Hubli News: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅಭಿವೃದ್ಧಿಯ ಹೊಸ ಯೋಜನೆಗಳಿಗೆ ಮುಂದಾಗಿರುವ ವೇಳೆ, ಮಹಾನಗರ ಪಾಲಿಕೆ ಮಾತ್ರ ಗಡಿ ಗುರುತು ಮತ್ತು ವ್ಯಾಪ್ತಿ ವಿಸ್ತರಣೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಪಾಲಿಕೆಗೆ ಬರಬೇಕಾದ ಆದಾಯಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯದ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಅಡ್ಡಿಯಾಗಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರಾಭಿವೃದ್ಧಿಯ ಮುಂದಾಲೋಚನೆಯೊಂದಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿಕೊಂಡಿದ್ದರೆ, ಮಹಾನಗರ ಪಾಲಿಕೆ ಮಾತ್ರ ತನ್ನ ಗಡಿ ಗುರುತು ಮತ್ತು ವ್ಯಾಪ್ತಿ ವಿಸ್ತರಣೆಯ ಕುರಿತು ಇನ್ನೂ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
1988ರಲ್ಲಿ ಲೋಕಲ್ ಪ್ಲಾನಿಂಗ್ ಏರಿಯಾದಡಿ 46 ಹಳ್ಳಿಗಳನ್ನು ಒಳಗೊಂಡು 402 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಡಾ, ಇದೀಗ ಹೊಸದಾಗಿ ಮತ್ತೊಂದು 46 ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಒಟ್ಟು 92 ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಇದರೊಂದಿಗೆ ಪ್ರಾಧಿಕಾರದ ವ್ಯಾಪ್ತಿ 402 ಚದರ ಕಿಲೋಮೀಟರ್‌ನಿಂದ 757 ಚದರ ಕಿಲೋಮೀಟರ್‌ಗೆ ಏರಿಕೆಯಾಗಿದೆ.
ಸುಮಾರು 37 ವರ್ಷಗಳ ಬಳಿಕ ಹುಡಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಗಮನಾರ್ಹವಾಗಿದೆ. ಆದರೆ ಮತ್ತೊಂದೆಡೆ ಸ್ಥಳೀಯ ಜನರ ಸರ್ಕಾರವೆಂದು ಕರೆಯಲ್ಪಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತನ್ನ ಈಗಿನ 210 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ವಿಸ್ತರಿಸುವುದು ದೂರದ ಮಾತಾಗಿದ್ದು, ಗಡಿ ಗುರುತು ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ನಗರ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಪಾಲಿಕೆಯ ವ್ಯಾಪ್ತಿಯನ್ನು ಕನಿಷ್ಠ 410 ಚದರ ಕಿಲೋಮೀಟರ್ ವರೆಗೆ ವಿಸ್ತರಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹುಡಾ ಈಗಾಗಲೇ ಹೊಸ ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಭವಿಷ್ಯದ ಅಭಿವೃದ್ಧಿಗೆ ಅಡಿಪಾಯ ಹಾಕುತ್ತಿದ್ದರೆ, ಮಹಾನಗರ ಪಾಲಿಕೆ ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಪಾಲಿಕೆ ಅಧಿಕಾರಿಗಳು ಗಡಿ ಗುರುತು ಹಾಗೂ ವ್ಯಾಪ್ತಿ ವಿಸ್ತರಣೆ ಕುರಿತಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.




