Saturday, April 19, 2025

Latest Posts

ಭ್ರಷ್ಟ ಉದ್ಯಮಿ ಚೋಕ್ಸಿ ಅಂದರ್ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮುಳುಗಿಸಿದ್ದ ಮಹಾ ವಂಚಕನಿಗೆ ಢವ ಢವ..!

- Advertisement -

International news: 2018ರಲ್ಲಿ ಭಾರತದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಭ್ರಷ್ಟ ವಜ್ರೋದ್ಯಮಿ ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ವಂಚಕ ಮೆಹುಲ್‌ ಚೋಕ್ಸಿ ಏಪ್ರಿಲ್‌ 12ರಂದು ಬೆಲ್ಜಿಯಂನಲ್ಲಿ ಬಲೆಗೆ ಬಿದ್ದಿದ್ದಾನೆ. ಅಲ್ಲದೆ ಪ್ರಮುಖವಾಗಿ ಭಾತರದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13, 800 ಕೋಟಿ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ ಮೆಹುಲ್‌ ಚೋಕ್ಸಿಯನ್ನು ವಶಕ್ಕೆ ನೀಡುವಂತೆ ಎನ್‌ಐಎ ಮಾಡಿಕೊಂಡಿದ್ದ ಮನವಿ ಆಧರಿಸಿ ಈ ಬಂಧನವಾಗಿದೆ. ಇನ್ನೂ ಇದೇ ಪ್ರಕರಣದಲ್ಲಿ ಸಿಲುಕಿ ಕಳೆದ ಏಳು ವರ್ಷಗಳಿಂದಲೂ ಚೋಕ್ಸಿ ಹಾಗೂ ನೀರವ್‌ ಮೋದಿ ಈ ಇಬ್ಬರೂ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿರಲಿಲ್ಲ. ಆದರೆ ನೀರವ್‌ ಮೋದಿ ಲಂಡನ್‌ ಜೈಲಿನಲ್ಲಿದ್ದಾನೆ. ಆತನನ್ನೂ ಸಹ ಭಾರತಕ್ಕೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.

ಹಸ್ತಾಂತರಕ್ಕಾಗಿ ಪ್ರಯತ್ನಿಸಿದ್ದ ತನಿಖಾ ಸಂಸ್ಥೆಗಳು..

ಇನ್ನೂ ಈ ವಂಚಕನ ವಿರುದ್ಧ ಹೊರಡಿಸಲಾಗಿದ್ದ ಇಂಟರ್‌ಪೋಲ್‌ ರೆಡ್‌ ನೋಟಿಸ್‌ ಅನ್ನು ಇತ್ತೀಚಿಗಷ್ಟೇ ರದ್ದುಗೊಳಿಸಲಾಗಿತ್ತು. ಅಲ್ಲದೆ ಭಾರತದ ತನಿಖಾ ಸಂಸ್ಥೆಗಳು ಈತನ ಹಸ್ತಾಂತರಕ್ಕಾಗಿ ಪ್ರಯತ್ನಿಸುತ್ತಿದ್ದವು. ಮುಂಬೈನ ಕೋರ್ಟ್‌ 2018 ಹಾಗೂ 2021ರಲ್ಲಿ ಹೊರಡಿಸಿದ್ದ ಎರಡು ಬಂಧನದ ವಾರಂಟ್‌ಗಳನ್ನು ಭಾರತದ ತನಿಖಾ ಸಂಸ್ಥೆಗಳು ಬೆಲ್ಜಿಯಂನ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಂಡು ಮನವಿ ಮಾಡಿಕೊಂಡಿದ್ದವು. ಅಂದಹಾಗೆ ಚೋಕ್ಸಿ ಬಂಧನದ ಬಳಿಕ ಕಾನೂನು ಪ್ರಕ್ರಿಯೆಗಳು ಮುಂದುವರೆದಿವೆ. ಆದರೆ ಹೇಳಿ ಕೇಳಿ ವಂಚಕನಾಗಿರುವ ಚೋಕ್ಸಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ರಾಜತಾಂತ್ರಿಕತೆಯ ಗೆಲುವು..

ಇನ್ನೂ ಇದೇ ವಿಚಾರಕ್ಕಾಗಿ ಕೇಂದ್ರ ಸರ್ಕಾರವು ಇದನ್ನು ಭಾರತದ ರಾಜತಾಂತ್ರಿಕತೆಯ ಬಹುದೊಡ್ಡ ಗೆಲುವು ಎಂದು ಬಣ್ಣಿಸಿದೆ. ಈ ಕುರಿತು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌, ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಬಂಧನವು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಜಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೋದಿ ನೇತೃತ್ವದ ಸರ್ಕಾರವು ಮೆಹುಲ್‌ ಚೋಕ್ಸಿಯಂತಹ ದೇಶಭ್ರಷ್ಟರ ವಿಚಾರದಲ್ಲಿ ಹಾಗೂ ಭ್ರಷ್ಟಾಚಾರದ ವಿಷಯಗಳಲ್ಲಿ ಎಳ್ಳಷ್ಟು ಸಹನೆಯನ್ನು ತೋರುವುದಿಲ್ಲ. ಈ ಬಂಧಿತ ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಇನ್ನೋರ್ವ ನಾಯಕ ಹಾಗೂ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಹೇಳಿದ್ದಾರೆ.

ಮೇಲ್ಮನವಿ ಸಲ್ಲಿಸುತ್ತೇವೆ..!

ಅಲ್ಲದೆ ಬೆಲ್ಜಿಯಂನಲ್ಲಿ ಶನಿವಾರ ಚೋಕ್ಸಿ ಬಂಧನವಾಗುತ್ತಿದ್ದಂತೆಯೇ ಅವರ ಪರ ವಕೀಲ ವಿಜಯ್‌ ಅಗರ್ವಾಲ್‌, ಚೋಕ್ಸಿ ಅವರಿಗೆ ತಮ್ಮ ಸಮರ್ಥನೆಗೆ ಅವಕಾಶ ನೀಡಬೇಕೆಂದು ಬಂಧನವನ್ನು ವಿರೋಧಿಸಿದ್ದಾರೆ. ಈಗ ಚೋಕ್ಸಿ ಜೈಲಿನಲ್ಲಿದ್ದಾರೆ, ಆದರೆ ಈಗ ಜಾಮೀನು ಕೋರುವುದಲ್ಲ. ಬದಲಿಗೆ ಅವರ ಬಂಧನದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿದೆ. ಇದರ ವಿಚಾರಣೆಯ ವೇಳೆ ಅವರನ್ನು ಬಂಧನದಲ್ಲಿ ಇಡಬಾರದು, ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕೆಂದು ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಜೈಲುಗಳ ಸ್ಥಿತಿ ಚೆನಾಗಿಲ್ಲ..

ಇನ್ನೂ ಅವರ ಹಸ್ತಾಂತರವನ್ನು ವಿರೋಧಿಸಲಾಗುತ್ತದೆ. ಅವರು ಪರಾರಿಯಾಗುವ ಲಕ್ಷಣಗಳು ಇಲ್ಲ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಲ್ಲದೆ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎನ್ನುವುದು ಮೇಲ್ಮನವಿ ಸಲ್ಲಿಸಲು ಇರುವ ಆಧಾರವಾಗಿದೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಭಾರತದಲ್ಲಿ ಜೈಲುಗಳ ಸ್ಥಿತಿಯು ಚೆನ್ನಾಗಿಲ್ಲ ಎಂಬ ವಾದವನ್ನು ಮುಂದೆ ಇಡಬಹುದಾಗಿದೆ ಎಂದು ಅಗರ್ವಾಲ್‌ ಹೇಳಿದ್ದಾರೆ.

ಪತ್ನಿಯೊಂದಿಗೆ ವಾಸವಾಗಿದ್ದ ವಂಚಕ ಚೋಕ್ಸಿ..!

ಇನ್ನೂ ಕೋಟ್ಯಂತರ ರೂಪಾಯಿ ವಂಚಿಸಿದ ಬಳಿಕ 2018ರಲ್ಲಿಯೇ ಈ ಚೋಕ್ಸಿ ನೇರವಾಗಿ ಆಂಟಿಗುವಾದಲ್ಲಿ ವಾಸವಾಗಿದ್ದ. ಆದರೆ ಆತ ಬೆಲ್ಜಿಯಂನಲ್ಲಿ ಇರುವ ಮಾಹಿತಿ ಕಳೆದ ವರ್ಷವಷ್ಟೇ ಗೊತ್ತಾಗಿತ್ತು. ಅಲ್ಲದೆ ಆತ ಅಲ್ಲಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ. ಭಾರತದಲ್ಲಿ ಬಂಧನವನ್ನು ತಪ್ಪಿಸಲು ಚೋಕ್ಸಿ ಬೆಲ್ಜಿಯಂಗೆ ಪರಾರಿಯಾಗಿದ್ದನು. ಇಲ್ಲಿ ಪತ್ನಿ ಪ್ರೀತಿ ಚೋಕ್ಸಿ ಅವರೊಂದಿಗೆ ಆಂಟ್ವೆರ್ಪ್‌ನಲ್ಲಿ ವಾಸಿಸುತ್ತಿದ್ದ. ಪ್ರೀತಿ ಚೋಕ್ಸಿ ಬೆಲ್ಜಿಯಂ ಪೌರತ್ವವನ್ನು ಹೊಂದಿದ್ದಾರೆ. ಚೋಕ್ಸಿ ಬೆಲ್ಜಿಯಂನಲ್ಲಿ ಎಫ್ ರೆಸಿಡೆನ್ಸಿ ಕಾರ್ಡ್ ಹೊಂದಿದ್ದು, ಚಿಕಿತ್ಸೆಗಾಗಿ ಆಂಟಿಗುವಾದಿಂದ ಬೆಲ್ಜಿಯಂಗೆ ಬರುತ್ತಿದ್ದ. ಇದಕ್ಕೂ ಮುನ್ನ ದೋಣಿ ಮೂಲಕ ಕ್ಯೂಬಾಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಚೋಕ್ಸಿಯನ್ನು 2021 ರಲ್ಲಿ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಬಳಿಕ ಆತನನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಯಿತು ಎಂದು ಅವರ ವಕೀಲರು ಹೇಳಿದ್ದಾರೆ. ಭಾರತ ಆತನ ಹಸ್ತಾಂತರಕ್ಕೆ ಕೋರಿತು. ಅದನ್ನು ಡೊಮಿನಿಕನ್ ಅಧಿಕಾರಿಗಳು ತಿರಸ್ಕರಿಸಿದ್ದರು. ಅಂತಿಮವಾಗಿ ಆತನನ್ನು ಆಂಟಿಗುವಾಕ್ಕೆ ಗಡಿಪಾರು ಮಾಡಲಾಗಿತ್ತು.

ಏನಿದು ವಂಚನೆ ಕೇಸ್..?‌

ಅಂದಹಾಗೆ ಭಾರತದ ಷೇರುಪೇಟೆಯ ಮಹಾಗೂಳಿ ಎಂತಲೇ ಖ್ಯಾತಿಯಾಗಿದ್ದ ಹರ್ಷದ್‌ ಮೆಹ್ತಾ 1992ರಲ್ಲಿ ನಡೆಸಿದ್ದ ಹಗರಣದ ಮೊತ್ತಕ್ಕೆ ಹೋಲಿಕೆ ಮಾಡಿದರೆ. ಈ ಪ್ರಕರಣವು ಸರಿ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ವಜ್ರದ ವ್ಯಾಪಾರಿಗಳಾಗಿದ್ದ ಮಾವ-ಅಳಿಯ ಮೆಹುಲ್‌ ಚೋಕ್ಸಿ ಹಾಗೂ ನೀರವ್‌ ಮೋದಿ ಈ ಇಬ್ಬರ ಜೋಡಿಯು ದೇಶದ ಬಹುದೊಡ್ಡ ಹಗರಣದ ರೂವಾರಿಗಳಾಗಿದ್ದಾರೆ. ಬರೊಬ್ಬರಿ 13, 800 ಕೋಟಿ ರೂಪಾಯಿಗಳಷ್ಟು ಹಣವನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿದ್ದರು.

ಬಳಿಕ ಚೋಕ್ಸಿಯು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶವನ್ನು ಬಿಟ್ಟು ಪರಾರಿಯಾಗಿದ್ದನು. ಅಲ್ಲದೆ ಇದೇ ಪ್ರಕರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ತನಿಖೆಯ ಭಾಗವಾಗಿ, ಇಡಿ ಭಾರತದಾದ್ಯಂತ 136 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಚೋಕ್ಸಿ ಒಡೆತನದ ಗೀತಾಂಜಲಿ ಗ್ರೂಪ್‌ಗೆ ಸಂಬಂಧಿಸಿದ 597.75 ಕೋಟಿ ರೂಪಾಯಿ ಹಾಗೂ ಮೆಹುಲ್ ಚೋಕ್ಸಿ ಮತ್ತು ಗೀತಾಂಜಲಿ ಗ್ರೂಪ್‌ನ 1,968.15 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

ಒಟ್ಟಾರೆಯಾಗಿ ಈ ಪ್ರಕರಣದಲ್ಲಿರೂ. 2,565.90 ಕೋಟಿ ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. ಮೂರು ಚಾರ್ಜ್ ಶೀಟ್ ಗಳನ್ನು ಇಡಿ ದಾಖಲಿಸಿದೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಹಾಗೂ ದೇಶದ ಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ಅಡಿಯಲ್ಲಿ ಈ ಇಬ್ಬರು ವಂಚಕರನ್ನು ಡ್ರಿಲ್‌ ಮಾಡಲು ಭಾರತದ ತನಿಖಾ ಸಂಸ್ಥೆಗಳು ಎದುರು ನೋಡುತ್ತಿವೆ.

ಇನ್ನೂ ಮೆಹುಲ್ ಚೋಕ್ಸಿ ವಿರುದ್ಧದ ಹಸ್ತಾಂತರ ಪ್ರಕ್ರಿಯೆಗಳು ಸಾಧ್ಯವಾದಷ್ಟು ಬೇಗ ಪ್ರಾರಂಭವಾಗುವಂತೆ ನೋಡಿಕೊಳ್ಳಲು ಭಾರತೀಯ ಅಧಿಕಾರಿಗಳ ತಂಡವು ಬೆಲ್ಜಿಯಂಗೆ ಭೇಟಿ ನೀಡಲಿದೆ ಎನ್ನಲಾಗಿದೆ. ಚೋಕ್ಸಿ ಎದುರಿಸಲಿರುವ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಬೆಲ್ಜಿಯಂ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ಭಾರತೀಯ ಅಧಿಕಾರಿಗಳಿಗೆ ಕಾನೂನು ಸಲಹೆಯನ್ನು ಸಹ ನೀಡಲಾಗುವುದು ಎಂದು ಬೆಲ್ಜಿಯಂ ಹೇಳಿದೆ.

ಯಾರೀತ ಮೆಹುಲ್‌ ಚೋಕ್ಸಿ..?

ಈ ಭ್ರಷ್ಟ ಉದ್ಯಮಿ ಮೆಹುಲ್‌ ಚೋಕ್ಸಿ 1959ರಲ್ಲಿ ಮುಂಬೈನಲ್ಲಿ ಜನಿಸಿದ್ದು, ಈತ ಗುಜರಾತಿನಲ್ಲಿ ತನ್ನ ಶಿಕ್ಷಣ ಪಡೆಯುತ್ತಾನೆ. ಬಳಿಕ ಪ್ರೀತಿ ಎನ್ನುವವರನ್ನು ವಿವಾಹವಾಗುತ್ತಾನೆ. ಈತ ಮೂರು ಮಕ್ಕಳನ್ನು ಹೊಂದಿದ್ದಾನೆ.

- Advertisement -

Latest Posts

Don't Miss