Thursday, July 31, 2025

Latest Posts

ಕೊಬ್ಬರಿಗೆ ಬಂತು ಬಂಗಾರದ ಬೆಲೆ – ತಿಪಟೂರಲ್ಲಿ ಸಾರ್ವಕಾಲಿಕ ದಾಖಲೆ!

- Advertisement -

 

ಕಲ್ಪತರು ನಾಡು ತುಮಕೂರು ರೈತರಿಗೆ ಇದು ಬಂಗಾರದ ಸುದ್ದಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಬ್ಬರಿಗೂ ಚಿನ್ನದಂಥ ಬೆಲೆ ಸಿಕ್ಕಿದೆ. ಕೊಬ್ಬರಿ ಬೆಲೆ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ, ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಕ್ವಿಂಟಾಲ್ ಕೊಬ್ಬರಿಗೆ 26,167 ರೂಪಾಯಿನಷ್ಟು ಬೆಲೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸದ್ಯ ಎಳನೀರಿಗೆ ಭಾರೀ ಬೇಡಿಕೆ ಇದೆ. ಕೇರಳ, ತಮಿಳುನಾಡಿನಲ್ಲೂ ತೆಂಗು ಇಳುವರಿ ಕುಸಿದು, ಕರ್ನಾಟಕದಿಂದ ಹೆಚ್ಚಾಗಿ ರಫ್ತು ಮಾಡಲಾಗ್ತಿದೆ. ಹೀಗಾಗಿ ಕೊಬ್ಬರಿಗೆ ಬೆಲೆ ಏರಿಕೆಯಾಗಿದೆ.
ಜುಲೈ, ಆಷಾಢ ಮಾಸದ ಬಳಿಕ ಶುಭ ಸಮಾರಂಭ, ಹಬ್ಬಗಳೇ ಹೆಚ್ಚಾಗಿದೆ. ಉತ್ತರ ಭಾರತದಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಶ್ರಾವಣ ಮಾಸದಲ್ಲಿ ಕ್ವಿಂಟಾಲ್ ಕೊಬ್ಬರಿ 30 ಸಾವಿರ ದಾಟುವ ನಿರೀಕ್ಷೆ ಇದೆ.

ಕಳೆದ ವರ್ಷ ಕೊಬ್ಬರಿ ಬೆಲೆ ಕುಸಿದಿದ್ದಕ್ಕೆ ಕಂಗಾಲಾಗಿದ್ದ ರೈತರು, ಬೆಂಬಲ ಬೆಲೆಗಾಗಿ ಬೃಹತ್ ಹೋರಾಟವನ್ನೇ ಮಾಡಿದ್ರು. ಕೊನೆಗೆ ಕೇಂದ್ರ ಸರ್ಕಾರ 12,000, ರಾಜ್ಯ ಸರ್ಕಾರ 1,500 ರೂ. ಹಾಕಿ, ರೈತರಿಗೆ 13,500 ದೊರೆತಿದ್ದೇ ಹೆಚ್ಚು ಬೆಲೆಯಾಗಿತ್ತು.

ಈ ವರ್ಷದಿಂದ ಎಪಿಎಂಸಿ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ. ಪರಿಣಾಮ ರೈತನ ಕೊಬ್ಬರಿಗೆ ಉತ್ತಮ ಬೆಲೆ ದೊರೆಯಲು ಪ್ರಾರಂಭವಾಗಿದೆ. 1 ತಿಂಗಳಿಂದ ನಿರಂತರವಾಗಿ ಕೊಬ್ಬರಿ ಬೆಲೆ ಏರುತ್ತಲೇ ಇದೆ.

2025ರ ಮೇಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ 18 ಸಾವಿರ ರೂಪಾಯಿ ಇತ್ತು. ಜೂನ್ 23ರ ವೇಳೆಗೆ 26,211ಕ್ಕೆ ಏರಿತ್ತು. ಕೇವಲ 50 ದಿನಗಳ ಅಂತರದಲ್ಲಿ 8,167 ರೂ. ಏರಿಕೆ ಕಂಡಿದೆ. ಕೊಬ್ಬರಿ ಬೆಲೆ ಏರಿಕೆಯಿಂದ, ಕೆಲವೇ ದಿನಗಳಲ್ಲಿ ಕೊಬ್ಬರಿ ಆಧಾರಿತ ಉತ್ಪನ್ನಗಳ ಬೆಲೆ ಏರಿಕೆಯಾದ್ರೂ ಆಶ್ಚರ್ಯವಿಲ್ಲ. ಕೊಬ್ಬರಿ ಬೆಲೆ ಏರಿಕೆಯಿಂದ ಕಲ್ಪತರು ಜಿಲ್ಲೆಯ ರೈತರಿಗೆ ಭರಪೂರ ಆದಾಯ ಬರುವ ನಿರೀಕ್ಷೆ ಇದೆ.

- Advertisement -

Latest Posts

Don't Miss