Chikkodi News: ಬೆಳಗಾವಿಯ ಚಿಕ್ಕೋಡಿಯಲ್ಲಿ ಪೋಲೀಸರು ಮನಬಂದಂತೆ ತಾಯಿ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮೂಲಕ ಅಂಕಲಿ ಪೋಲೀಸರು ಮೇಲಾಧಿಕಾರಿಗಳ ಆದೇಶ ಗಾಳಿಗೆ ತೂರಿದ್ರಾ ಅನ್ನೋ ಅನುಮಾನ ಹೆಚ್ಚಾಗಿದೆ.
ಮಹಾರಾಷ್ಟ್ರ ಸಾಂಗ್ಲಿಯಿಂದ ಚಿಕ್ಕೋಡಿಗೆ ಬೈಕ್ ಮೇಲೆ ಬರುತ್ತಿದ್ದ ತಾಯಿ ಮಗನನ್ನು ರಸ್ತೆಯಲ್ಲೇ ಅಡ್ಡಗಟ್ಟಿ, ಪೋಲೀಸರು ಹಲ್ಲೆ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಲಾಗಿದೆ. ಹೃಷಿಕೇಶ್ ಲಿಂಬಿಗಿಡದ ಹಾಗೂ ತಾಯಿ ಸುಶೀಲಾ ಎಂಬುವವರು ಹೆಲ್ಮೆಟ್ ಹಾಕದೇ, ಬರುತ್ತಿದ್ದ ಕಾರಣಕ್ಕೆ ಪೋಲೀಸರು ತಡೆದಿದ್ದಾರೆ. ಸರಿಯಾಗಿ ವಿಚಾರಣೆ ಮಾಡುವುದು ಬಿಟ್ಟು ಮನಸ್ಸಿಗೆ ಬಂದ ಹಾಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಮಗನ ಮೇಲಿನ ಹಲ್ಲೆ ತಪ್ಪಿಸಲು ಬಂದಿದ್ದ ತಾಯಿಯನ್ನು ಮಹಿಳೆ ಅಂತಲೂ ನೋಡದೇ, ಪೋಲೀಸರು ಬೂಟು ಕಾಲಿನಲ್ಲಿ ತುಳಿದಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೇ, ಮೈ ಮೇಲಿನ ಉಡುಪನ್ನು ಹರಿದಿದ್ದಾರೆನ್ನಲಾಗಿದೆ. ಹೈ ಬಿಪಿಯಾಗಿ ಯುವಕ ರಸ್ತೆಯಲ್ಲಿ ಬಿದ್ದಾಗ, ಹೆದರಿ ಅವನನ್ನು ಪೋಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ, ಹೊಸ ಟಿ ಶರ್ಟ್ ಕ“ಡಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಷಯ ತಿಳಿದು ಯುವಕನ ತಂದೆ ಕೂಡ ಆಸ್ಪತ್ರೆಗೆ ಬಂದಿದ್ದು, ಅಂಕಲಿ ಪೋಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.