Political news: ನಮ್ಮ ಪಕ್ಷದ ಕಾರ್ಯಕರ್ತ ವಿನಯ್ ಸೋಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ಹಾಗೂ ಅವರ ಬೆಂಬಲಿಗ ಕಿರುಕುಳ ನೀಡಿದ್ದಾರೆ ಎಂದು ಸ್ವತಃ ತಮ್ಮ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಅವರ ಕುಟುಂಬದವರು ನೀಡಿರುವ ದೂರಿನಲ್ಲಿನ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಲ್ಲದೆ ಕೇವಲ ತೆನ್ನೀರ್ ಮಹೀನಾ ಒಬ್ಬರ ಮೇಲಷ್ಟೇ ದೂರು ದಾಖಲಾಗಿದೆ. ಆದರೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್ಗೌಡ ಹಾಗೂ ಮುಖಂಡ ಹರೀಶ್ ಪೂವಯ್ಯ ಅವರ ವಿರುದ್ಧ ಕೇಸ್ ಮಾಡಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಕುಶಾಲ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲು ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲು ಮಾಡಬೇಕು. ಅಂದಾಗಲೇ ವಿನಯ್ ಸಾವಿಗೆ ನ್ಯಾಯ ಸಿಗುತ್ತದೆ. ಪೊನ್ನಣ್ಣ ಅವರಿಗೆ ಕೊಡಗಿನ ಜನ ಹೇಗೆ ಗೊತ್ತಿರುತ್ತಾರೆ..? ಅವರಿಗೆ ಫಿಕ್ಸರ್ಸ್ ಅಷ್ಟೇ ಗೊತ್ತಿರುತ್ತಾರೆ. ವೋಟ್ ಹಾಕಿದ ಸಾಮಾನ್ಯ ಜನರು ಅವರಿಗೆ ಗೊತ್ತಿರಲ್ಲ. ಒಬ್ಬರು ಬೆಂಗಳೂರಿನಲ್ಲಿದ್ದವರು, ಇನ್ನೊಬ್ಬರು ಕೇಸ್ ಫಿಕ್ಸ್ ಮಾಡಿ ಹಣ ಮಾಡಿದವರಾಗಿದ್ದಾರೆ. ಆದರೆ ಅಭಿವೃದ್ದಿಯ ಬಗ್ಗೆ ಧ್ವನಿ ಎತ್ತಿದರೆ ಎಫ್ಐಆರ್ ಹಾಕಿಸೋದು, ಕೇಸ್ ಮಾಡಿದೋದಷ್ಟೇ ಗೊತ್ತಾಗುತ್ತದೆ ಎಂದು ಸಿಂಹ ಕೈ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಸ್ವತಃ ವಿನಯ್ ಅವರೇ ಡೆತ್ನೋಟ್ನಲ್ಲೇ ಬರೆದಿದ್ದಾರೆ. ಆದರೆ ಅದನ್ನು ಅನುಮಾನಿಸುವ ಇವರುಗಳು ನ್ಯಾಯಲಯ ಈ ಹಿಂದೆ ನೀಡಿರುವ ತೀರ್ಪುಗಳನ್ನು ನೋಡಿದಾಗ ತಿಳಿಯುತ್ತದೆ. ಅಲ್ಲದೆ ಸಾವಿಗೂ ಮುನ್ನದ ಹೇಳಿಕೆಗಳನ್ನು ಯಾವುದೇ ರೀತಿಯಲ್ಲಾಗಲಿ ದಾಖಲಿಸಿದರೆ ಅದನ್ನು ಸಾಕ್ಷ್ಯ ರೀತಿಯಲ್ಲಿ ಪರಿಗಣಿಸಬೇಕು. ಆದರೂ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ನಿನ್ನೇ ನಮಗೆ ಪೊಲೀಸರು ಭರವಸೆ ನೀಡಿರುವಂತೆ ಪೊನ್ನಣ್ಣ, ಮಂಥರ್ ಗೌಡ ಹಾಗೂ ಹರೀಶ್ ಪೂವಯ್ಯ ಅವರ ವಿರುದ್ಧ ಕೇಸ್ ದಾಖಲಾಗುವವರೆಗೆ ನಾವು ಹಾಗೂ ಕುಟುಂಬಸ್ಥರೂ ಸೇರಿ ಅಂತ್ಯಕ್ರಿಯೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬೃಹತ್ ಹೋರಾಟಕ್ಕೆ ಕರೆ..
ಅಲ್ಲದೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕುಶಾಲ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇನ್ನೂ ಬಿಜೆಪಿ ನಾಯಕರಾದ ಆರ್.ಅಶೋಕ್, ಮೈಸೂರು ಸಂಸದ ಯಧುವೀರ್ ಒಡೆಯರ್ ಸೇರಿದಂತೆ ಹಲವರು ಕುಶಾಲ ನಗರಕ್ಕೆ ಆಗಮಿಸಿದ್ದಾರೆ. ಅಲ್ಲದೆ ವಿನಯ್ ಆತ್ಮಹತ್ಯೆಗೆ ನ್ಯಾಯ ಸಿಗಬೇಕಾದರೆ ಕಾಂಗ್ರೆಸ್ ಶಾಸಕ ಪೊನ್ನಣ್ಣ ಸೇರಿದ್ದಂತೆ ಉಳಿದವರ ವಿರುದ್ಧ ಎಫ್ಐಆರ್ ದಾಖಲಾಗಬೇಕೆಂದು ಪಟ್ಟು ಹಿಡಿದು ವಿನಯ್ ಶವ ಇಟ್ಟುಕೊಂಡು ಬಿಜೆಪಿ ಹೋರಾಟ ಮುಂದುವರೆಸುತ್ತಿದೆ. ಎಲ್ಲಿಯವರೆಗೆ ಕೇಸ್ ದಾಖಲಾಗಲ್ಲ, ಅಲ್ಲಿಯವರೆಗೆ ನಾವು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕೆಂಡವಾಗಿದ್ದಾರೆ.
ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ..
ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,, ಈಗಾಗಲೇ ಕೇಸ್ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ನಾನು ಏನನ್ನೂ ಹೇಳುವುದಿಲ್ಲ. ಬಿಜೆಪಿಯವರು ಹತಾಶರಾಗಿ, ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

