Hubli: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿರ್ಧಾರಗಳು ಕೇವಲ ಪೇಪರ್ ಹಾಗೂ ಪ್ರಚಾರಕ್ಕೆ ಸೀಮಿತವಾದಂತಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅದೆಷ್ಟೋ ಕ್ರಮಗಳನ್ನು ಕೈಗೊಂಡರೂ ಕೂಡ ಅವಳಿನಗರದ ಜನರಿಗೆ ಮಾತ್ರ ಬೀದಿ ನಾಯಿಗಳಿಂದ ಮುಕ್ತಿ ಸಿಗುತ್ತಿಲ್ಲ. ಹುಬ್ಬಳ್ಳಿಯ ಬಹುತೇಕ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಮಾತ್ರವಲ್ಲದೇ ಹಗಲು ಹೊತ್ತಿನಲ್ಲಿಯೂ ಬೀದಿ ನಾಯಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ ಪಾಲಿಕೆ ಮಾತ್ರ ಡಾಗ್ ಕ್ಯಾಚರ್ಸ್ ಸಿಗುತ್ತಿಲ್ಲ ಎಂದು ಸಬೂಬು ಹೇಳುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಡಾಗ್ ಕ್ಯಾಚರ್ಸ್ ನಿಯೋಜನೆಗೆ ಅರ್ಜಿ ಕೂಡ ಕರೆದಿತ್ತು. ಆದರೆ ಈಗ ಯಾರು ಕೂಡ ಈ ಬಗ್ಗೆ ಆಸಕ್ತಿ ತೋರದೇ ಇರುವುದರಿಂದ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಅವಳಿನಗರದ ಜನಸಂಖ್ಯೆಗೆ ಅನುಗುಣವಾಗಿ 2% ಬೀದಿ ನಾಯಿಗಳಿವೆ ಅಂದರೇ 30,000 ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಹೀಗಿದ್ದರೂ ಬೀದಿ ನಾಯಿಗಳ ನಿಯಂತ್ರಣದಲ್ಲಿ ಪಾಲಿಕೆ ವಿಫಲವಾಗಿದೆ. ಡಾಗ್ ಕ್ಯಾಚರ್ಸ್ ಸಮಸ್ಯೆಯಿಂದ ಪಾಲಿಕೆ ಬೀದಿ ನಾಯಿಗಳ ನಿಯಂತ್ರಣ ಕೈ ಬಿಟ್ಟಂತೆಯೇ ಕಾಣುತ್ತಿದೆ.
ಇನ್ನೂ ಎಲ್ಲೆಂದರಲ್ಲಿ ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡುವ ಬೀದಿ ನಾಯಿಗಳ ಸಮಸ್ಯೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದ್ದು, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾವನೆಯನ್ನು ಆರೋಗ್ಯ ಸ್ಥಾಯಿ ಸಮಿತಿಯು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದು, ಸದಸ್ಯರಿಂದ ಅನುಮೋದನೆ ಪಡೆಯಲಾಗಿದೆ. ಆದರೆ ಈಗ ಮಾತ್ರ ಡಾಗ್ ಕ್ಯಾಚರ್ಸ್ ಲಭ್ಯವಿರದೇ ಇರುವ ಕಾರಣ ಇದುವರೆಗೂ ಬೀದಿ ನಾಯಿಗಳ ಹಾವಳಿ ಮಾತ್ರ ತಗ್ಗಿಲ್ಲ. ಈಗ ಅಸ್ಸಾಂ ಮೂಲದ ಡಾಗ್ ಕ್ಯಾಚರ್ಸ್ ಕರೆಸುವುದಾಗಿ ಅಧಿಕಾರಿಗಳು ಹೇಳ್ತಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಮುಖ್ಯ ರಸ್ತೆಗಳು ಮತ್ತು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮೊನ್ನೆಯಷ್ಟೇ ನಡೆದ ಅಪಘಾತದಿಂದ ಪಾಲಿಕೆ ಇದುವರೆಗೂ ಪಾಠ ಕಲಿಯದೇ ಇರುವುದು ದುರಂತವೇ ಸರಿ. ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮಾಡಬೇಕಿದೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ