Wednesday, July 2, 2025

Latest Posts

ನಮ್ಮ ಅನುಕೂಲ ನಾವು ನೋಡ್ಲೇಬೇಕು.. : ಡಿಕೆಗೆ ಮಾತಲ್ಲೇ ಗುಮ್ಮಿದ ಜಾರಕಿಹೊಳಿ

- Advertisement -

Political News: ರಾಜ್ಯದಲ್ಲಿ ವಿಮಾನ ನಿಲ್ದಾಣದ ನಿರ್ಮಾಣದ ವಿಚಾರಕ್ಕೆ ಆಡಳಿತ ಪಕ್ಷದ ನಾಯಕರಲ್ಲೇ ಒಮ್ಮತದ ಅಭಿಪ್ರಾಯ ಮೂಡುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ವಾರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಶಿರಾದಲ್ಲಿ ಏರ್‌ಪೋರ್ಟ್‌ಗಾಗಿ ಮನವಿ ಮಾಡಿದ್ದರು. ಇದಾದ ಬಳಿಕ ಹಲವು ನಾಯಕರು ಹೇಳಿಕೆಗಳ ನಡುವೆಯೇ ಇದೀಗ ಸತೀಶ್‌ ಜಾರಕಿಹೊಳಿ ಶಿರಾದಲ್ಲಿ ವಿಮಾನ ನಿಲ್ದಾಣಕ್ಕಾಗಿ ಈ ಮೊದಲೇ ಪತ್ರ ಬರೆದಿದ್ದೆ ಎನ್ನುವ ಮೂಲಕ ಏರ್‌ಪೋರ್ಟ್‌ ಫೈಟ್‌ಗೆ ಎಂಟ್ರಿಕೊಟ್ಟಿದ್ದಾರೆ.

ಶಿರಾದಲ್ಲೇ ಏರ್‌ಪೋರ್ಟ್‌ಗೆ ಜಾರಕಿಹೊಳಿ ಪಟ್ಟು..

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಶಿರಾದಲ್ಲಿಯೇ ಏರ್‌ಪೋರ್ಟ್‌ ನಿರ್ಮಾಣವಾಗುವಂತೆ ಶಾಸಕರು ಈಗ ಒತ್ತಾಯಿಸಿದರೆ, ನಾನು 6 ತಿಂಗಳು ಮೊದಲೇ ಸಿಎಂಗೆ ಪತ್ರ ಬರೆದು ವಿಮಾನ ನಿಲ್ದಾಣಕ್ಕಾಗಿ ಶಿರಾದಲ್ಲೇ ಸ್ಥಳ ಫಿಕ್ಸ್‌ ಮಾಡಿ ಎಂದು ಬೇಡಿಕೆ ಇಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ. ಶಿರಾದಲ್ಲಿ ಏರ್‌ಪೋರ್ಟ್‌ ನಿರ್ಮಾಣವಾಗುವುದರಿಂದ ಅರ್ಧ ಉತ್ತರ ಕರ್ನಾಟಕ ಸೇರಿದಂತೆ ಎಲ್ಲರಿಗೂ ಅನುಕೂಲವಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಇನ್ನೂ ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಏರ್‌ಪೋರ್ಟ್‌ ಆದರೆ ಇನ್ನಷ್ಟು ಸಂಚಾರ ದಟ್ಟಣೆಯಾಗುತ್ತದೆ, ಮತ್ತಷ್ಟು 5 ಸಾವಿರ ವಾಹನಗಳು ಓಡಾಟ ಜಾಸ್ತಿಯಾಗಿ ಜನರಿಗೆ ತೊಂದರೆಯಾಗುತ್ತದೆ. ಇದನ್ನೆಲ್ಲ ಗಮನಿಸಿ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ ಸತೀಶ್ ತಿಳಿಸಿದ್ದಾರೆ.

ನಮ್ಮ ಅನುಕೂಲ ನಾವು ನೋಡ್ಲೇಬೇಕು..!

ಇನ್ನೂ ಶಿರಾದಲ್ಲಿ ನಮ್ಮದೇ ಸರ್ಕಾರದ ಜಾಗವೂ ಇದೆ. ಅಲ್ಲಿ ಏರ್‌ಪೋರ್ಟ್‌ ನಿರ್ಮಾಣವಾದರೆ ಉತ್ತರ ಕರ್ನಾಟಕದ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಅಲ್ಲದೆ ನಮಗೆ ಅನುಕೂಲವಾಗುವ ಹಾಗೆ ನಾವು ನೋಡಲೇಬೇಕು. ಈ ಮೊದಲು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚಿಸಲಾಗಿದ್ದ ಸ್ಥಳಗಳಲ್ಲಿ ಶಿರಾ ಇರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಈಗ ಮತ್ತೆ ಅವರಿಗೆ ಹೇಳಿದರೆ ಬಂದು ನೋಡುತ್ತಾರೆ. ನಾವ್ಯಾರೇ, ಏನೇ ಹೇಳಿದರೂ ಅಂತಿಮವಾಗಿ ನಿರ್ಧಾರ ಮಾಡುವವರು ಎಎಐ ಅಧಿಕಾರಿಗಳು. ಶಿರಾದಲ್ಲಿ ಏರ್‌ಪೋರ್ಟ್‌ ನಿರ್ಮಾಣವಾದರೆ ಹುಬ್ಬಳ್ಳಿಯಿಂದ 3 ಹಾಗೂ ಬೆಳಗಾವಿಯಿಂದ 4 ಗಂಟೆಗಳಲ್ಲಿ ನಾವು ಅಲ್ಲಿಗೆ ತಲುಪುತ್ತೇವೆ. ಇದರಿಂದ ಸುತ್ತಮುತ್ತಲಿನ ಹಲವಾರು ಜಿಲ್ಲೆಗಳಿಗೂ ಲಾಭವಾಗಲಿದೆ ಎನ್ನುವ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ಲಿ ತಪ್ಪಿಸಿ, ಇಲ್ಲಿ ಮಾಡುವ ಉದ್ದೇಶವಿಲ್ಲ..

ಅಲ್ಲದೆ ಶಿರಾ, ನೆಲಮಂಗಲ ಅಥವಾ ಶಿರಾ ತುಮಕೂರು ನಡುವೆ ವಿಮಾನ ನಿಲ್ದಾಣ ನಿರ್ಮಾಣವಾದರೂ ಓಕೆ, ಅದು ಹೈವೇ ಸುತ್ತಮುತ್ತ ಆಗಬೇಕು. ಈಗಾಗಲೇ ಮೊನ್ನೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ನಾವು ಹೇಳಿದ್ದೇವೆ. ಟಿ.ಬಿ. ಜಯಚಂದ್ರ ಹಾಗೂ ಸಚಿವ ರಾಜಣ್ಣ ಅವರಿಗೆ ಶಿರಾದಲ್ಲಿ ನಿರ್ಮಾಣವಾಗುವಂತೆ ಪತ್ರ ಕೊಡಲು ಹೇಳಿದ್ದೇನೆ. ತುಮಕೂರಿನ ಹಿಂದಿನ ಭಾಗದಲ್ಲಿ ಏರ್‌ಪೋರ್ಟ್‌ ಆದರೆ ಟ್ರಾಫಿಕ್‌ ಕಡಿಮೆಯಾಗುತ್ತದೆ. ಲಾಭ ನಷ್ಟದ ಬಗ್ಗೆ ನಾವು ಹೇಳಿದ್ದೇವೆ. ನಾವು ಈ ವಿಚಾರವನ್ನು ಯಾವುದೇ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ, ಅವರಿಂದ ತಪ್ಪಿಸುವುದು ನಮ್ಮ ಉದ್ದೇಶವಿಲ್ಲ ಎನ್ನುವ ಮೂಲಕ ಡಿಕೆ ಶಿವಕುಮಾರ್‌ ಕನಕಪುರ ಬಳಿ ಏರ್‌ಪೋರ್ಟ್‌ ನಿರ್ಮಾಣದ ವಿಚಾರಕ್ಕೆ ನಯವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಸಿಎಂ ಅವರಿಗೆ ಪರಮೇಶ್ವರ್‌ ಹಾಗೂ ಜಯಚಂದ್ರ ಮಾತನಾಡಿದ್ದಾರೆ. ಬೇರೆ ಕಡೆಯಾದರೂ ಕೂಡ ಪರವಾಗಿಲ್ಲ, ಬದಲಿಗೆ ಅಲ್ಲಿ ತಪ್ಪಿಸಿ, ಇಲ್ಲಿ ಮಾಡುವ ವಿಚಾರ ನಮ್ಮಲ್ಲಿಲ್ಲ ಎಂದು ಸತೀಶ್‌ ಜಾರಕಿಹೊಳಿ ತಮ್ಮ ನಿಲುವು ಸ್ಪಷ್ಟ ಪಡಿಸಿದ್ದಾರೆ.

ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ..

ಶಿರಾಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 4,000 ಎಕರೆಯಲ್ಲಿ ನಿರ್ಮಾಣ ಆಗಿದೆ. ದೇಶದ ನಂಬರ್ ಒನ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ 5 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಇರುವ ಮಾನ್ಯತೆ ಕಾರಣಕ್ಕೆ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ. 150 ಕಿಲೋ ಮೀಟರ್ ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ಮಾಡಬೇಕು ಎಂಬ ಬೇಡಿಕೆ ಇದೆ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಶಿರಾದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಇವೆ. ಬೆಂಗಳೂರು, ಶಿರಾ ನಡುವೆ 1 ಗಂಟೆಯ ಪ್ರಯಾಣ. ಈ ಎಲ್ಲಾ ಕಾರಣಗಳನ್ನು ತಿಳಿಸಿ ಸಿಎಂಗೆ ಮನವಿ ಮಾಡಿದ್ದೇವೆ. ಕೇಂದ್ರ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡುತ್ತೇವೆ. ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಏರ್‌ಪೋರ್ಟ್ ಅಥಾರಿಟಿ ಅವರು ಇಷ್ಟು ಬೇಗ ಬರುತ್ತಾರೆ ಎಂದು ನಮಗೂ ಗೊತ್ತಿರಲಿಲ್ಲ. ಆದರೂ ಈಗಲೂ ಅವಕಾಶ ಇದೆ, ಶಿರಾದಲ್ಲಿ ಆಗುತ್ತಾ ಎಂಬುದನ್ನ ಪರಿಶೀಲಿಸಬಹುದು. ಏರ್‌ಪೋರ್ಟ್ 2032ಕ್ಕೆ ಆಗುತ್ತದೆ. ಇನ್ನೂ 8 ವರ್ಷ ಬೇಕು. ಶಿರಾದಲ್ಲಿ ಏರ್‌ಪೋರ್ಟ್ ಆದರೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಕ್ಕೆ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಏರ್‌ಪೋರ್ಟ್‌ ಜಟಾಪಟಿ..

ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಪಕ್ಷಾತೀತವಾಗಿ 30ಕ್ಕೂ ಹೆಚ್ಚು ಶಾಸಕರು ಪತ್ರಕ್ಕೆ ಸಹಿ ಹಾಕಿ, ಸಿದ್ದರಾಮಯ್ಯ ಅವರ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದರು. ಶಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇನ್ನೂ 2ನೇ ವಿಮಾನ ನಿಲ್ದಾಣದ ವಿಚಾರವಾಗಿ ನಾಯಕರ ನಡುವೆ ಜಟಾಪಟಿ ಶುರುವಾಗಿದೆ. ಸರ್ಕಾರ ಗುರುತಿಸಿರುವ 3 ಸ್ಥಳಗಳನ್ನ ಬಿಟ್ಟು ಶಿರಾದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಜೋರಾದ ಕೂಗು ಎದ್ದಿದೆ. ಕನಕಪುರದಲ್ಲೂ ವಿಮಾನ ನಿಲ್ದಾಣಕ್ಕೆ ಜಾಗ ಪರಿಶೀಲಿಸಲಾಗಿದೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡವೇ ಕಾರಣ ಎಂದು ಹಲವರಿಂದ ಬೇಸರ ವ್ಯಕ್ತವಾಗಿದೆ. ಏರ್‌ಪೋರ್ಟ್‌ ಸ್ಥಾಪನೆ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ಎಂದು 30ಕ್ಕೂ ಹೆಚ್ಚು ಶಾಸಕರು ಧ್ವನಿ ಎತ್ತಿದ್ದಾರೆ.

ಬೇಡವೇ ಬೇಡ..

ಇನ್ನೂ ಕನಕಪುರ ರಸ್ತೆಯ ಭಾಗದಲ್ಲಿ 2ನೇ ಏರ್​​ಪೋರ್ಟ್​ ಬೇಡವೇ ಬೇಡ. ತುಮಕೂರು ಅಥವಾ ಶಿರಾ ಭಾಗದಲ್ಲಿ ಎಲ್ಲೇ ನಿರ್ಮಿಸಿದ್ರೂ ಓಕೆ ಎಂದು ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು ಹೇಳುತ್ತಿದ್ದಾರೆ. ಆದರೆ ಶಿರಾ ಭಾಗದಲ್ಲಿ ಏರ್ ಪೋರ್ಟ್ ಮಾಡಲು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಶಿರಾದಲ್ಲಿ ಮಾಡಿದರೆ ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವುದಿಲ್ಲ. ತುಮಕೂರು, ಚಿತ್ರದುರ್ಗ ಸೇರಿ ಆ ಭಾಗಕ್ಕೆ ಒಂದು ಏರ್‌ಪೋರ್ಟ್ ಮಾಡೋಣ ಅಂತಲೂ ಹೇಳಿದ್ದೇವೆ. ನೆಲಮಂಗಲದ ಬಳಿ ಮಾಡಿದರೆ ಅದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎನ್ನುವ ಮೂಲಕ ಲಿಸ್ಟ್‌ನಿಂದ ಶಿರಾಗೆ ಕೊಕ್‌ ನೀಡಿದ್ದಾರೆ.

ಒಟ್ನಲ್ಲಿ.. ಸಚಿವರು, ಶಾಸಕರು ಹಾಗೂ ಸರ್ಕಾರ ಏನೇ ಹೇಳಿದರೂ ಸಹ ಈ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಅಂತಿಮವಾಗಿ ಕೇಂದ್ರದ ವಿಮಾನಯಾನ ಇಲಾಖೆ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತೀರ್ಮಾನವೇ ಫೈನಲ್‌ ಆಗಲಿದೆ. ಎಲ್ಲ ನಾಯಕರು ತಮ್ಮ ತಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕುವ ಮೂಲಕ ಹೇಳಿಕೆಗಳನ್ನು ನೀಡುತ್ತಿರುವುದನ್ನು ಅವರ ಮಾತುಗಳೇ ಹೇಳುತ್ತಿವೆ. ಅದೇನೆ ಇರಲಿ.. ಇನ್ನೂ 2032ರಲ್ಲಿ ಪೂರ್ಣ ಏರ್‌ಪೋರ್ಟ್‌ ಸೇವೆಗೆ ಸಿದ್ಧವಾಗಲಿದೆ. ಆದರೆ ಆರಂಭದಲ್ಲಿಯೇ ಇದಕ್ಕೆ ಅನೇಕ ವಿಘ್ನಗಳು ಎದುರಾಗುತ್ತಿರುವುದು. ಅಂತಿಮವಾಗಿ ಎಎಐ ಯಾವ ಸ್ಥಳವನ್ನು ನಿಗದಿಪಡಿಸಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

- Advertisement -

Latest Posts

Don't Miss