Monday, October 6, 2025

Latest Posts

Political News: ನಿನ್ನೆ ಇತ್ತು, ಇಂದು ಇಲ್ಲವೇ..? : ಸರ್ಕಾರದ ಭ್ರಷ್ಟಾಚಾರ ಬಗ್ಗೆ ಕೈ ಶಾಸಕ ಉಲ್ಟಾ..!

- Advertisement -

Political News: ಕಲ್ಯಾಣ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದಿಂದ ಕಾಮಗಾರಿಗಳು ಗುಣಮಟ್ಟದಿಂದ ಆಗುತ್ತಿಲ್ಲ. ರಾಜ್ಯ ಭ್ರಷ್ಟವಾದ ವ್ಯವಸ್ಥೆಯಲ್ಲಿ ನಂಬರ್‌ ಒನ್ ಎಂದು‌ ಹೇಳುವ ಮೂಲಕ ರಾಜ್ಯ ಸರ್ಕಾರವನ್ನೇ ಭ್ರಷ್ಟ ಸರ್ಕಾರ ಎಂದು ಟೀಕಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಇದೀಗ ಉಲ್ಟಾ ಹೊಡೆದಿದ್ದಾರೆ.

ತಮ್ಮ ಹೇಳಿಕೆ ವಿಪಕ್ಷಗಳಿಗೆ ಅಸ್ತ್ರವಾಗುತ್ತಿದ್ದಂತೆಯೇ ಎಚ್ಚೆತ್ತ ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನಾನು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಮ್ಮ ಸರ್ಕಾರದಲ್ಲಿ ಡಾ. ನಂಜುಂಡಪ್ಪ ವರದಿಯ ಅನುಷ್ಠಾನ ಆದ ಮೇಲೆ ಏನೆಲ್ಲಾ ಆಗಿದೆ ಎಂಬ ವಿಚಾರದ ಕುರಿತು ಚರ್ಚೆ ಮಾಡಿದ್ದೆ. ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಇದೊಂದು ಭ್ರಷ್ಟವಾದ ರಾಜ್ಯ ವ್ಯವಸ್ಥೆಯಾಗಿದೆ ಎಂದು ಹೇಳಿದ್ದೇನೆ. ಈ ವ್ಯವಸ್ಥೆ ಸರಿಯಾಗಿಲ್ಲ, ಒಳ್ಳೆಯ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ತಮ್ಮ ಹೇಳಿಕೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ..!

ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡದೆ ಉತ್ತಮ ವ್ಯವಸ್ಥೆಗೆ ಕಾರಣರಾಗಿ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಅಲ್ಲದೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಆದರೆ ಅದನ್ನು ಹತೋಟಿಗೆ ತರಬೇಕಾಗಿದೆ ಅಂದಾಗ ಮಾತ್ರ ಕರ್ನಾಟಕಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದೇನೆ. ಆದರೆ ನಾನು ಎಲ್ಲೂ ಕೂಡ ನಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿದೆ, ಅಥವಾ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಹೇಳಿಲ್ಲ ಎನ್ನುವ ಮೂಲಕ ರಾಯರೆಡ್ಡಿ ಮಂಗಳವಾರದ ಹೇಳಿಕೆಗೆ ಬುಧವಾರ ರಾಯರೆಡ್ಡಿ ಪಲ್ಟಿ ಹೊಡೆದಿದ್ದಾರೆ.

I stand with CM ಎಂದ ರಾಯರೆಡ್ಡಿ..

ನಮ್ಮ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಕಳಪೆ ಕಾಮಗಾರಿ ಹೆಚ್ಚಾಗಿ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಚಾರದಲ್ಲಿ ನನಗೆ ಎರಡು ಮಾತಿಲ್ಲ. ಅವರು ಇಡೀ ದೇಶದಲ್ಲೇ ಅತ್ಯುತ್ತಮ ಸಿಎಂ ಆಗಿದ್ದಾರೆ. ಅವರು ನನಗೆ ಸಚಿವ ಸ್ಥಾನ ಕೊಡಲಿ, ಬಿಡಲಿ I stand with CM ಎನ್ನುವ ಮೂಲಕ ಡ್ಯಾಮೇಜ್‌ ಕಂಟ್ರೋಲ್‌ಗೆ ಪ್ರಯತ್ನಿಸಿದ್ದಾರೆ. ಅಲ್ಲದೆ ನಾನು ಯಾವುದೇ ಪಕ್ಷದ ವಿರುದ್ಧ ಮಾತನಾಡಿಲ್ಲ, ನಮ್ಮ ಪಕ್ಷದ ವಿರುದ್ಧವೂ ಹೇಳಿಕೆ ನೀಡಿಲ್ಲ. ಆದರೆ ಅಧಿಕಾರಿಗಳ ಕಳಪೆ ಕೆಲಸದ ಬಗ್ಗೆ, ಭ್ರಷ್ಟಾಚಾರದ ಕುರಿತು ಮಾತನಾಡಿದ್ದೇನೆ. ಇನ್ನೂ ರಾಜ್ಯ ಭ್ರಷ್ಟಾಚಾರದಲ್ಲಿದೆ ಅಂತಾ ನಾನು ಹೇಳಿಲ್ಲ. ನಾನು ಜನರಲ್ ಆಗಿ ನಡೆದುಬಂದ ಭ್ರಷ್ಟಾಚಾರ ವ್ಯವಸ್ಥೆ ಬಗ್ಗೆ ಹೇಳಿದ್ದೀನಿ. ಸಿಎಂ‌ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತವಾಗಿದ್ದಾರೆ. ಇವತ್ತಿನ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ನಾನು ಹೇಳೋಕೆ ಆಗಲ್ಲ ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ ಎಂದು ರಾಯರೆಡ್ಡಿ ಒಪ್ಪಿಕೊಂಡಿದ್ದಾರೆ.

ಏನು ಹೇಳಿದ್ದರು ರಾಯರೆಡ್ಡಿ..?

ಕೊಪ್ಪಳದಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ಸಭೆಯಲ್ಲಿ ಮಾತನಾಡಿದ್ದ ಶಾಸಕ ರಾಯರೆಡ್ಡಿ, ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟಾಚಾರದಿಂದಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಮೊದಲು ಸರ್ಕಾರಿ ಕಟ್ಟಡಗಳೆಲ್ಲ ಅತ್ಯಂತ ಗುಣಮಟ್ಟವನ್ನು ಹೊಂದಿರುತ್ತಿದ್ದವು. ಅವು ಐದರಿಂದ ದಶಕಗಳಷ್ಟು ಬಾಳಿಕೆಯಲ್ಲಿರುತ್ತಿದ್ದವು, ಆದರೆ ಇತ್ತೀಚಿನ ಕಟ್ಟಡಗಳೂ ಹತ್ತು ವರ್ಷಗಳ ಮುನ್ನವೇ ನೆಲಕಚ್ಚುತ್ತಿವೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದರು.

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ ಕರಪ್ಷನ್..

ಇನ್ನೂ ಪ್ರಮುಖವಾಗಿ ಕಲ್ಯಾಣ ಕರ್ನಾಟಕದಲ್ಲಂತೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿರಬೇಕಾದರೆ ಇನ್ನೆಲ್ಲಿಯ ಪ್ರಾದೇಶಿಕ ಅಸಮಾನತೆ ಹೋಗುತ್ತದೆ ಎಂದು ಅವರು ಬೇಸರ ಹೊರಹಾಕಿದ್ದರು. ಅಲ್ಲದೆ ಈ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದರೆ, ಆಗ ಅವರು ಹೇಗಿರುತ್ತಾರೋ, ಅಧಿಕಾರಿಗಳೂ ಸಹ ಅದೇ ರೀತಿ ಇರುತ್ತಾರೆ. ಯಾರೇನೇ ಹೇಳಲ್ಲಿ ಅದರಲ್ಲೂ ಮುಖ್ಯಮಂತ್ರಿಗಳೂ ಸಹ ಏನಾದರೂ ಹೇಳಲ್ಲಿ ಈ ಭ್ರಷ್ಟಾಚಾರ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ರಾಯರೆಡ್ಡಿ ಖಡಕ್‌ ಆಗಿಯೇ ತಮ್ಮ ನಿಲುವು ವ್ಯಕ್ತಪಡಿಸಿದ್ದರು.

ನನ್ನ ಹೆಸರು ಉಲ್ಲೇಖಿಸಿ..

ಅಲ್ಲದೆ ರಾಜ್ಯದಲ್ಲಿ 22 ವರ್ಷಗಳಷ್ಟು ಹಳೆಯದಾದ ಡಿ.ಎಂ.ನಂಜುಂಡಪ್ಪ ವರದಿ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದೆ. ಭ್ರಷ್ಟಾಚಾರದ ಕುರಿತ ಈ ಹೇಳಿಕೆಗೆ ನನ್ನ ಹೆಸರನ್ನು ಉಲ್ಲೇಖಿಸಿಯೇ ಶಿಫಾರಸಿನಲ್ಲಿ ಸೇರಿಸಿ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ವಿಶಾಲ್ ಆರ್. ಅವರಿಗೆ ಶಾಸಕ ರಾಯರೆಡ್ಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇನ್ನೂ ಕೈ ಶಾಸಕರ ಈ ಹೇಳಿಕೆಯು ದೋಸ್ತಿಗಳಿಗೆ ಪ್ರಬಲವಾದ ಅಸ್ತ್ರವಾಗಿತ್ತು. ಇದರಿಂದ ಅಲರ್ಟ್‌ ಆಗಿರುವ ಅವರು ತಮ್ಮ ಹೇಳಿಕೆಗಳಿಗೆ ಸಮಜಾಯಿಷಿ ನೀಡುವ ಯತ್ನ ಮಾಡಿದ್ದಾರೆ.

- Advertisement -

Latest Posts

Don't Miss