Political News: ದೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಕೇಂದ್ರ ಸರ್ಕಾರದ ಮುಂದೆ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಈ ಮೂಲಕ ದೇಶಾದ್ಯಂತ ಜಾತಿ ಗಣತಿಯ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿರುವ ಅವರು, ಈಗಾಗಲೇ ದೇಶದಲ್ಲಿ 2011ರ ಜನಗಣತಿಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಯೋಜನೆಗಳನ್ನು ರೂಪಿಸುತ್ತಿದ್ದು, ಇದರಿಂದ 2021ರಲ್ಲಿ ನಡೆಯಬೇಕಿದ್ದ ಜನಗಣತಿಯ ಕುರಿತು ಯಾವುದೇ ಪ್ರಸ್ತಾವವೇ ಇಲ್ಲ . ಅಲ್ಲದೆ ಯಾವ ಸಮುದಾಯವು ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂದು ತಿಳಿಯಲು ಸಾಮಾನ್ಯ ಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಈ ಹಿಂದೆ 2006ರಲ್ಲಿ ಪರಿಚಯಿಸಿದ್ದ ಆರ್ಟಿಕಲ್ 15 /5 ರ ಅಡಿಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಸಲುವಾಗಿಯೇ ಈ ಕಲಂಗಳನ್ನು ಅಂದಿನ ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. ಆದರೆ ಅದರ ಜಾರಿಯ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಈ ಕೂಡಲೇ ಆ ನಿರ್ಧಿಷ್ಟ ಆರ್ಟಿಕಲ್ ಅಡಿಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಜಾರಿಗೊಳಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಆರ್‌ಎಸ್‌ಎಸ್‌ಗಳೇ ಅಂಬೇಡ್ಕರ್ ಶತ್ರು..!
ಇನ್ನೂ ಪ್ರಮುಖವಾಗಿ ಮೀಸಲಾತಿಗಾಗಿ ವಿಧಿಸಲಾಗಿರುವ ಶೇಕಡಾ 50 ರಷ್ಟು ಮಿತಿಯನ್ನು ತೆಗೆಯಬೇಕು. ಅಲ್ಲದೆ ಎರಡು ಮರ್ಷಗಳ ಹಿಂದೆಯೇ ಅಂಗೀಕರಿಸಿರುವ ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಇಷ್ಟೇ ಅಲ್ಲದೆ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮಹಿಳೆಯರಿಗೆ ಈ ಕಾಯ್ದೆಯಡಿ ಕೋಟಾ ನೀಡಬೇಕಾಗಿದೆ ಎಂದು ಕೇಂದ್ರಕ್ಕೆ ಖರ್ಗೆ ಕುಟುಕಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದವರು ಕೇವಲ ಬಾಯಿ ಮಾತಿಗೆ ಅಂಬೇಡ್ಕರ್ ನೀತಿ ಪಾಲನೆ ಮಾಡುತ್ತಿದ್ದಾರೆ. ಇವರು ಬಾಬಾಸಾಹೇಬರ ಯಾವುದೇ ಆಕಾಂಕ್ಷೆಗಳನ್ನು ಪೊರೈಸುತ್ತಿಲ್ಲ. ಈ ಬಿಜೆಪಿ, ಆರ್‌ಎಸ್‌ಎಸ್‌ಗಳೇ ಅಂಬೇಡ್ಕರ್ ಅವರ ಶತ್ರುಗಳೆಂದು ಖರ್ಗೆ ಟೀಕಿಸಿದ್ದಾರೆ.
ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಕೈ ಬದ್ಧ..
ಸಂವಿಧಾನವು ನಾಗರಿಕರಿಗೆ ಅಂಬೇಡ್ಕರ್ ನೀಡಿದ ಉಡುಗೊರೆಯಾಗಿದೆ. ಏಕೆಂದರೆ ಅದು ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಹಕ್ಕನ್ನು ನೀಡುತ್ತದೆ ಎಂದು ಅವರು ಹೇಳಿದ್ದರು. ಅದರಂತೆ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಲ್ಲದೆ 1952 ರ ಚುನಾವಣೆಯಲ್ಲಿ ಎಸ್.ಎ. ಡಾಂಗೆ ಮತ್ತು ವಿ.ಡಿ. ಸಾವರ್ಕರ್, ಸಂವಿಧಾನ ಶಿಲ್ಪಿಯ ಸೋಲಿಗೆ ಕಾರಣ ಎಂದು ಅಂಬೇಡ್ಕರ್ ಬರೆದ ಪತ್ರವನ್ನು ಉಲ್ಲೇಖಿಸಿ, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖರ್ಗೆ ತಿರುಗೇಟು ನೀಡಿದ್ದಾರೆ