News: ರಾಜ್ಯಾದ್ಯಂತ ವೃತ್ತಿಪರ ಕೋರ್ಸ್‌ಗಾಗಿ ಸಿಇಟಿ ಪರೀಕ್ಷೆಗಳು ನಡೆದಿದ್ದು, ಇದರಲ್ಲಿ ಕೆಲ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ರಾಜ್ಯಾದ್ಯಂತ ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಬ್ರಾಹ್ಮಣ ಸಂಘಟನೆಯಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಬೀದರ್ನಲ್ಲಿನ ಪರೀಕ್ಷಾ ಕೇಂದ್ರ ವೊಂದರ ಸಿಬ್ಬಂದಿಗಳು ಮೊದಲ ಎರಡು ಪರೀಕ್ಷೆಗೆ ಅವಕಾಶ ನೀಡಿದ್ದರು. ಆದರೆ ಏಪ್ರೀಲ್ 17ರಂದು ನಡೆದಿದ್ದ ಗಣಿತ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುವು ಮಾಡಿಕೊಟ್ಟಿರಲಿಲ್ಲ.
ಅಲ್ಲದೆ ಪ್ರವೇಶಕ್ಕೂ ಮುನ್ನ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗೆ ಜನಿವಾರ ಧರಿಸದೆ ಪರೀಕ್ಷಾ ಕೊಠಡಿಯೊಳಗೆ ಹೋಗಲು ಸೂಚಿಸಿದ್ದಾರೆ. ಆದರೆ ವಿದ್ಯಾರ್ಥಿ ಕಳೆದ ದಿನ ನಡೆದ ಪರೀಕ್ಷೆಗೆ ಜನಿವಾರ ಧರಿಸಿಯೇ ಬಂದಿದ್ದೆ. ಈಗಲೂ ಅದಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದನು. ಆದರೆ ಇದಕ್ಕೆ ಒಪ್ಪದ ಸಿಬ್ಬಂದಿಗಳು ಜನಿವಾರ ದಾರದಿಂದ ಏನಾದರು ಮಾಡಿಕೊಂಡರೆ ಯಾರು ಹೊಣೆ , ಜನಿವಾರ ದಾರ ತೆಗೆಯುವಂತೆ ತಿಳಿಸಿದ್ದಾರೆ. ಆದರೆ ವಿದ್ಯಾರ್ಥಿ ಇದಕ್ಕೆ ಒಪ್ಪಿರಲಿಲ್ಲ. ಪರೀಕ್ಷಾ ಕೇಂದ್ರದ ಹೊರಗಡೆಯೇ ನಿಂತಿದ್ದನು.
ಮಗನ ಭವಿಷ್ಯ ಹಾಳು ಮಾಡಿ ಬಿಟ್ರು..!
ಇನ್ನೂ ಬೀದರ್ ನಗರದ ಚೌಬಾರ ನಿವಾಸಿ ಸುಚಿವ್ರತ್ ಕುಲಕರ್ಣಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಸುಚಿವ್ರತ್ ಜನಿವಾರ ಹಾಕಿಕೊಂಡೆ ಏಪ್ರೀಲ್16 ರಂದು ಅದೇ ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ಹಾಗೂ ರಾಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದನು. ಅದೇ ರೀತಿ ಏಪ್ರೀಲ್ 17ರಂದು ವಿದ್ಯಾರ್ಥಿ ಗಣಿತ ಪರೀಕ್ಷೆಗೆ ಹಾಜರಾಗಿದ್ದನು. ಆದರೆ ಅವಕಾಶ ನಿರಾಕರಣೆಯಿಂದ ಇದೀಗ ಆತನ ಎಂಜಿನಿಯರಿಂಗ್ ಕನಸು ಭಗ್ನಗೊಂಡಿದೆ. ಇನ್ನೂ ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಜನಿವಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದನ್ನು ಅಷ್ಟು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ನನ್ನ ಮಗನಿಗೆ ಕಾಲೇಜು ಮಂಡಳಿ ಹಾಗೂ ಈ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಅನ್ಯಾಯ ಮಾಡಿದ್ದಾರೆ. ಅವರಿಂದ ನಮ್ಮ ಮಗನ ಒಂದು ವರ್ಷದ ಶೈಕ್ಷಣಿಕ ಭವಿಷ್ಯ ಹಾಳಾಗಿದೆ ಎಂದು ವಿದ್ಯಾರ್ಥಿ ತಾಯಿ ಆಕ್ರೋಶ ಹೊರಹಾಕಿದ್ದಾರೆ.
ಜನಿವಾರ ಕತ್ತರಿಸಿದ್ದ ಸಿಬ್ಬಂದಿ..
ಇಷ್ಟೇ ಅಲ್ಲದೆ ಶಿವಮೊಗ್ಗದಲ್ಲೂ ಜನಿವಾರ ತೆಗೆಸಿದ ಘಟನೆಯೂ ನಡೆದಿದೆ. ಇದರ ವಿರುದ್ಧ ಬ್ರಾಹ್ಮಣ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿವೆ. ಇಲ್ಲಿನ ತೀರ್ಥಹಳ್ಳಿಯ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಈ ಎರಡೂ ಘಟನೆಗಳನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾ ಸಿಡಿದೆದ್ದಿದ್ದು, ಬೃಹತ್ ಹೋರಾಟಕ್ಕೆ ಕರೆ ನೀಡಿದೆ.
ಅತಿರೇಕದ ವರ್ತನೆ..
ಆದರೆ ಶಿವಮೊಗ್ಗ ಹಾಗೂ ಬೀದರ್ ಘಟನೆಯನ್ನು ಖಂಡಿತ ಒಪ್ಪುವ ವಿಚಾರವಲ್ಲ. ಶಿವಮೊಗ್ಗದಲ್ಲಿ ಈ ರೀತಿ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮ ಪ್ರೋಟೋಕಾಲ್ ಅಡಿಯಲ್ಲಿ ಪಾಲನೆ ಮಾಡಬೇಕು. ಯಾವುದೇ ಕೇಂದ್ರದಲ್ಲಿ ಆ ರೀತಿ ಘಟನೆ ಆಗಿದ್ರೆ ಗಂಭೀರವಾಗಿ ಪರಿಗಣನೆ ಮಾಡ್ತೀವಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ಆಗಿರೊದು ಸತ್ಯ ಆದರೆ ಖಂಡಿತ ಅತಿರೇಕ. ಯಾವ ರೀತಿಯ ವಿಕೃತಿ ಮನಸ್ಥಿತಿ ಇದು. ಎಲ್ಲಾ ಜಾತಿ ಧರ್ಮ ಆಚರಣೆ ಸಂಪ್ರದಾಯ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆ ಪ್ರೋತ್ಸಾಹ ಕೊಡಲ್ಲ. ವರದಿ ಪಡೆದ ಬಳಿಕ ಏನ್ ಮಾಡಬಹುದು ಅಂತ ಯೋಚನೆ ಮಾಡ್ತೀನಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಅಲ್ಲದೆ ಸಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ, ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಯಾವುದೇ ಕೇಂದ್ರದಲ್ಲಿ ಆ ರೀತಿಯ ಘಟನೆ ನಡೆದಿದ್ದರೆ ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ನಾವು ಎಲ್ಲಾ ಜಾತಿ, ಧರ್ಮಗಳ ಆಚರಣೆ ಸಂಪ್ರದಾಯಕ್ಕೆ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆಗಳಿಗೆಲ್ಲ ಪ್ರೋತ್ಸಾಹ ಕೊಡುವುದಿಲ್ಲ. ಘಟನೆಗೆ ಸಂಬಂಧ ಅಧಿಕಾರಿಗಳ ಬಳಿ ವರದಿ ಪಡೆದು, ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಆ ರೀತಿ ಆಗಿದ್ದು ಸತ್ಯವೇ ಆದರೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆ. ಆಯ್ದ ವಿಚಾರ ಎತ್ತಿಕೊಂಡು ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯವನ್ನು ನೋವಿಸುವ ಉದ್ದೇಶ ನಮ್ಮದಲ್ಲ ಎಂದು ಸುಧಾಕರ್ ಘಟನೆಯನ್ನು ಖಂಡಿಸಿದ್ದಾರೆ.
ಕಾನೂನಿನಲ್ಲಿ ಅವಕಾಶವಿಲ್ಲ..!
ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿ ಜನಿವಾರ ತೆಗೆಸಿದ ಆರೋಪ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ವಿಚಾರ ತಿಳಿದುಕೊಂಡಿದ್ದೇವೆ. ಈ ಬಗ್ಗೆ ನಿರ್ದೇಶನ ಕೊಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಈ ರೀತಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಹಾಗಾಗಿ ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸುವೆ. ಈ ಘಟನೆ ನನ್ನ ಜಿಲ್ಲೆಯಲ್ಲಿ ಆಗಿರುವುದರಿಂದ ಕ್ರಮಕ್ಕೆ ಸೂಚನೆ ನೀಡುತ್ತೇವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೆಇಎ ಇಂತಹ ನಿಯಮ ರೂಪಿಸಿಲ್ಲ..
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಘಟನೆಯ ಸಂಪೂರ್ಣ ವರದಿ ನೀಡಲು ತಿಳಿಸಿದ್ದೇವೆ. ಅಲ್ಲದೆ ನಾವು ಎಲ್ಲೂ ಈ ಕುರಿತು ಯಾವುದೇ ಪರೀಕ್ಷಾ ಕೇಂದ್ರಗಳಿಗೂ ನಿರ್ದೇಶನ ಮಾಡಿಲ್ಲ. ಪ್ರಾಧಿಕಾರದಲ್ಲಿ ಜನಿವಾರ ತೆಗೆಸುವಂತ ನಿಯಮಗಳೇ ಇಲ್ಲ. ಇದರಲ್ಲಿ ಕೆಳ ಹಂತದ ಸಿಬ್ಬಂದಿ ತಪ್ಪು ಕಂಡು ಬಂದಿದೆ. ಸರ್ಕಾರ ಹಾಗೂ ಪ್ರಾಧಿಕಾರ ವಿದ್ಯಾರ್ಥಿಗಳ ಪರವಾಗಿವೆ. ನೊಂದ ವಿದ್ಯಾರ್ಥಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.