Sunday, July 20, 2025

Latest Posts

ಸಹೋದರರಿಗೆ ಸವಾಲ್!‌ : ಜಾರಕಿಹೊಳಿ ಬ್ರದರ್ಸ್‌ಗೆ ಲಿಂಗಾಯತ ನಾಯಕರ ಸೆಡ್ಡು ; ಏನಿದು ಡಿಸಿಸಿ ಬ್ಯಾಂಕ್ ಎಲೆಕ್ಷನ್ ರಣತಂತ್ರ..?

- Advertisement -

ಬೆಳಗಾವಿ : ರಾಜ್ಯದಲ್ಲಿ  ಜಿಲ್ಲೆಯ ರಾಜಕಾರಣ ಹಲವು ವರ್ಷಗಳಿಂದಲೂ ತನ್ನ ನಿರ್ಣಾಯಕ ಪಾತ್ರವನ್ನು ವಹಿಸುತ್ತ ಬಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅದರಲ್ಲಿ ಬೆಳಗಾವಿಯ ನಾಯಕರ ಪಾಲು ಇದ್ದೇ ಇರುತ್ತದೆ. ಅಷ್ಟೊಂದು ಪ್ರಭಾವ ಶಾಲಿಯಾಗಿ ಇಲ್ಲಿನ ಕುಟುಂಬ ರಾಜಕೀಯ ಗುರುತಿಸಿಕೊಂಡಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಯಾವುದೇ ಸರ್ಕಾರ ಬಂದರೂ ಅದರಲ್ಲಿ ಜಿಲ್ಲೆಯ ಬಲಿಷ್ಠ ಜಾರಕಿಹೊಳಿ ಸಹೋದರರು ಪ್ರಬಲವಾಗಿದ್ದಾರೆ. ಈ ಕುಟುಂಬಕ್ಕೆ ಸವಾಲು ಒಡ್ಡುವುದು ಸುಲಭದ ಮಾತಲ್ಲ ಎನ್ನುವುದು ಸದ್ಯದ ರಾಜಕೀಯ ವಲಯದಲ್ಲಿನ ಮಾತಾಗಿದೆ. ಆದರೆ ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಸಹೋದರರು ಇದೀಗ ಜಿಲ್ಲೆಯಲ್ಲಿ ಪ್ರತಿಷ್ಠಿತ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌‌, ಡಿಸಿಸಿ ಬ್ಯಾಂಕ್ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ.

ಈಗಾಗಲೇ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಹೊಂದಿರುವ ಇವರಿಗೆ ಡಿಸಿಸಿ ಬ್ಯಾಂಕ್‌ ಚುನಾವಣೆ ಎದುರಿಸುವುದು ದೊಡ್ಡ ತಲೆನೋವಾಗಿದೆ. ಜಾರಕಿಹೊಳಿ ಬ್ರದರ್ಸ್‌ ಪ್ರಾಬಲ್ಯಕ್ಕೆ ಸೆಡ್ಡು ನೀಡಲು ಜಿಲ್ಲೆಯ ಲಿಂಗಾಯತ ನಾಯಕರು ಪಕ್ಷಾತೀತವಾಗಿ ಒಂದಾಗಿದ್ದಾರೆ. ಈ ಮಹತ್ವದ ಬೆಳವಣಿಗೆಯಿಂದ ಡಿಸಿಸಿ ಬ್ಯಾಂಕ್‌ ಚುನಾವಣೆ ಹೊಸ ತಿರುವು ಪಡೆದುಕೊಂಡಿದೆ. ಪ್ರಬಲ ಕುಟುಂಬವನ್ನು ಮಣಿಸಲು ಲಿಂಗಾಯತ ನಾಯಕರು ಪ್ರತ್ಯೇಕ ಸಭೆಯನ್ನು ರಹಸ್ಯವಾಗಿ ನಡೆಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಈ ಬಾರಿಯಾದರೂ ಎಲ್ಲರೂ ಒಂದಾಗಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಬ್ರದರ್ಸ್‌ ಪ್ರಾಬಲ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಮೂರು ಪಕ್ಷಗಳಲ್ಲಿನ ಲಿಂಗಾಯತ ನಾಯಕರು ಒಗ್ಗಟ್ಟಾಗಿದ್ದಾರೆ. ಈ ಮೂಲಕ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಬ್ಯಾಂಕ್‌ನಲ್ಲಿ ಲಿಂಗಾಯತ ಸಮುದಾಯದ ಹಿಡಿತ ಸ್ಥಾಪಿಸುವ ಇರಾದೆಯಲ್ಲಿ ನಾಯಕರಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಇಷ್ಟು ದಿನಗಳ ಕಾಲ ಜಾರಕಿಹೊಳಿ ಸಹೋದರರ ಜೊತೆಯಲ್ಲಿದ್ದ ಕೆಲ ನಾಯಕರೂ ಕೂಡ ಸಮುದಾಯದ ಜಪ ಮಾಡುತ್ತಿದ್ದಾರೆ. ಅವರೂ ಸಹ ಲಿಂಗಾಯತ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದಾರೆ ಈ ಮೂಲಕ ರಾಜಕೀಯಕ್ಕೆ ಭಾರೀ ಟ್ವಿಸ್ಟ್‌ ನೀಡಿದ್ದಾರೆ.

ಒಂದೆಡೆ ಜಾರಕಿಹೊಳಿ ಸಹೋದರರು ಈಗಿನಿಂದಲೇ ತಮ್ಮ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಿಳಿದರೆ, ಇನ್ನೊಂದೆಡೆ ಈ ಲಿಂಗಾಯತ ನಾಯಕರು ಚುನಾವಣೆಯಲ್ಲಿ ಗೆಲುವಿನ ರಣತಂತ್ರ ರೂಪಿಸಿದ್ದಾರೆ. ಒಗ್ಗಟ್ಟಿನ ಮಂತ್ರದ ಮೂಲಕ ಬ್ರದರ್ಸ್‌ ಶಕ್ತಿಯನ್ನು ತಗ್ಗಿಸಲು ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜಕಾರಣದ ಆಳ – ಅಗಲ ಅರಿತಿರುವ ಸಹೋದರರಿಗೆ ಚುನಾವಣೆಗಳು ಹೊಸದಾಗಿರದಿದ್ದರೂ, ಸಹ ನಡೆಯುತ್ತಿರುವ ಬೆಳವಣಿಗೆಗಳು ಮಾತ್ರ ಸಾಕಷ್ಟು ಕುತೂಹಲ ಮೂಡಿಸಿವೆ. ಈ ಹಿಂದೆ ಇದೇ ಬೆಳಗಾವಿಯ ಒಂದು ಬ್ಯಾಂಕಿನ ರಾಜಕಾರಣ ಇಡೀ ಸರ್ಕಾರವನ್ನೇ ಪತನಗೊಳಿಸಿತ್ತು. ಆದರೆ ಇದೀಗ ಮತ್ತೆ ಜಿಲ್ಲಾ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಮುಂದುವರೆದಿದ್ದು, ಯಾವೆಲ್ಲ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss