Wednesday, July 30, 2025

Latest Posts

ನಿರಪರಾಧಿಗೆ 2 ವರ್ಷ ಜೈಲು ಶಿಕ್ಷೆ ಕೊಡಿಸಿದ 3 ಪೊಲೀಸ್‌ ಅಧಿಕಾರಿಗಳು ಅಮಾನತು

- Advertisement -

2020ರ ನವಂಬರ್‌ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ಸುರೇಶ್ ಎಂಬುವರು ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್ ಎಂಬಾತನೇ ಕಾರಣ ಎಂದು ತಿಳಿಸಿದ್ದರೂ, ಆದರೆ ಬೆಟ್ಟದಪುರದ ಪೊಲೀಸರು ಸುರೇಶ್ ಅವರನ್ನೇ ಆರೋಪಿಯಾಗಿಸಿ, ಬಂಧಿಸಿದ್ದರು. ಸುರೇಶ್ ಎರಡು ವರ್ಷ ಜೈಲಿನಲ್ಲಿದ್ದು ವಿಚಾರಣೆ ಎದುರಿಸುವಾಗಲೇ, ಮಲ್ಲಿಗೆ ಪ್ರಿಯಕರನೊಂದಿಗೆ ಪತ್ತೆ ಆಗಿದ್ದರು.

ಜೇನುಕುರುಬ ಆದಿವಾಸಿ ಸಮುದಾಯದ ಕುಟುಂಬವಾದ್ದರಿಂದ ಮುಂದೆ ನಮಗೇನು ಸಮಸ್ಯೆ ಆಗುವುದಿಲ್ಲ ಎಂದು ಭಾವಿಸಿದ್ದ ಪೊಲೀಸ್ ಅಧಿಕಾರಿಗಳು, ಪ್ರಕರಣದುದ್ದಕ್ಕೂ ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಸುರೇಶ್ ಅವರನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಿತ್ತು. ಸುರೇಶ್ ಮೇಲಿನ ಸುಳ್ಳು ಆರೋಪ ಪ್ರಕರಣದ ತನಿಖೆಯ ಹಂತದಲ್ಲಿದ್ದಾಗ, ಬಿ.ಜಿ.ಪ್ರಕಾಶ್ ಬೈಲುಕುಪ್ಪೆಯ ಸರ್ಕಲ್ ಇನ್‌ಸ್ಪೆಕ್ಟರ್, ಮಹೇಶ್ ಕುಮಾರ್ ಹಾಗೂ ಪ್ರಕಾಶ್ ಎತ್ತಿನಮನಿ ಬೆಟ್ಟದಪುರ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟ‌ರ್ ಆಗಿದ್ದರು.

ಇದಾದ ನಂತರ ಈ ಪ್ರಕರಣವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರೇಶ್ ಅವರು ಎರಡು ವರ್ಷ ಜೈಲು ವಾಸ ಅನುಭವಿಸುವಂತೆ ಮಾಡಿದ್ದ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದರು.

ಇದೀಗ ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ. ಪ್ರಕಾಶ್, ಮೈಸೂರಿನ ಇಲವಾಲ ಠಾಣೆಯ ಸಬ್ ಇನ್‌ಸ್ಪೆಕ್ಟ‌ರ್ ಮಹೇಶ್‌ಕುಮಾರ್ ಹಾಗೂ ಜಯಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಎತ್ತಿನಮನಿ ಅವರನ್ನು ಅಮಾನತುಗೊಳಿಸಿ ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

 

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss