮಾಡಿದ್ದು, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತ ತೆನ್ನೀರ್​ ನನ್ನ ಸಾವಿಗೆ ನೇರ ಹೊಣೆ. ನನ್ನ ವಿರುದ್ದ ಎಫ್​ಐಆರ್​​ ಹಾಕಿಸಿ ಕೊಡಗಿನ ತುಂಬ ನನ್ನ ವಿರುದ್ದ ಅಪಪ್ರಚಾರ ಮಾಡಿದ್ದಾನೆ. ತೆನ್ನೀರ್​ ಈ ಹಿಂದೆಯೂ ಹಲವರ ಆತ್ಮಹತ್ಯೆಗೆ ಕಾರಣನಾಗಿದ್ದಾನೆ ಎಂದು ಆರೋಪಿಸಿದ್ದಾನೆ.

ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿಸಿದ್ದರು. ಜಾಮೀನು ಸಿಕ್ಕಿದ್ದರು ನನ್ನ ಸ್ನೇಹಿತನ ಮನೆಗೆ ಹೋಗಿ ಪೊಲೀಸರು ವಿಚಾರಿಸಿದ್ದಾರೆ. ಇದೆಲ್ಲಾ ವಿರಾಜಪೇಟೆ ಶಾಸಕ ಪೊನ್ನಣ್ಣ ಆದೇಶದಂತೆ ಮಾಡಿದ್ದಾರೆ. ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್‌ಐಆರ್‌ ಮಾಡಿದ್ದಾರೆ. ನಮ್ಮ ಮೇಲೆ ರೌಡಿಶೀಟರ್ ಓಪನ್ ಮಾಡುವ ಹುನ್ನಾರ ನಡೆದಿದೆ. ಇವರಿಗೆ ಸರಿಯಾದ ಶಿಕ್ಷೆಯಾದ್ರೆ ನನ್ನ ಸಾವಿಗೆ ನ್ಯಾಯ ಸಿಗುತ್ತೆದೆ ಎಂದು ಬಿಜೆಪಿ ಕಾರ್ಯಕರ್ತ ವಿನಯ್​ ಸೋಮಯ್ಯ ತನ್ನ ಡೆತ್​ನೋಟ್​ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್​ ಮಾರ್ಟಮ್​ಗಾಗಿ ಶವವನ್ನು ಆಸ್ಪತ್ರೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬೀದಿಗಿಳಿಯಲು ಬಿಜೆಪಿ ಪ್ಲಾನ್..‌

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್‌, ನಮ್ಮ ಪಕ್ಷದ ಕಾರ್ಯಕರ್ತನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸಗಳಾಗುತ್ತವೆ. ಈಗಾಗಲೇ ನಾನು ಪಕ್ಷದ ನಾಯಕರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇನೆ. ವಿನಯ್‌ ಆತ್ಮಹತ್ಯೆಯನ್ನು ನಾವು ಸುಮ್ಮನೇ ಬಿಡುವುದಿಲ್ಲ. ಈ ಹಿಂದೆ ಕಲಬುರಗಿಯಲ್ಲೂ ಇದೇ ರೀತಿಯ ಘಟನೆಯಾಗಿತ್ತು. ಅದನ್ನೂ ಮುಚ್ಚಿ ಹಾಕಿದ್ದಾರೆ, ಆದರೆ ಇದನ್ನು ಹಾಗೆ ಆಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮನ್ನೂ ಸೇರಿಸಿ ಇಡೀ ಬಿಜೆಪಿ ಪಕ್ಷ ಮೃತ ವಿನಯ್‌ ಕುಟುಂಬದ ಜೊತೆಗೆ ಇರುತ್ತದೆ. ಅವರ ಮನೆಯವರ ಜೊತೆ ಚರ್ಚಿಸಿ ನಾವು ನಮ್ಮ ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಅಶೋಕ್‌ ವಿನಯ್‌ ಆತ್ಮಹತ್ಯೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆತ್ಮಹತ್ಯೆಗೂ ಮುನ್ನ ವಿನಯ್‌ ಬರೆದಿರುವ ಡೆತ್‌ನೋಟ್‌ನಲ್ಲಿ ಏನಿದೆ ಅಂತ ನೋಡುವುದಾದರೆ…

ಎಲ್ಲರಿಗೂ ನನ್ನ ಕೊನೆಯ ನಮಸ್ತೇ..

ನಾನು ವಿನಯ್ ಕೆಎಸ್‌ 2 ತಿಂಗಳಿನಿಂದ ನನ್ನ ಮನಸ್ಸೇ ಹತೋಟಿಗೆ ಬರುತಿಲ್ಲ, ಯಾರೋ ಒಬ್ಬರು “ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು ವಾಟ್ಸಪ್‌ ಗ್ರೂಪಿನಲ್ಲಿ ಹಾಕಿದ ವಾಟ್ಸಪ್‌ ಮೆಸೇಜ್‌ಗೆ ಅಡ್ಮಿನ್‌ ಆದ ನಮ್ಮನ್ನು (ನನ್ನ ಅಡ್ಮಿನ್ ಮಾಡಿದ್ದು 5 ದಿನಗಳ ಹಿಂದೆ) ಹೊಣೆ ಮಾಡಿ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕಿ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೀರ ಮಹೀನಾ ಅವರು ನನ್ನ ಸಾವಿಗೆ ನೇರ ಹೊಣೆ.

ನಮ್ಮ ಮೇಲೆ ಎಫ್‌ಐಆರ್‌ ಹಾಕಿ ಕಿಡಿಗೇಡಿಗಳು ಅಂತ ಇಡೀ ಕೊಡಗಿಗೆ ವೈರಲ್ ಮಾಡಿದ್ದು ಕೂಡಾ ಇವನೇ, ಅದು ಕೂಡಾ ನಮ್ಮ ಫೋಟೋ ಹಾಕಿ, ನಮ್ಮ ಫೋಟೋವನ್ನು ನಮ್ಮ ಅನುಮತಿ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಉಪಯೋಗಿಸುತ್ತಾರೆ? ಅದು ಕೂಡಾ ಆರೋಪ ಸಾಬೀತು ಆಗದೇ, ಅದನ್ನು ನೋಡಿದ ನಮ್ಮ ಮನೆಯವರು ಹಾಗೂ ಸಂಬಧಿಕರಿಗೆ ಹೇಗೆ ಅನ್ನಿಸಿರಬಹುದು ಅಂತ ನೀವೇ ಊಹಿಸಿಕೊಳ್ಳಿ. ಎಫ್‌ಐಆರ್‌ ಆದ ದಿನದಿಂದ ಜಾಮೀನು ಸಿಗುವ ತನಕ ನಾನು ನನ್ನ ಅಮ್ಮನ ಜೊತೆ ಮಾತನಾಡಿಲ್ಲ. ಈ ತೆನ್ನೀರ ಮಹೀನಾ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಅವರನ್ನೇ ಕೇಳಿ, ಅವರ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆಗೂ ತನ್ನೀರ ಮಹೀನಾ ಹಾಗೂ ಅವನ ಮಡದಿಗೆ ಏನು ಸಂಬಂಧ ಅಂತ. ಆ ಆತ್ಮಹತ್ಯೆಯ ತನಿಖೆ ಆಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಆ ಆತ್ಮಹತ್ಯೆ ಯ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.

ಆ ಗ್ರೂಪಿನಲ್ಲಿ ಇರುವ ಯಾರನ್ನು ಬೇಕಾದರೂ ಕೇಳಿ. ನನ್ನ ಒಂದು ಮೆಸೇಜ್ ಕೂಡಾ ಯಾರ ತೇಜೋವಧೆ ಮಾಡುವ ಹಾಗೆ ಇರಲಿಲ್ಲ. ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕಾಗಿ ಕೆಲವು ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ ನನ್ನ ಮೇಲೆ ಎಫ್‌ಐಆರ್‌ ಹಾಕಿದರು. ನಂತರ ಜಾಮೀನು ಸಿಕ್ಕಿದ ನಂತರ ಕೂಡಾ ನನ್ನ ಕಸಿನ್‌ ಹಾಗೂ ಸ್ನೇಹಿತರಿಗೆ ಕರೆ ಮಾಡಿ ಅವರ ಮನೆಗೆ ಹೋಗಿ ನನ್ನ ಅರೆಸ್ಟ್ ಮಾಡಲು ಮಡಿಕೇರಿಯ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಶುಕ್ರವಾರ ಜಾಮೀನು ಸಿಕ್ಕಿದರೂ ಕೂಡಾ ಶನಿವಾರ ನನ್ನ ಸ್ನೇಹಿತನ ಮನೆಗೆ ಹೋಗಿ ನನ್ನ ಬಗ್ಗೆ ವಿಚಾರಿಸುವ ಅವಶ್ಯಕತೆ ಏನಿತ್ತು? ಇದೆಲ್ಲಾ ವಿರಾಜಪೇಟೆಯ ಶಾಸಕ ಪೊನ್ನಣ್ಣನ ಆದೇಶ ಅಂತ ಸ್ವಂತ ಮಡಿಕೇರಿಯ ಒಬ್ಬ ಪೊಲೀಸ್ ಪೇದೆ ಹೇಳಿದರು. ನಂತರ ನನ್ನ ಸ್ನೇಹಿತನಿಗೆ ಪೊನ್ನಣ್ಣ ವಿನಯ್ ಅನ್ನೋ ಒಬ್ಬ ಕಾಲ್‌ ಮಾಡಿದ್ದ ನನಗೆ ಹಾಗೂ ಕೊಡವ ಹಾಗೂ ಗೌಡ ನಡುವೆ ಗಲಾಟೆ ಬಗ್ಗೆ ನನ್ನ ಜೊತೆ ಮಾತಾಡಿದ್ದು ಅಂತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಕಾಲ್‌ ಮಾಡಿದ್ದೇ ಆದಲ್ಲಿ ಕಾಲ್‌ ರೆಕಾರ್ಡ್ ತೋರಿಸಲಿ. ನಾನು ಮೆಸೇಜ್ ಮಾಡಿದ್ದು ನಿಜ, ಅದು ಕೂಡಾ ಯಾರೋ ಕಳಿಸಿದ ಆಕ್ಷೇಪಾರ್ಹ ವಾಯ್ಸ್‌ ಮೆಸೇಜ್ ಅವರಿಗೆ ಕಳಿಸಿ, ಅವರಿಗೆ ವಿಷಯ ತಿಳಿಸಿದ್ದು, ಅದರ ಸ್ಕ್ರೀನ್‌ ಶಾಟ್‌ ಕೂಡಾ ಕಳುಹಿಸಿದ್ದೇನೆ. ಆದರೆ ಅದರ ಬಗ್ಗೆ ಎಫ್‌ಐಆರ್‌ ಮಾಡದೇ ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್‌ಐಆರ್‌ ಹಾಕಿದ್ದು ಯಾವ ನ್ಯಾಯ?

ನಾನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಗ್ಗೆ ಗ್ರೂಪಿನಲ್ಲಿ ಕೇಳಿದ್ದಕ್ಕೆ ಮಡಿಕೇರಿಯ ಶಾಸಕ ಮಂಥರ್ ಗೌಡ ನನಗೆ ಕಾಲ್‌ ಮಾಡಿ ಹಾಗೆಲ್ಲ ಗ್ರೂಪಿನಲ್ಲಿ ಯಾಕೆ ಮೆಸೇಜ್ ಹಾಕ್ತಿಯ ಅಂತ ಅವರೇ ನಂಗೆ ಗದರಿದ್ದಾರೆ. ಏನಿದ್ರೂ ನನಗೆ ಹೇಳು, ಗ್ರೂಪ್‌ನಲ್ಲಿ ಹಾಕಿದ್ರೆ ಸರಿ ಇರಲ್ಲಾ ಅಂತ ನನಗೆ ಹೇಳಿದ್ದಾರೆ. ಪೂರಕ ಸಾಕ್ಷಿ ವಾಟ್ಸಪ್‌ ಕಾಲ್‌, ರಿಜಿಸ್ಟರ್‌ ಸ್ಕ್ರೀನ್‌ಶಾಟ್‌ ಕಳುಹಿಸಿದ್ದೇನೆ. ಅದರಲ್ಲಿ ನೀವೇ ನೋಡಿ ನಾನು ಅವರಿಗೆ ಕಾಲ್‌ ಮಾಡಿದ್ದಾ ಅಥವಾ ಅವರು ನನಗೆ ಕಾಲ್‌ ಮಾಡಿದ್ದಾ ಅಂತ. ಬೇಕಾದರೆ ಅವರ ವಾಟ್ಸಪ್‌ ಕಾಲ್‌ ಚೆಕ್ ಮಾಡಿ.

ಅದಲ್ಲದೇ ಹರೀಶ್ ಪೂವಯ್ಯ ಇವನು ಮಾರ್ಚ್ 11 ಕ್ಕೆ ಪೆರ್ಮೆರ ಕೊಡವ ಹಾಗೂ ನಂಗ ಕೊಡಗ್ ರ ಕೊಡವ ಮಕ್ಕ ಗ್ರೂಪಿನಲ್ಲಿ ಪುನಃ ಪುನಃ ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ತೆನ್ನೀರ ಮಹೀನಾ. ಅವನು ಬರೆದ ಆರ್ಟಿಕಲ್‌ ಅನ್ನು ಕೆಲವು ರಾಜಕೀಯ ಪ್ರೇರಿತ ಜನರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಅದು ಕೂಡಾ ಜಾಮೀನು ಆಗಿ ಎಫ್‌ಐಆರ್‌ ಮೇಲೆಯೇ ಮಾನ್ಯ ಹೈಕೋರ್ಟ್‌ನಿಂದ ತಡೆ ಬಂದ ಮೇಲೆ ಕೂಡಾ ಇವರು ನಮ್ಮನ್ನು ಕಿಡಿಗೇಡಿಗಳು ಅಂತ ಕರೆಯೋದು ಎಷ್ಟು ಸರಿ? ಕೆಲವು ಮೂಲಗಳಿಂದ ತಿಳಿದ ವಿಷಯ ಏನೆಂದರೆ, ನಮ್ಮ ಮೇಲೆ ರೌಡಿ ಶೀಟರ್ ಓಪನ್‌ ಮಾಡುವ ಹುನ್ನಾರ ಕೂಡಾ ನಡೆದಿದೆ. ಇವರಿಗೆಲ್ಲಾ ಸರಿಯಾದ ಶಿಕ್ಷೆ ಆಗಬೇಕು. ಆಗಲೇ ನನ್ನ ಸಾವಿಗೆ ನ್ಯಾಯ ದೊರಕುವುದು.

ಕರ್ನಾಟಕ ಬಿಜೆಪಿ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಲ್ಲಿ ನನ್ನ ಒಂದು ಬೇಡಿಕೆ. ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಕುಟುಂಬಕ್ಕೆ ನಿಮ್ಮ ಕೈಲಾದಷ್ಟು ಸಾಮಾಜಿಕವಾಗಿ, ಹಾಗೂ ಆರ್ಥಿಕವಾಗಿ (ಪ್ರತೀ ಒಬ್ಬರು ಒಂದು ರೂಪಾಯಿ ಕೊಟ್ಟರೂ ಅದು ನನ್ನ ಮಡದಿಯ ಹಾಗೂ ಮಗಳ ಭವಿಷ್ಯಕ್ಕೆ ಸಹಾಯವಾಗುತ್ತೆ) ಸಹಾಯ ಮಾಡಿ ನನ್ನ ತಾಯಿ, ಮಡದಿ, ಮಗಳು ಹಾಗೂ ನಮ್ಮ ಕುಟುಂಬಕ್ಕೆ ನನ್ನ ಸಾವಿನ ಸಮಯದಲ್ಲಿ ಟರ್ಚರ್‌ ಕೊಡದೇ ಎಲ್ಲಾ ಕಾರ್ಯ ಸುಸೂತ್ರವಾಗಿ ನಡೆಯಲು ಸಹಾಯ ಮಾಡಿ.

ಇದು ನನ್ನ ಕಳಕಳಿಯ ವಿನಂತಿ. ಯಾರೂ ಕೂಡಾ ನನ್ನ ಸಾವಿಗೆ ರಜೆ ಹಾಕಿ ದೂರದೂರಿಂದ ಬರುವ ಅವಶ್ಯಕತೆ ಇಲ್ಲ. ನೀವೆಲ್ಲಿದ್ದೀರೋ ಅಲ್ಲಿಂದಲೇ ನಮ್ಮ ಕುಟುಂಬಕ್ಕೆ ಆಶೀರ್ವದಿಸಿ. ಚಲನ್ ಅಣ್ಣ, ವಿಷ್ಣು ಅಣ್ಣ, ಹಾಗೂ ಸಚಿನ್ ಅಣ್ಣ ನನ್ನ ಮನೆಯವರೊಂದಿಗೆ ನಿಂತು ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಡಿ. ನನ್ನ ಮೇಲೆ ಎಫ್‌ಐಆರ್‌ ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್, ಚಲನ್, ಸಚಿನ್, ರಾಕೇಶ್ ದೇವಯ್ಯ, ಅಡ್ವೋಕೇಟ್ ನಿಶಾಂತ್, ಅಡ್ವೋಕೇಟ್ ಮೋಹನ್, ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.

ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ ಎಫ್‌ಐಆರ್‌ ಒಂದು ಪಾಠವಾಗಬೇಕು ಹಾಗೂ ಪೊಲೀಸ್ ನವರು ಸ್ವಲ್ಪ ವಿಚಾರ ಮಾಡಿ ಎಫ್‌ಐಆರ್‌ ಹಾಕಬೇಕು. ಯಾರೋ ಒಬ್ಬರು ದೂರು ದಾಖಲಿಸಿದರು ಅಂತ ಸುಖಾ ಸುಮ್ಮನೆ ಎಫ್‌ಐಆರ್‌ ಹಾಕುವುದು ಎಷ್ಟು ಸರಿ? ಈ ಮೆಸೇಜ್ ಅನ್ನು ಎಲ್ಲಾ ಸಾಮಾಜಿಕ ಜಾಲತಣದಲ್ಲಿ ಹಾಕಿ. ಇದರಿಂದಾಗಿ ಅಮಾಯಕರ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕುವುದು ಕೊನೆಗೊಳ್ಳಲಿ. ನಾನು ನಮ್ಮ ಮನೆಯವರಿಗೆ ಏನೂ ಬರೆಯುತಿಲ್ಲ, ಯಾಕೆಂದರೆ ನನಗೆ ಅವರಿಗೆ ಏನು ಹೇಳುವುದೆಂದು ತಿಳಿಯುತಿಲ್ಲ. ಎಲ್ಲರೂ ಯೋಚಿಸಬಹುದು ಘಟನೆ ಆಗಿ ಇಷ್ಟು ದಿನ ಆದ ಮೇಲೆ ಇವನಿಗೆ ಏನಾಯಿತು ಅಂತ, ನಾನು ಒಮ್ಮೆ ನನ್ನ ಮನೆಗೆ ಹೋಗಿ ಬರೋದನ್ನ ಕಾಯುತಿದ್ದೆ. ನನ್ನ ಮನೆಗೆ ಹೋಗಿ ಎಲ್ಲಾ ಕುಟುಂಬದವರ ಜೊತೆ ಕಳೆದ ಒಳ್ಳೆಯ ಸಮಯದ ನೆನಪಿನಲ್ಲಿ ನಾನು ವಿದಾಯ ಹೇಳುತಿದ್ದೇನೆ. ಸಾಧ್ಯವಾದರೆ ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೋಗುತಿದ್ದೇನೆ. ಇಂತಿ ನಿಮ್ಮ ವಿನಯ್‌ ಕೆಎಸ್‌.

- Advertisement -

Latest Posts

Don't Miss