ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಯ ಯೋಧ ಪ್ರಶಸ್ತಿ ನೀಡಿದ್ದಾರೆ. ಈ ಮೂಲಕ ಚಮಚಾಗಿರಿ ಮಾಡುತ್ತಿದ್ದಾರೆ ಎಂದು MLC ಎಚ್.ವಿಶ್ವನಾಥ್ ಟೀಕಿಸಿದ್ದಾರೆ. ತಮ್ಮನ್ನು ತಾವೇ ಹಿಂದುಳಿದವರ ಚಾಂಪಿಯನ್ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಅಹಿಂದ ಕಟ್ಟಿದ್ದು ಸಿ.ಎಸ್. ದ್ವಾರಕನಾಥ್ ಮತ್ತು ಆರ್.ಎಲ್. ಜಾಲಪ್ಪ. ಆದರೆ ಕೋಲಾರದಲ್ಲಿ ರಾತ್ರೋರಾತ್ರಿ ಜಾಲಪ್ಪ ಅವರ ಫೋಟೋ ತೆಗೆದು ಹಾಕಿ ತಮ್ಮ ಫೋಟೋ ಹಾಕಿದ್ದು ಯಾರು? ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಹಿಂದುಳಿದವರಲ್ಲಿ ಕುರುಬ, ಕುಂಬಾರ, ಉಪ್ಪಾರ ಮೊದಲಾದ ಐದಾರು ಜಾತಿ ಹೆಸರು ಬಿಟ್ಟು ಬೇರೆ ಜಾತಿ ಹೆಸರು ಹೇಳಲೂ ಬರುವುದಿಲ್ಲ. ಅವರಿಗೆ ಕೆಳಗಿರುವ ಜಾತಿಗಳ ಸಂಪರ್ಕವೇ ಇಲ್ಲ. ನೀವು ಹಿಂದುಳಿದ ನಾಯಕರಾಗಿದ್ದರೆ ನಾಲ್ಕು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿರುವುದು ಯಾರಿಗೆ? ಎಂದು ಪ್ರಶ್ನಿಸಿದರು.
ಸಾಧನಾ ಸಮಾವೇಶದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ. ನಿಮ್ಮ ಅವಧಿಯಲ್ಲಿ ಎರಡೂವರೆ ಸಾವಿರ ಸರ್ಕಾರಿ ಶಾಲೆಗೆ ಬೀಗ ಹಾಕಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಸುಮಾರು 1 ಲಕ್ಷ ಮಂದಿ ಸ್ಥಳೀಯ ಪ್ರತಿನಿಧಿಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಇದು ಯಾವ ಸುಭಿಕ್ಷ ರಾಜ್ಯ? ಎಂದು ವಿಶ್ವನಾಥ್ ಸಿಡಿದಿದ್ದಾರೆ. ಹಾಗೂ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ನಿಧನರಾದಾಗ ಸಿದ್ದರಾಮಯ್ಯ, ಸಚಿವ ಡಾ. ಎಚ್.ಸಿ.ಮಹದೇವಪ್ಪ ಅಂತ್ಯಕ್ರಿಯೆಗೆ ಏಕೆ ಬರಲಿಲ್ಲ? ಇದು ಕೆಬಿಜಿ ಅವರ ಪತ್ರಿಕಾ ಸೇವೆಗೆ ಮಾಡಿದ ಅಪಮಾನ ಎಂದು ಖಂಡಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ