ಬೆಂಗಳೂರು : ಅಹುಮದಾಬಾದ್ನ ಮೇಘಾನಿ ನಗರದಲ್ಲಿ ನಡೆದ ವಿಮಾನ ದುರಂತದ ಬಳಿಕ, ಏರ್ ಇಂಡಿಯಾ ಬೋಯಿಂಗ್ ವಿಮಾನಗಳನ್ನು ಪ್ರತೀ ಹಂತದಲ್ಲೂ ಪರಿಶೀಲನೆ ನಡೆಸಲಾಗ್ತಿದೆ. ಎಐ 171 ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ, ಬಿಜೆ ಹಾಸ್ಟೆಲ್ಗೆ ಅಪ್ಪಳಿಸಿ ಪತನಗೊಂಡಿತ್ತು. 241 ಪ್ರಯಾಣಿಕರು ದಾರುಣವಾಗಿ ಅಂತ್ಯಕಂಡಿದ್ರು. ಹಾಸ್ಟೆಲ್ ವಿದ್ಯಾರ್ಥಿಗಳು, ವ್ಯಾಪಾರಿಗಳು, ಸ್ಥಳೀಯರು ಸೇರಿ 270ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರು. ಇದಾದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಎಲ್ಲಾ ಏರ್ ಇಂಡಿಯಾ ವಿಮಾನಗಳ ಸುರಕ್ಷತಾ ಗುಣಮಟ್ಟ ತಪಾಸಣೆಗೆ ಆದೇಶಿಸಿತ್ತು.
ಆದರೆ ಇದೀಗ ತಪಾಸಣೆಯಲ್ಲಿ ಶಾಕಿಂಗ್ ಅಂಶವೊಂದು ಬೆಳಕಿಗೆ ಬಂದಿದೆ. ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಹಲವು ಎಐ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನಗಳಲ್ಲಿ ತಾಂತ್ರಿಕ ದೋಷದ ಸರಣಿ ಮುಂದುವರೆದಿದೆ. ಜೂನ್ 17ರಂದು ಏರ್ ಇಂಡಿಯಾದ ಏಳು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಂಡಿದೆ.
ಬೆಂಗಳೂರು – ಲಂಡನ್, ಅಹಮದಾಬಾದ್ -ಲಂಡನ್, ದಿಲ್ಲಿ – ವಿಯೆನ್ನಾ, ಲಂಡನ್ – ಅಮೃತಸರ ನಡುವಿನ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಖ್ಯವಾಗಿ ಏರ್ ಇಂಡಿಯಾದಲ್ಲಿ ಡ್ರೀಮ್ ಲೈನರ್ 787 ಸರಣಿಯ 33 ವಿಮಾನಗಳಿದ್ದು, ಇದರಲ್ಲಿಯೇ ಅತೀ ಹೆಚ್ಚು ದೋಷಗಳು ಪತ್ತೆಯಾಗುತ್ತಿವೆ. ಇದರಿಂದ ಏರ್ ಇಂಡಿಯಾ ಇದೀಗ ಸಂಪೂರ್ಣ ಕೇಂದ್ರದ ಕಣ್ಗಾವಲಿನಲ್ಲಿದೆ.
ಕಳೆದ ಜೂನ್ 12 ರಂದು ಅಪಘಾತಕ್ಕೀಡಾದ ಎಐ 171 ಬದಲು ಲಂಡನ್ಗೆ ತೆರಳು ಏರ್ ಇಂಡಿಯಾ 159 ವಿಮಾನದ ಸಿದ್ದವಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ಸಂಚಾರ ರದ್ದುಗೊಳಿಸಲಾಗಿತ್ತು. ಅಂದು ಮಧ್ಯಾಹ್ನ 1.10ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನವನ್ನು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಲಾಗಿತ್ತು. ಜೊತೆಗೆ ದಿಲ್ಲಿಯಿಂದ ಪ್ಯಾರಿಸ್ಗೆ ಹಾರಬೇಕಿದ್ದ ಎಐ 143 ವಿಮಾನವನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿದೆ. ಟೇಕಾಫ್ ಗೂ ಮುನ್ನ ನಡೆದ ತಪಾಸಣೆಯಲ್ಲಿ, ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಡಿಜಿಸಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ರು.
ಅಲ್ಲದೆ ಪ್ಯಾರಿಸ್ನಿಂದ ದೆಹಲಿಗೆ ತಲುಪಬೇಕಿದ್ದ ಎಐ 142 ವಿಮಾನದ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೊದಿಂದ ಕಲ್ಕತ್ತಾ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಎಐ 179 ವಿಮಾನ ಸಂಚಾರಕ್ಕೂ ತಾಂತ್ರಿಕ ಅಡಚಣೆ ಬಂದಿದೆ. ಒಂದು ಎಂಜಿನ್ನಲ್ಲಿ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ಪ್ರಯಾಣ ರದ್ದುಗೊಳಿಸಲಾಗಿದ್ದು, ಬಳಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಿಂದ ಲಂಡನ್ಗೆ ತೆರಳುತ್ತಿದ್ದ, ಏರ್ ಇಂಡಿಯಾ ಎಐ 133 ವಿಮಾನ ಸಂಚಾರ ರದ್ದಾಗಿದೆ. ವಿಮಾನದ ತಾಂತ್ರಿಕ ಪರೀಕ್ಷೆ ಹಾಗೂ ತಪಾಸಣೆ ಉದ್ದೇಶದಿಂದ ವಿಮಾನ ಸಂಚಾರ ಕ್ಯಾನ್ಸಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಂಡನ್ನಿಂದ ಅಮೃತಸರಕ್ಕೆ ಬರುತ್ತಿದ್ದ ಏರ್ ಇಂಡಿಯಾದ ಎಐ 170 ವಿಮಾನದ ಸಂಚಾರವನ್ನು ತಾಂತ್ರಿಕ ಕಾರಣದಿಂದಾಗಿಯೇ ರದ್ದುಗೊಳಿಸಲಾಗಿದೆ.
ಮುಂಬೈನಿಂದ ಅಹಮದಾಬಾದ್ಗೆ ಬರುತ್ತಿದ್ದ ಏರ್ ಇಂಡಿಯಾದ ಎಐ 493 ವಿಮಾನವನ್ನು ಪೈಲಟ್ಗಳ ವಿಳಂಬದಿಂದ ರದ್ದುಪಡಿಸಲಾಗಿದೆ. ಜೂಣ್ 15ರಂದು ತಾಂತ್ರಿಕ ದೋಷದಿಂದ ಮೂರು ಡ್ರೀಮ್ ಲೈನರ್ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು
ಯಾವ್ಯಾವ ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು..?
ಎಐ 915 – ದಿಲ್ಲಿ – ದುಬೈ – ಡ್ರೀಮ್ ಲೈನರ್ ಬಿ 788
ಎಐ 153 – ದಿಲ್ಲಿ – ವಿಯೆನ್ನಾ – ಡ್ರೀಮ್ ಲೈನರ್ ಬಿ 788
ಎಐ 143 – ದಿಲ್ಲಿ – ಪ್ಯಾರಿಸ್ – ಡ್ರೀಮ್ ಲೈನರ್ ಬಿ 788
ಎಐ 159 ಅಹಮದಾಬಾದ್ – ಲಂಡನ್- ಡ್ರೀಮ್ ಲೈನರ್ ಬಿ788
ಎಐ 170 – ಲಂಡನ್ – ಅಮೃತಸರ – ಡ್ರೀಮ್ ಲೈನರ್ ಬಿ788
ಎಐ 170 – ಲಂಡನ್ – ಅಮೃತಸರ – ಡ್ರೀಮ್ ಲೈನರ್
ಎಐ 133 – ಬೆಂಗಳೂರು – ಲಂಡನ್ – ಡ್ರೀಮ್ ಲೈನರ್ ಬಿ 788
ಎಐ 179 ಸ್ಯಾನ್ ಫ್ರಾನ್ಸಿಸ್ಕೋ – ಮುಂಬಯಿ – ಬಿ777
ಇನ್ನು, ಎಐ 915-ದಿಲ್ಲಿ -ದುಬೈ -ಡ್ರೀಮ್ ಲೈನರ್ ಬಿ 788, ಎಐ 153 – ದಿಲ್ಲಿ – ವಿಯೆನ್ನಾ – ಡ್ರೀಮ್ ಲೈನರ್ ಬಿ 788, ಎಐ 143 – ದಿಲ್ಲಿ – ಪ್ಯಾರಿಸ್ – ಡ್ರೀಮ್ ಲೈನರ್ ಬಿ 788, ಎಐ 159 ಅಹಮದಾಬಾದ್ – ಲಂಡನ್- ಡ್ರೀಮ್ ಲೈನರ್ ಬಿ788, ಎಐ 170 – ಲಂಡನ್ – ಅಮೃತಸರ – ಡ್ರೀಮ್ ಲೈನರ್ ಬಿ788, ಎಐ 170 – ಲಂಡನ್ – ಅಮೃತಸರ -ಡ್ರೀಮ್ ಲೈನರ್, ಎಐ 133 – ಬೆಂಗಳೂರು – ಲಂಡನ್ – ಡ್ರೀಮ್ ಲೈನರ್ ಬಿ 788, ಎಐ 179 ಸ್ಯಾನ್ ಫ್ರಾನ್ಸಿಸ್ಕೊ – ಮುಂಬಯಿ- ಬಿ 777 ಈ ಎಲ್ಲಾ ವಿಮಾನಗಳು ರದ್ದುಗೊಂಡಿವೆ.
ಅಲ್ಲದೆ ಗೋವಾದ ಪಣಜಿಯಿಂದ ಉತ್ತರ ಪ್ರದೇಶದ ಲಖನೌಗೆ ಬಂದಿದ್ದ ಇಂಡಿಗೋ ವಿಮಾನವು ಹವಾಮಾನ ವೈಪರಿತ್ಯಕ್ಕೆ ಸಿಲುಕಿ, ಕೆಲಕಾಲ ಆಗಸದಲ್ಲೇ ಗಿರಕಿ ಹೊಡೆದ ಅಪಾಯಕಾರಿ ಪ್ರಸಂಗ ಜೂನ್ 16ರಂದು ಸಂಭವಿಸಿತ್ತು. ತಮ್ಮ ಅನುಭವ ಬಳಸಿಕೊಂಡು ನುರಿತ ಪೈಲಟ್ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿ ವಿಮಾನವನ್ನು ಲಖನೌ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಲ್ಲಿ ಸಕ್ಸಸ್ ಆಗಿದ್ದರು. ಇನ್ನೊಂದು ಘಟನೆಯಲ್ಲಿ ಮಸ್ಕತ್ ನಿಂದ ಕೊಚ್ಚಿ ಮಾರ್ಗವಾಗಿ ದಿಲ್ಲಿಗೆ ಬರುತ್ತಿದ್ದ ಇಂಡಿಗೋದ ಮತ್ತೊಂದು ವಿಮಾನ ಬಾಂಬ್ ಬೆದರಿಕೆಯಿಂದ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 157 ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ವಿಮಾನಕ್ಕೆ ಬಾಂಬ್ ಇಡಲಾಗಿದೆ ಎಂದು ಇಮೇಲ್ ಮೂಲಕ ಬೆದರಿಕೆ ಒಡ್ಡಲಾಗಿತ್ತು.
ಒಟ್ನಲ್ಲಿ, ಪ್ರಖ್ಯಾತ ಕೈಗಾರಿಕೋದ್ಯಮಿ ಆರ್ ಜೆಡಿ ಟಾಟಾರಿಂದ ಶುರುವಾಗಿದ್ದ ಏರ್ ಇಂಡಿಯಾ ಸಂಸ್ಥೆ, ಭಾರತೀಯರ ಹೆಮ್ಮೆಯ ಪ್ರತೀಕವಾಗಿತ್ತು. ಆದ್ರೀಗ ಅದರ ನಿರ್ವಹಣಾ ಕೊರತೆಯಿಂದ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಏರ್ ಇಂಡಿಯಾ ವಿಮಾನ ಅಂದ್ರೆ ಗಢಗಢ ನಡುವಂತೆ ಆಗಿದೆ.