Political News: ರಾಜ್ಯ ಹಿಂದುಳಿದ ಆಯೋಗದ ವತಿಯಿಂದ ನಡೆಸಲಾಗಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಆಧಾರದ ಮೇಲೆ ದತ್ತಾಂಶಗಳ ರಿಪೋರ್ಟ್ ಕುರಿತು ರಾಜ್ಯ ಸರ್ಕಾರದಲ್ಲೇ ಅಪಸ್ವರ ಜೋರಾಗಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಹಾಗೂ ಸಮುದಾಯಗಳ ನಡುವೆ ಬಣಗಳು ನಿರ್ಮಾಣವಾಗುತ್ತಿದ್ದು, ಇದರಿಂದ ಸಿದ್ದರಾಮಯ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಪ್ರಮುಖವಾಗಿ ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು ತಮ್ಮದೇ ಪಕ್ಷದ ನಾಯಕರು ಎನ್ನುವುದು ಅವರಿಗೆ ಇನ್ನಷ್ಟು ಮುಜುಗರ ತರುತ್ತಿದೆ.
ಇನ್ನೂ ಈ ಜಾತಿ ಗಣತಿ ವರದಿಯ ಕುರಿತು ಸರ್ಕಾರದಲ್ಲೇ ಗುಂಪುಗಳಾಗಿದ್ದು, ಕೆಲವರು ಅವರವರ ಅಭಿಪ್ರಾಯದ ಜೊತೆಗೆ ತಮ್ಮ ತಮ್ಮ ಸಮುದಾಯಗಳ ನಿರ್ಧಾರಕ್ಕೆ ಕಟಿ ಬದ್ಧರಾಗಿ ನಿಂತಿದ್ದಾರೆ. ಅಲ್ಲದೆ ಇನ್ನೂ ಕೆಲವರು ಈ ಜಾತಿ ಗಣತಿಯ ಸಮರ್ಥನೆಯಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿಯೇ ಸ್ವಲ್ಪ ಜನ ಸಿದ್ದರಾಮಯ್ಯ ಮರ್ಜಿ ಕಾಯುವ ಕೆಲಸ ಮಾಡುತ್ತಿರುವುದು ಆಯಾ ಸಮುದಾಯಗಳ ಸಿಟ್ಟಿಗೆ ಕಾರಣವಾಗಿದೆ. ಅಂದಹಾಗೆ ಈ ಜಾತಿ ಗಣತಿಯ ವಿಚಾರವು ಸಾರ್ವಜನಿಕವಾಗಿ ಚರ್ಚೆಗೆ ಬರುವಂತಾಗಲಿ ಇದಕ್ಕಾಗಿ 3 ದಿನಗಳ ವಿಶೇಷ ಅಧಿವೇಶನ ಕರೆಯುವಂತೆ ಕೆಲ ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಸರ್ಕಾರವು ಅಧಿವೇಶನದ ಕುರಿತು ಚಿಂತನೆಯಲ್ಲಿದೆ.
ಇಕ್ಕಟ್ಟಿಗೆ ಸಿಲುಕಿದ ಸಿದ್ದು ಸರ್ಕಾರ..!
ಅಲ್ಲದೆ ರಾಜ್ಯದಲ್ಲಿ ಒಕ್ಕಲಿಗ, ಲಿಂಗಾಯತ ಸೇರಿದಂತೆ ವಿವಿಧ ಜಾತಿಗಳು ಈ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇನ್ನೂ ತಾನು ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಕೆಲವು ಆಯ್ಕೆಗಳನ್ನು ಮುಂದಿರಿಸಿಕೊಂಡಿದೆ. ಏಪ್ರಿಲ್ 17 ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲವೂ ಬಗೆಹರೆಯಲಿದೆ ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅದು ಅಷ್ಟೊಂದು ಸುಲಭವಾದ ವಿಚಾರವಲ್ಲ. ಯಾಕೆಂದರೆ ಯಾರಿಗೆ ಆಗಲಿ ಈ ಜಾತಿ ಅಂದರೆ ಎಲ್ಲಿಲ್ಲದ ಪ್ರೇಮ ಬರುತ್ತದೆ, ಅದರಲ್ಲೂ ಈ ರಾಜಕಾರಣಿಗಳಿಗಂತೂ ಅದೇ ಉಸಿರು. ಹೀಗಿರುವಾಗ ಈ ವಿಚಾರದಲ್ಲಿ ಎಲ್ಲ ಜನಪ್ರತಿನಿಧಿಗಳು ತಮ್ಮ ಸಮುದಾಯದ ತೀರ್ಮಾನಕ್ಕೆ ಬದ್ಧರಾಗಿರುವಂತೆಯೇ ಅವರ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಸಮುದಾಯದ ಜೊತೆ ಇರುವುದಾಗಿ ಸಾಬೀತು ಪಡಿಸಲು ಮುಂದಾಗುತ್ತಿದ್ದಾರೆ.
ನಾನು ಸರ್ವಜ್ಞನಲ್ಲ, ಪಂಡಿತನೂ ಅಲ್ಲ, ಹಳ್ಳಿಯಿಂದ ಬಂದವನು..
ಇನ್ನೂ ಇದೇ ವಿಚಾರಕ್ಕೆ ಒಕ್ಕಲಿಗ ಸಮುದಾಯಕ್ಕೆ ಜಾತಿ ಗಣತಿ ವರದಿಯಲ್ಲಿ ಅನ್ಯಾಯವಾಗಿದೆ, ಅದರಲ್ಲಿನ ಅಂಕಿ ಅಂಶಗಳಲ್ಲಿ ನಮ್ಮ ಜಾತಿಯನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಕ್ಕಲಿಗ ಶಾಸಕರ ಸಭೆ ಕರೆದು ಮುಂದಿನ ರೂಪು ರೇಷೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಒಕ್ಕಲಿಗ ಸಮುದಾಯದ ಶಾಸಕರು ಸಮುದಾಯದ ಸಚಿವರು, ಹಿರಿಯರ ಅಭಿಪ್ರಾಯ ಕೇಳಬೇಕು. ಸಮುದಾಯ ಪ್ರತಿನಿಧಿಯಾಗಿ ಕ್ಯಾಬಿನೆಟ್ನಲ್ಲಿ ಸಲಹೆ ನೀಡಬೇಕು. ಅದಕ್ಕಾಗಿ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವೆ. ನಾನು ಸರ್ವಜ್ಞನಲ್ಲ, ಪಂಡಿತನೂ ಅಲ್ಲ, ಹಳ್ಳಿಯಿಂದ ಬಂದವನು. ಎಲ್ಲ ಅವಲೋಕಿಸಿ, ತಿಳಿದುಕೊಂಡು ಕ್ಯಾಬಿನೆಟ್ನಲ್ಲಿ ಮಾತಾಡುವೆ ಎಂದು ಸಭೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅಲ್ಲದೆ ಪ್ರಮುವಾಗಿ ಹಳೆ ಮೈಸೂರು ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳು ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೆ ಜಾತಿ ಗಣತಿ ಜಾರಿಯಾದರೆ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆಯನ್ನು ಒಕ್ಕಲಿಗರ ಸಂಘ ಸರ್ಕಾರಕ್ಕೆ ನೀಡಿದೆ.
ಶೋಷಿತರ ಬೆಂಬಲ, ಪ್ರಬಲರ ವಿರೋಧ..
ಅಲ್ಲದೆ ಇನ್ನೊಂದೆಡೆ ಲಿಂಗಾಯತರನ್ನು ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ಹೇಗೆ ರಾಜ್ಯಭಾರ ಮಾಡೋಕಾಗುತ್ತೆ ಎನ್ನುವ ಮೂಲಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ಇದರ ನಡುವೆಯೇ ರಾಜ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಜಾರಿ ಮಾಡಲೇಬೇಕು ಎಂದು ಶೋಷಿತ ಸಮುದಾಯಗಳ ಒಕ್ಕೂಟ ಪಟ್ಟು ಹಿಡಿದಿದೆ.
ಸರ್ಕಾರದ ಮುಂದಿನ ನಡೆ ಏನು..?
ಪ್ರಮುಖವಾಗಿ ಜಾತಿ ಗಣತಿಯ ಕುರಿತು ಹರಿದಾಡುತ್ತಿರುವ ಅಂಕಿ – ಅಂಶಗಳು ಕೇವಲ ಸೋರಿಕೆಯಾಗಿರುವ ದತ್ತಾಂಶಗಳಾಗಿವೆ. ಆದರೆ ಅಸಲಿ ವರದಿಯಲ್ಲಿ ಏನಿದೆ ಎನ್ನುವುದು ಅಧಿಕೃತವಾಗಿ ಬಹಿರಂಗವಾದ ಬಳಿಕವೇ ಗೊತ್ತಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ವಾಸ್ತವ ವರದಿಯಲ್ಲಿನ ಗೌಪ್ಯತೆಯ ಅಂಶಗಳು ಇನ್ನೂ ಹೊರಬಿದ್ದಿಲ್ಲ, ಕೇವಲ ದತ್ತಾಂಶಗಳ ಆಧಾರದ ಮೇಲೆಯೇ ಪರ – ವಿರೋಧದ ಚರ್ಚೆಗಳು ನಡೆಯುತ್ತಿವೆ. ಇನ್ನೂ ಈ ಜಾತಿ ಗಣತಿಯ ವಿಚಾರದಲ್ಲಿ ಸರ್ಕಾರದ ಎದುರು ಕೆಲವೇ ಕೆಲವು ಆಯ್ಕೆಗಳು ಉಳಿದುಕೊಂಡಿವೆ. ಅದರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವರ ಬೇಡಿಕೆಯಂತೆ ಈ ವಿಚಾರದ ಕುರಿತು ಸಾರ್ವಜನಿಕ ಚರ್ಚೆಯ ಉದ್ದೇಶದಿಂದ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯುವುದರ ಬಗ್ಗೆ ಏಪ್ರಿಲ್ 17ರಂದು ಈ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ. ಅಲ್ಲದೆ ವರದಿಯ ಕುರಿತು ಅಧ್ಯಯನಕ್ಕಾಗಿ ಸಚಿವ ಸಂಪು ಉಪಸಮಿತಿ ರಚನೆ ಸೇರಿದಂತೆ ಈಗಿರುವುದಕ್ಕಿಂತ ಹೆಚ್ಚಾಗಿ ಸಚಿವರು ಸಮುದಾಯದ ಹಿತಾಸಕ್ತಿಯ ಒತ್ತಡಕ್ಕೆ ಮಣಿದು ಜಾತಿ ಗಣತಿ ಬಗ್ಗೆ ತಕರಾರು ಎತ್ತಿದರೆ ಅನಿವಾರ್ಯವಾಗಿ ವೈಜ್ಞಾನಿಕ ಮಾನದಂಡಗಳನ್ನು ಪಾಲಿಸಿ ಮತ್ತೊಮ್ಮೆ ನೂತನ ಸಮೀಕ್ಷೆ ನಡೆಸುವ ಕುರಿತು ಸರ್ಕಾರವು ಚಿಂತನೆಯಲ್ಲಿದೆ. ಇಷ್ಟೇ ಅಲ್ಲದೆ ವರದಿಯಲ್ಲಿನ ವಸ್ತು ನಿಷ್ಠತೆ ಹಾಗೂ ಸಾಧಕ – ಬಾಧಕ ಅಧ್ಯನಕ್ಕೆ ತಜ್ಞರ ಸಮಿತಿ ರಚಿಸುವುದು ಪರ ಹಾಗೂ ವಿರೋಧದ ಅಖಾಡದಲ್ಲಿ ಆಯಾಯ ಸಮುದಾಯದ ಸ್ವಾಮೀಜಿಗಳು ಇಳಿದಿದ್ದಾರೆ.ಸರ್ಕಾರದ ಜಾತಿ ಗಣತಿಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕುತೂಹಲ ಮೂಡಿಸಿದ ಸಚಿವರ ನಡೆ..!
ಅಂದಹಾಗೆ ಜಾತಿ ಗಣತಿ ವಿರೋಧಿಸುತ್ತಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಹಾಗೂ ಶಾಸಕರು ಸಮುದಾಯವಾರು ಸಭೆಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಅಲ್ಲದೆ ಈ ಗಣತಿಯಲ್ಲಿ ಅಂತಿಮ ವರದಿಯ ಬಳಿಕ ಪೂರಕವಾಗಿ ದತ್ತಾಂಶಗಳನ್ನು ಜೋಡಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ. ಏತನ್ಮಧ್ಯೆ, ಕಳೆದ ವಾರ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಮಂಡಿಸಿದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಚಿವರಿಗೂ ಪಕ್ಷದ ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಜಾತಿ ಗಣತಿ ಅಂಗೀಕಾರ ಮಾಡಬೇಕಿದೆ ಎಂಬ ಸಂದೇಶ ನೀಡಿದ್ದರು. ಈ ಕಾರಣಕ್ಕಾಗಿಯೇ ಸಮುದಾಯ ಹಾಗೂ ಸರ್ಕಾರದ ಒತ್ತಡದ ನಡುವೆಯೇ ಯಾವ ಹಾದಿ ತುಳಿಯುತ್ತಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.