21ನೇ ಶತಮಾನದಲ್ಲೂ ಕಾಲ ಎಷ್ಟೇ ಬದಲಾದರೂ ನಮ್ಮ ಜನ ಮಾತ್ರ ಈ ದೆವ್ವ ಭೂತ ಕಥೆಗಳನ್ನು ನಂಬುವುದು ಬಿಡುವುದಿಲ್ಲ. ವಾಮಾಚಾರ ಮಾಟ-ಮಂತ್ರ ಮಾಡುವುದನ್ನು ನಿಲ್ಲಿಸಿಲ್ಲ. ದೆವ್ವ ಮೈಮೇಲೆ ಬಂದಿದೆ ಎಂದು ಮನಬಂದಂತೆ ಚಾವಟಿ ಅಥವಾ ಬೆತ್ತದಲ್ಲಿ ಸಾಯುವವೆರಗೂ ಒಡೆಯುವುದು. ದೇವಸ್ಥಾನ ಅಥವಾ ಮಸೀದಿಗಳಲ್ಲಿ ಬಿಡುವುದು ಹೀಗೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ.
ಈ ರೀತಿ ದೆವ್ವ ಬಿಡಿಸುವುದಾಗಿ ಹೇಳಿ ಸಾವನ್ನಪ್ಪಿರುವ ಘಟನೆಗಳು ನಡೆದಿದೆ. ನಿನ್ನೆ ಅಷ್ಟೇ ಈ ಒಂದು ಪ್ರಕರಣ ಶಿವಮೊಗ್ಗದ ಜಂಬರಗಟ್ಟೆಯಲ್ಲಿ ನಡೆದಿದೆ. ಈ ಕಥೆ ಹೇಳುವ ಮುಂಚೆ ಈವರೆಗೂ ಈ ರೀತಿ ನಡೆದಿರುವ ಅಮಾನವೀಯ ಕೃತ್ಯಗಳ ಬಗ್ಗೆ ಒಂದೊಂದಾಗೆ ಹೇಳುತ್ತಾ ಹೋಗ್ತೀನಿ ನೋಡಿ.
2018ರಲ್ಲಿ ಬೆಂಗಳೂರಿನ ಮಲ್ಲೇಶಪಾಳ್ಯದಲ್ಲಿ ಹದಿಮೂರು ವರ್ಷದ ಮಗಳು ಯಾವಾಗಲೂ ಟಿವಿ ನೋಡುತ್ತಾಳೆ. ಮೊಬೈಲ್‌ನಲ್ಲಿ ಗೇಮ್ ಆಡಿಕೊಂಡು ಇರುತ್ತಿದ್ದಳು. ಹೀಗಾಗಿ ಆಕೆಗೆ ದೆವ್ವ ಹಿಡಿದಿರಬೇಕೆಂದು ನಂಬಿದ ತಾಯಿ ಗಾಯತ್ರಿ ಸ್ನೇಹಿತೆ ಪ್ರಮಿಳಾ ಬಳಿ ಹೇಳಿದ್ದಳು. ಆಕೆ, ತಾನು ಓಂ ಶಕ್ತಿ ಫೋಟೋ ಇಟ್ಟುಕೊಂಡು ಭೂತ ಬಿಡಿಸುತ್ತೇನೆ ಎಂದು ಇಬ್ಬರು ಸೇರಿ ಆ ಪುಟ್ಟ ಮಗಳಿಗೆ ಕಬ್ಬಿಣದ ಚೈನ್, ಕಟ್ಟಿಗೆ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
2019ರಲ್ಲಿ ಮೈಸೂರಿನ ಹುಣಸೂರು ತಾಲ್ಲೂಕಿನ ಅಸ್ವಾಳ್ ಗ್ರಾಮದವರಾದ ಪರಿಮಳಾ ಮತ್ತು ತಂದೆ ಶಶಿಕುಮಾರ್ ಎಂಬ ದಂಪತಿ ತಮ್ಮ 2 ವರ್ಷದ ಮಗು ಕುಶಾಲ್ ಮೂರ್ಛೆರೋಗದಿಂದ ಬಳಲುತ್ತಿತ್ತು. ಮೂರು ವರ್ಷದ ಹಿಂದೆ ಮೃತಪಟ್ಟ ತನ್ನ ತಾಯಿಯ ಆತ್ಮವೇ ಇದಕ್ಕೆ ಕಾರಣ ಎಂದು ಭಾವಿಸಿ ದೆವ್ವ ಬಿಡಿಸಲು ತೆಂಗಿನ ಹೊಂಬಾಳೆಯಿಂದ ಹೊಡೆದಿದ್ದಾರೆ ನೋವು ತಾಳಾಲಾರದೆ ಆ ಮಗು ಪ್ರಾಣ ಬಿಟ್ಟಿತ್ತು.
2020 ರಲ್ಲಿ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮದಲ್ಲಿ ಪ್ರವೀಣ್ ಹಾಗೂ ಬೇಬಿ ಎಂಬ ದಂಪತಿಗಳು ತಮ್ಮ ಮಗಳು 2 ವರ್ಷದ ಪೂರ್ಣಿಕಾ ನಿದ್ದೆಯಲ್ಲಿ ಬೆಚ್ಚಿ ಬೀಳುತ್ತಿದ್ದಳು. ಈ ಕಾಯಿಲೆಯ ಬಗ್ಗೆ ಆಸ್ಪತ್ರೆಗೆ ತೋರಿಸಿದ್ದರೂ ಪ್ರಯೋಜನವಾಗಿರಲ್ಲ ಕೊನೆಗೆ ಮೌಢ್ಯದ ಮೊರೆ ಹೋಗಿ ರಾಕೇಶ್ ಎಂಬ ಮಾಂತ್ರಿಕನ ಬಳಿ ಹೋಗಿದ್ದಾರೆ. ಮಗುವನ್ನು ನೋಡಿದ ರಾಕೇಶ್ ಇದು ದೆವ್ವದ ಕಾಟ. ಪೂಜೆ ಮಾಡಬೇಕೆಂದು ಪೂರ್ಣಿಕಾನನ್ನು ಕರೆಸಿಕೊಂಡು ಗ್ರಾಮದ ಹೊರ ವಲಯದಲ್ಲಿ ಪೂಜೆ ಮಾಡುತ್ತಾ ಗಿಡವೊಂದರ ಕಡ್ಡಿಯಿಂದ ಮಗುವಿಗೆ ಮನ ಬಂದಂತೆ ಬಾರಿಸಿದ್ದಾನೆ. ಮೈ ತುಂಬಾ ಬಾಸುಂಡೆ ಬಿದ್ದ ಪರಿಣಾಮ ನೋವು ಹೆಚ್ಚಾಗಿ ಆ ಪುಟ್ಟ ೨ ವರ್ಷದ ಬಾಲಕಿ ಸಾವನ್ನಪ್ಪಿದ್ದಳು.
2024ರಲ್ಲಿ ಮೈಸೂರಿನಲ್ಲಿ 21 ವರ್ಷದ ವೃಷಭೇಂದ್ರ ಎಂಬ ಯುವಕ ತನ್ನ ಮೈಮೇಲೆ ಕಳೆದ ನಾಲ್ಕೈದು ವರ್ಷದಿಂದ ದೆವ್ವ ಬರುತ್ತಿದೆ ಎಂದು ನಂಬಿ ಕಿರುಕುಳ ಅನುಭವಿಸುತ್ತಿದ್ದ. ಬಗ್ಗೆ ಹೆತ್ತವರು ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದರು. ಹೀಗಿದ್ದೂ ಮಾನಸಿಕವಾಗಿ ವೃಷಭೇಂದ್ರ ಹೊರಬಂದಿರಲಿಲ್ಲ. ಇದರಿಂದ ಬೇಸತ್ತು ನೇಣಿಗೆ ಶರಾಣಾಗಿದ್ದ.
ಇನ್ನು ಜೂನ್ 7 ಅಂದರೆ ನೆನ್ನೆ ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದ ೫೫ ವರ್ಷದ ಗೀತಮ್ಮ ಎಂಬ ಮಹಿಳೆ. ಕಳೆದ 15 ದಿನಗಳಿಂದ ಅಸ್ವಸ್ಥರಾಗಿದ್ದರು ಆಗ ಅವಳ ಮಗ ಸಂಜಯ್, ಆ ಪ್ರದೇಶದಲ್ಲಿ ಭೂತ ಬಿಡಿಸುವ ಕೆಲಸ ಮಾಡುತ್ತಾಳೆಂದು ಹೆಸರುವಾಸಿಯಾಗಿದ್ದ ಆಶಾ ಎಂಬ ಮಹಿಳೆಯ ಬಳಿಗೆ ಕರೆದೊಯ್ದಿದ್ದಾರೆ. ಗೀತಮ್ಮಗೆ ದೆವ್ವ ಹಿಡಿದಿದೆ ಎಂದು ಆಶಾ ಹೇಳಿಕೊಂಡಿದ್ದು, ಆರೋಪಿ ಮೃತ ಗೀತಮ್ಮಳನ್ನು ಭಾನುವಾರ ರಾತ್ರಿ 9.30ರಿಂದ ಸೋಮವಾರ ಬೆಳಗಿನ ಜಾವ 1.30 ರವರೆಗೂ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ದೆವ್ವ ಬಿಟ್ಟಿಲ್ಲ ಎಂದು ಹೊಡೆದುಕೊಂಡು ಬಂದಿದ್ದಾಳೆ.
ತಲೆ ಮೇಲೆ ಕಲ್ಲು ಹೊರಿಸಿ ಮರವೊಂದರ ಕೆಳಗೆ ಪೂಜೆ ಮಾಡಿದ ಕೆಲ ಹೊತ್ತಲ್ಲೆ ಗೀತಮ್ಮಳ ಕೂಗಾಡಲು ಶುರು ಮಾಡಿದ್ದಾರೆ. ಬಳಿಕ ಕಾಲುವೆಯಲ್ಲಿದ್ದ ತಣ್ಣೀರೆರಚಿದ್ದಾರೆ. ಈ ವೇಳೆ ಗೀತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ದೆವ್ವ ಬಿಟ್ಟಿದೆ. ಮನೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದ್ದಾಳೆ.ಮನೆಗೆ ಹೋದ ಬಳಿಕವೂ ಗೀತಮ್ಮ ಅವರಿಗೆ ಪ್ರಜ್ಞೆ ಬಂದಿಲ್ಲ. ನಂತರ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ರೀತಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ ದೆವ್ವದ ಹೆಸರಲ್ಲಿ ಪ್ರಾಣಗಳು ಹೋಗುತ್ತಲೇ ಇವೆ. ಈಗಾಲಾದರೂ ಜನ ಹೆಚ್ಚುಕೊಳ್ಳ ಬೇಕಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ